ನ್ಯೂಯಾರ್ಕ್: ಬಲಪ್ರಯೋಗದಿಂದ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುವ ಯಾವುದೇ ಬಲವಂತದ ಅಥವಾ ಏಕಪಕ್ಷೀಯ ಕ್ರಮವು ಸಾಮಾನ್ಯ ಭದ್ರತೆಯನ್ನು ದುರ್ಬಲಗೊಳಿಸುತ್ತದೆ ಎಂದು ಭಾರತ ಸೋಮವಾರ ಒತ್ತಿಹೇಳಿದೆ. ಚೀನಾ ತೈವಾನ್ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಈ ವಿಷಯವನ್ನು ಪ್ರತಿಪಾದಿಸಿದೆ.
ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ನಿರ್ವಹಣೆ: ಮಾತುಕತೆ ಮತ್ತು ಸಹಕಾರದ ಮೂಲಕ ಸಾಮಾನ್ಯ ಭದ್ರತೆಯ ಉತ್ತೇಜನ ವಿಷಯದ ಮೇಲೆ ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್, ಯಥಾಸ್ಥಿತಿಯನ್ನು ಬಲವಂತವಾಗಿ ಬದಲಾಯಿಸಲು ಪ್ರಯತ್ನಿಸುವ ಯಾವುದೇ ದಬ್ಬಾಳಿಕೆಯ ಅಥವಾ ಏಕಪಕ್ಷೀಯ ಕ್ರಮವು ಸಾಮಾನ್ಯ ಭದ್ರತೆಗೆ ಪ್ರತಿಕೂಲಕರವಾಗಿರಲಿದೆ ಎಂದು ಹೇಳಿದರು.
ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಚೀನಾದ ಇಚ್ಛೆಗೆ ವಿರುದ್ಧವಾಗಿ ತೈವಾನ್‌ಗೆ ಭೇಟಿ ನೀಡಿದ ನಂತರ, ಬೀಜಿಂಗ್ ದೊಡ್ಡ ಪ್ರಮಾಣದ ಮಿಲಿಟರಿ ಅಭ್ಯಾಸಗಳನ್ನು ನಡೆಸಲು ಪ್ರಾರಂಭಿಸಿತು ಮತ್ತು ಸ್ವಯಂ ಆಳ್ವಿಕೆಯಲ್ಲಿರುವ ತೈವಾನ್ ದ್ವೀಪವನ್ನು ಸ್ವಾಧೀನಪಡಿಸಿಕೊಳ್ಳುವ ಬೆದರಿಕೆ ಒಡ್ಡಿತು. ಈ ಹಿಂದೆಯೂ, ಚೀನಾ ಮತ್ತು ತೈವಾನ್ ನಡುವೆ ಹೆಚ್ಚುತ್ತಿರುವ ಮಿಲಿಟರಿ ಉದ್ವಿಗ್ನತೆಯ ಮಧ್ಯೆ ತೈವಾನ್ ಜಲಸಂಧಿಯಲ್ಲಿನ ಯಥಾಸ್ಥಿತಿಯನ್ನು ಬದಲಾಯಿಸಲು ಏಕಪಕ್ಷೀಯ ಕ್ರಮಗಳನ್ನು ಕೈಗೊಳ್ಳದಂತೆ ಭಾರತ ಒತ್ತಾಯಿಸಿತ್ತು.
ಈ ಕುರಿತು ಸಾಪ್ತಾಹಿಕ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಇತರ ಹಲವು ದೇಶಗಳಂತೆ ಭಾರತವೂ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ನಾವು ಸಂಯಮ ಕಾಪಾಡಿಕೊಳ್ಳುವುದಕ್ಕೆ ಒತ್ತು ನೀಡುತ್ತಿದ್ದು, ಯಥಾಸ್ಥಿತಿಯನ್ನು ಬದಲಾಯಿಸುವಂಥ ಏಕಪಕ್ಷೀಯ ಕ್ರಮಗಳನ್ನು ತಪ್ಪಿಸುವುದು, ಉದ್ವಿಗ್ನತೆಯನ್ನು ಕಡಿಮೆ ಮಾಡುವುದು ಮತ್ತು ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಪ್ರಯತ್ನಗಳಿಗೆ ಬೆಂಬಲ ನೀಡುತ್ತೇವೆ ಎಂದು ಬಾಗ್ಚಿ ತಿಳಿಸಿದರು.
ದೇಶಗಳು ಪರಸ್ಪರರ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿದಾಗ ಮಾತ್ರ ಸಾಮಾನ್ಯ ಭದ್ರತೆ ಸಾಧ್ಯ. ಏಕೆಂದರೆ ದೇಶಗಳು ಪರಸ್ಪರ ತಮ್ಮ ಸಾರ್ವಭೌಮತ್ವವನ್ನು ಗೌರವಿಸಬೇಕೆಂದು ನಿರೀಕ್ಷಿಸುತ್ತವೆ ಎಂದು ವಿಶ್ವಸಂಸ್ಥೆಯಲ್ಲಿ ಪ್ರತಿನಿಧಿ ರುಚಿರಾ ಕಾಂಬೋಜ್ ತಿಳಿಸಿದರು.