ನವದೆಹಲಿ: 1948ರಲ್ಲಿ ಶ್ರೀಲಂಕಾ ದೇಶವು ಸ್ವತಂತ್ರವಾದ ನಂತರ ಅತ್ಯಂತ ಕೆಟ್ಟ ಆರ್ಥಿಕ ದುಸ್ಥಿತಿಯಿಂದ ಬಳಲುತ್ತಿದೆ. ದೇಶದಲ್ಲೆಡೆ ಜನ ದಂಗೆ ಎದ್ದಿದ್ದು, ಪ್ರತಿಭಟನೆಗಳು ನಡೆಯುತ್ತಿವೆ. ಕೊಲಂಬೊದಲ್ಲಿರುವ ಅಧ್ಯಕ್ಷರ ಅರಮನೆಗೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿರುವುದನ್ನೆಲ್ಲ ಧ್ವಂಸ ಮಾಡಿದ್ದಾರೆ. ಪ್ರಧಾನಿ ರನಿಲ್ ವಿಕ್ರಮಸಿಂಘೆ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ.
ಆದರೆ, ಇಂಥ ಅತ್ಯಂತ ಬಿಕ್ಕಟ್ಟಿನ ಸ್ಥಿತಿಯಲ್ಲಿಯೂ ಭಾರತ ದೇಶವು ಶ್ರೀಲಂಕಾದ ಬೆನ್ನಿಗೆ ನಿಂತಿದೆ. ಕಳೆದ ಕೆಲ ವರ್ಷಗಳಲ್ಲಿ ಚೀನಾ ಶ್ರೀಲಂಕಾದ ಮೇಲೆ ಹೆಚ್ಚು ಪ್ರಭಾವ ಬೀರಲು ಯಶಸ್ವಿಯಾಗಿತ್ತು. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಭಾರತವು ಶ್ರೀಲಂಕಾಗೆ ಸಾಕಷ್ಟು ಸಹಾಯ ಮಾಡುತ್ತಿದ್ದು, ಅಲ್ಲಿನ ಜನರಿಗೆ ಮತ್ತೆ ಹತ್ತಿರವಾಗುತ್ತಿದೆ.
"ಭಾರತವು ಶ್ರೀಲಂಕಾಗೆ ನೀಡಿದ ಅಭೂತಪೂರ್ವ ಸಹಾಯಹಸ್ತ ಶ್ಲಾಘನೀಯವಾಗಿದೆ. ಕಳೆದ ವರ್ಷ ಲಂಕಾ ತನ್ನ ದೇಶದಲ್ಲಿ ರಾಸಾಯನಿಕ ರಸಗೊಬ್ಬರಗಳನ್ನು ನಿಷೇಧ ಮಾಡಿತ್ತು ಹಾಗೂ ಸಾವಯವ ಗೊಬ್ಬರಗಳಿಗೆ ಮಾತ್ರ ಅವಕಾಶ ನೀಡಿತ್ತು. ಆಗ ಲಂಕಾ ಆಮದು ಮಾಡಿಕೊಂಡ ಸಾವಯವ ಗೊಬ್ಬರ ಕಳಪೆಯಾಗಿತ್ತು ಮಾತ್ರವಲ್ಲದೆ, ಅದಕ್ಕೆ ಪಾವತಿಸಲಾದ ದುಡ್ಡು ಸಹ ವಾಪಸ್ ಬಂದಿರಲಿಲ್ಲ. ಆ ಸಮಯದಲ್ಲಿ ಶ್ರೀಲಂಕಾಗೆ ಸಾವಯವ ಗೊಬ್ಬರ ಕಳಿಸಿದ್ದು ಭಾರತ. ಭಾರತವು ಶ್ರೀಲಂಕಾಗೆ ದೀರ್ಘಾವಧಿ ಸಾಲ ಮಾತ್ರವಲ್ಲದೆ 400 ಮಿಲಿಯನ್ ಡಾಲರ್ ನೆರವನ್ನು ನೀಡಿದೆ. ಔಷಧಿ, ಇಂಧನ, ಡೀಸೆಲ್ ಮತ್ತು ಮತ್ತೊಂದು ಸುತ್ತಿನ ಸಾವಯವ ಗೊಬ್ಬರಗಳನ್ನು ಕಳುಹಿಸುತ್ತಿದೆ. ಆದರೆ, ಈ ಸಮಯದಲ್ಲಿ ಚೀನಾ ಬಾಯಿಮಾತಿನಲ್ಲಿ ಸಾಂತ್ವನ ಹೇಳುವುದನ್ನು ಬಿಟ್ಟರೆ ಏನನ್ನೂ ಮಾಡಿಲ್ಲ." ಎಂದು ಶ್ರೀಲಂಕಾದಲ್ಲಿ ಭಾರತದ ರಾಯಭಾರಿಯಾಗಿದ್ದ ಜಿತೇಂದ್ರ ತ್ರಿಪಾಠಿ.
ಮುಂದಿನ ದಿನಗಳಲ್ಲಿ ಭಾರತ ಮತ್ತು ಶ್ರೀಲಂಕಾ ಸಂಬಂಧಗಳು ಉತ್ತಮಗೊಳ್ಳಲಿವೆ. ಶ್ರೀಲಂಕಾದ ರಾಜಕಾರಣಿಗಳು ಮತ್ತು ಸಾರ್ವಜನಿಕರು ತಾವು ಚೀನಾ ಕುತಂತ್ರಕ್ಕೆ ಬಲಿಯಾಗಿರುವುದನ್ನು ಅರಿತುಕೊಂಡಿದ್ದಾರೆ. ಸದ್ಯದ ಸಂಕಷ್ಟದ ಸಮಯದಲ್ಲಿ ಚೀನಾದ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ಹೀಗಾಗಿ ಭಾರತವು ಹಿರಿಯ ನಾಯಕನ ಸ್ಥಾನವನ್ನು ನಿಭಾಯಿಸುತ್ತಿದೆ ಎನ್ನುತ್ತಾರೆ ತ್ರಿಪಾಠಿ.