ಮೆಲ್ಬೋರ್ನ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ, ಭಾರತ ವಿರೋಧ ಬರಹಗಳ ಪ್ರಕರಣಗಳನ್ನು ಭಾರತ ಗಂಭೀರವಾಗಿ ಪರಿಗಣಿಸಿದ್ದು ಕಠಿಣ ಕ್ರಮಕ್ಕೆ ಒತ್ತಾಯಿಸಿದೆ. ಈ ತಿಂಗಳಾರಂಭದಲ್ಲಿ ಮೆಲ್ಬೋರ್ನ್‌ನ ಸ್ವಾಮಿನಾರಾಯಣ ದೇವಸ್ಥಾನ, ವಿಕ್ಟೋರಿಯಾಸ್ ಕ್ಯಾರಂ ಡೌನ್ಸ್‌ನಲ್ಲಿರುವ ಐತಿಹಾಸಿಕ ಶ್ರೀ ಶಿವ ವಿಷ್ಣು ದೇವಸ್ಥಾನ ಮತ್ತು ಮೆಲ್ಬೋರ್ನ್‌ನ ಇಸ್ಕಾನ್ ದೇವಸ್ಥಾನವನ್ನು ದುಷ್ಕರ್ಮಿಗಳು ಹಾನಿಗೊಳಿಸಿದ್ದಾರೆ. ‘ಇದು ಅಪಾಯಕಾರಿ’ ಬೆಳವಣಿಗೆ ಎಂದು ಕ್ಯಾನ್‌ಬೆರಾದಲ್ಲಿರುವ ಭಾರತೀಯ ಹೈಕಮಿಷನ್ ಎಚ್ಚರಿಸಿದೆ.
"ಈ ಘಟನೆಗಳು ಶಾಂತಿಯುತ ಬಹುನಂಬಿಕೆ ಮತ್ತು ಬಹುಸಂಸ್ಕೃತಿಯ ಭಾರತೀಯ-ಆಸ್ಟ್ರೇಲಿಯನ್ ಸಮುದಾಯದ ನಡುವೆ ದ್ವೇಷ ಮತ್ತು ವಿಭಜನೆಯ ಮನೋಭಾವನೆ ಬಿತ್ತುವ ಸ್ಪಷ್ಟ ಪ್ರಯತ್ನ. ಆಸ್ಟ್ರೇಲಿಯಾದಲ್ಲಿ ತಮ್ಮ ಚಟುವಟಿಕೆಗಳನ್ನು ಖಲಿಸ್ತಾನ್ ಬೆಂಬಲಿಗರು ತೀವ್ರಗೊಳಿಸಿದ್ದಾರೆ. ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಮತ್ತು ಇತರ ಭಯೋತ್ಪಾದಕ ಸಂಘಟನೆಗಳು ಇಂತಹ ಪ್ರಕರಣಗಳಿಗೆ ಸಕ್ರಿಯ ಸಹಾಯ, ಪ್ರೋತ್ಸಾಹ ನೀಡುತ್ತಿವೆ" ಎಂದು ಹೈಕಮಿಷನ್ ಹೇಳಿದೆ. ದುಷ್ಕರ್ಮಿಗಳನ್ನು ನ್ಯಾಯಾಂಗದ ಕಟಕಟೆಗೆ ತರುವುದು ಮಾತ್ರವಲ್ಲದೇ ಮುಂದೆ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ಹೈಕಮಿಷನ್ ತಿಳಿಸಿದೆ.
ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯ, ಅವರ ಆಸ್ತಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭಾರತದ ಪ್ರಾದೇಶಿಕ ಸಮಗ್ರತೆ, ಭದ್ರತೆ, ರಾಷ್ಟ್ರೀಯ ಹಿತಾಸಕ್ತಿಗಳಿಗೆ ಹಾನಿಯಾಗುವ ಚಟುವಟಿಕೆಗಳಿಗೆ ಆಸ್ಟ್ರೇಲಿಯಾವನ್ನು ಬಳಸಲು ಅನುಮತಿಸದಂತೆ ಹೈಕಮಿಷನ್ ಆಸ್ಟ್ರೇಲಿಯಾ ಸರ್ಕಾರವನ್ನು ಆಗ್ರಹಿಸಿದೆ. ನವದೆಹಲಿಯಲ್ಲಿರುವ ಆಸ್ಟ್ರೇಲಿಯಾದ ಹೈಕಮಿಷನ್ ಕೂಡ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದೆ.
ಭಾರತದಲ್ಲಿನ ಆಸ್ಟ್ರೇಲಿಯಾ ಹೈಕಮಿಷನರ್ ಬ್ಯಾರಿ ಓ'ಫಾರೆಲ್ ಅವರು ಇತ್ತೀಚೆಗೆ ಟ್ವೀಟ್ ಮಾಡಿದ್ದು, ಭಾರತದಂತೆ ಆಸ್ಟ್ರೇಲಿಯಾವು ಬಹುಸಂಸ್ಕೃತಿಯ ದೇಶ. ಮೆಲ್ಬೋರ್ನ್‌ನಲ್ಲಿರುವ ಹಿಂದೂ ದೇವಾಲಯಗಳಲ್ಲಿ ನಡೆದ ವಿಧ್ವಂಸಕ ಕೃತ್ಯದಿಂದ ನಾವು ಆಘಾತಕ್ಕೊಳಗಾಗಿದ್ದೇವೆ. ಆಸ್ಟ್ರೇಲಿಯಾದ ಅಧಿಕಾರಿಗಳು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ನಾವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಲವಾಗಿ ಬೆಂಬಲಿಸುತ್ತೇವೆ. ಆದರೆ ಅದು ದ್ವೇಷದ ಮಾತು ಅಥವಾ ಹಿಂಸೆಯನ್ನು ಒಳಗೊಂಡಿಲ್ಲ ಎಂದು ತಿಳಿಸಿದ್ದರು.
ಶಾಂತಿಯುತವಾಗಿ ನೆಲೆಸಿರುವ ಹಿಂದೂ ಸಮುದಾಯದ ವಿರುದ್ಧ ನಡೆಸುವ ಇಂತಹ ವಿಧ್ವಂಸಕ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಹಿಂದೂ ಸಮಾಜ ಇದನ್ನು ಸಹಿಸಿಕೊಳ್ಳಬಾರದು. ಖಲಿಸ್ತಾನ್ ಪ್ರಚಾರಕ್ಕಾಗಿ ಈ ಕೃತ್ಯ ಎಸಗಲಾಗಿದೆ ಎಂದು ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾದ ವಿಕ್ಟೋರಿಯಾ ವಿಭಾಗದ ಅಧ್ಯಕ್ಷ ಮಕರಂದ್ ಭಾಗವತ್ ಹೇಳಿದ್ದಾರೆ. ಜನವರಿ 12ರಂದು ಮೆಲ್ಬೋರ್ನ್‌ನಲ್ಲಿರುವ ಸ್ವಾಮಿನಾರಾಯಣ ದೇಗುಲಕ್ಕೆ ಹಾನಿ ಮಾಡಲಾಗಿತ್ತು. ದೇಗುಲದ ಗೋಡೆಗಳ ಮೇಲೆ ಭಾರತ ವಿರೋಧಿ, ಹಿಂದೂ ವಿರೋಧಿ ಬರಹಗಳನ್ನು ಬರೆಯಲಾಗಿತ್ತು. ಪದೇ ಪದೇ ಹಿಂದೂ ದೇವಾಲಯಗಳ ಮೇಲೆ ಹಾನಿ ಆಗುತ್ತಿರುವುದನ್ನು ಸಹಿಸದ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿ, ಕ್ರಮಕ್ಕೆ ಆಗ್ರಹಿಸಿದೆ.
ಇದನ್ನೂ ಓದಿ: 18ರ ಚಿರಯುವಕನ ದೇಹ ಹೊಂದಲು ವರ್ಷಕ್ಕೆ 2 ಮಿಲಿಯನ್ ಡಾಲರ್ ಖರ್ಚು ಮಾಡುತ್ತಿರುವ 45ರ ಸಿಇಒ!