ಜೆರುಸಲೆಂ: ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ಹಮಾಸ್ ಉಗ್ರರ ನಡುವಿನ ಸಂಘರ್ಷ ಕಳೆದ 19 ದಿನಗಳಿಂದ ನಡೆಯುತ್ತಿದ್ದು, ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ತನ್ನ ವೈಮಾನಿಕ ದಾಳಿಯನ್ನು ಮುಂದುವರೆಸಿದೆ. ವೈಮಾನಿಕ ದಾಳಿಯಿಂದಾಗಿ ಗಾಜಾಪಟ್ಟಿಯ ಹಲವು ಪ್ರದೇಶಗಳು ಧ್ವಂಸಗೊಂಡಿದೆ. ಇದರಿಂದಾಗಿ ಗಾಜಾ ಪಟ್ಟಿಯಲ್ಲಿ ಯುದ್ಧದಿಂದಾಗಿ ನಿರಾಶ್ರಿತರಾಗಿರುವ ಜನರಿಗೆ ಪರಿಹಾರ ಒದಗಿಸುವ ಕಾರ್ಯಕ್ಕೆ ಅಡ್ಡಿ ಉಂಟಾಗಿದೆ. ವೈಮಾನಿಕ ದಾಳಿಯಿಂದಾಗಿ ಗಾಜಾಪಟ್ಟಿಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.
ಬುಧವಾರ ನುಸ್ಸೆರಾತ್ ನಿರಾಶ್ರಿತ ಶಿಬಿರದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಅಜ್ಜಜೀರಾ ಸುದ್ದಿ ಸಂಸ್ಥೆಯ ಮುಖ್ಯ ವರದಿಗಾರರಾದ ವೇಲ್ ದಹದೌದ್ ಅವರ ಕುಟುಂಬ ಸದಸ್ಯರೊಬ್ಬರು ಮೃತಪಟ್ಟಿದ್ದಾರೆ. ವೈಮಾನಿಕ ದಾಳಿಯಿಂದಾಗಿ ಗಾಜಾಪಟ್ಟಿಯಲ್ಲಿ ಹಲವು ಮನೆಗಳು ಸಂಪೂರ್ಣ ನಾಶವಾಗಿದೆ. ವೈಮಾನಿಕ ದಾಳಿ ನಡುವೆಯೂ ಪ್ಯಾಲೆಸ್ಟೇನ್ಗೆ ಆರೋಗ್ಯ ಸೌಲಭ್ಯಗಳನ್ನು ಪೂರೈಸುವ ಕಾರ್ಯ ನಡೆಯುತ್ತಿದೆ. ಆದರೆ, ಹೆಚ್ಚಿದ ದಾಳಿಯಿಂದಾಗಿ ಗಾಜಾ ಪಟ್ಟಿಯಲ್ಲಿ ನಮ್ಮ ಪರಿಹಾರ ಕಾರ್ಯಾಚರಣೆಯನ್ನು ಮೊಟಕುಗೊಳಿಸಲಾಗಿದೆ ಎಂದು ವಿಶ್ವಸಂಸ್ಥೆಯ ಏಜೆನ್ಸಿ ತಿಳಿಸಿದೆ.
ಹಮಾಸ್ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಂತೆ, ಇಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ 6,546 ಪ್ಯಾಲೆಸ್ಟೇನಿಯರನ್ನು ಹತ್ಯೆ ಮಾಡಲಾಗಿದೆ. ಒಟ್ಟು 17,439 ಮಂದಿ ಗಾಯಗೊಂಡಿದ್ದಾರೆ. ಇಲ್ಲಿನ ವೆಸ್ಟ್ ಬ್ಯಾಂಕ್ನಲ್ಲಿ ನೂರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 1650 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ.
ಇಸ್ರೇಲ್ನಲ್ಲಿ ಹಮಾಸ್ ದಾಳಿಯಿಂದಾಗಿ ಸುಮಾರು 1400ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಮಾಸ್ ಉಗ್ರರು 222 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಇದರಲ್ಲಿ ವಿದೇಶಿಗರು ಸೇರಿದ್ದಾರೆ ಎಂದು ಹೇಳಿದೆ. ಈಗಾಗಲೇ ಹಮಾಸ್ ನಾಲ್ವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ.
ಇಸ್ರೇಲ್ -ಹಮಾಸ್ ಸಂಘರ್ಷದ ಇತ್ತೀಚಿನ ವಿದ್ಯಮಾನಗಳು :
1) ಅಲ್ಜಜೀರಾ ಗಾಜಾದ ಮುಖ್ಯ ವರದಿಗಾರ ವೈಮಾನಿಕ ದಾಳಿಯಲ್ಲಿ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ.
2) ಹಮಾಸ್ ಉಗ್ರರನ್ನು ಬೆಂಬಲಿಸುವ ಪ್ಯಾಲೇಸ್ಟೆನಿಯನ್ ಪರ ವಿದ್ಯಾರ್ಥಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ರಾಜ್ಯ ವಿಶ್ವವಿದ್ಯಾಲಯಗಳಿಗೆ ಫ್ಲೋರಿಡಾ ಸೂಚಿಸಿದೆ.
3) ವೆಸ್ಟ್ ಬ್ಯಾಂಕ್ನಲ್ಲಿ ಪ್ಯಾಲೆಸ್ಟೆನಿಯರ ವಿರುದ್ಧ ಇಸ್ರೇಲ್ ವೈಮಾನಿಕ ದಾಳಿ ನಡೆಸುತ್ತಿರುವುದನ್ನು ಅಮೆರಿಕ ಅಧ್ಯಕ್ಷ ಜೊ ಬೈಡನ್ ಖಂಡಿಸಿದ್ದಾರೆ.
4) ಲೆಬನಾನ್ ಹಿಜ್ಬುಲ್ಲಾ ಸಂಘಟನೆಯ ಮುಖ್ಯಸ್ಥ ಹಮಾಸ್ ಮತ್ತು ಪ್ಯಾಲೆಸ್ಟೇನ್ ಉನ್ನತ ಮುಸ್ಲಿಂ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ.
5) ಯುಎನ್ ಮುಖ್ಯಸ್ಥರು ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಇಸ್ರೇಲ್ ಕಿಡಿ ಕಾರಿದೆ.
6) ಯುಎನ್ ಸೆಕ್ಯುರಿಟಿ ಕೌನ್ಸಿಲ್ ಇಸ್ರೇಲ್- ಹಮಾಸ್ ಯುದ್ಧದ ಬಗ್ಗೆ ನಿರ್ಣಯವನ್ನು ಕೈಗೊಳ್ಳಲು ವಿಫಲವಾಗಿದೆ.
7) ಇರಾಕ್‌ನ ಬಾಗ್ದಾದ್ ಸಂಘಟನೆ ಬುಧವಾರ ಪೂರ್ವ ಸಿರಿಯಾದಲ್ಲಿ ಅಮೆರಿಕ ಪಡೆಗಳ ಮಿಲಿಟರಿ ನೆಲೆಯ ಮೇಲೆ ದಾಳಿ ನಡೆಸಿರುವುದಾಗಿ ಹೇಳಿದೆ. ಇರಾಕ್ ಮತ್ತು ಸಿರಿಯಾದಲ್ಲಿನ ಯುಎಸ್ ಮಿಲಿಟರಿ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ತಿಳಿಸಿದೆ.
8)ಗಾಜಾ ಪಟ್ಟಿಯಲ್ಲಿ ಬುಧವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 26 ಮಂದಿ ಸಾವನ್ನಪ್ಪಿದ್ದಾರೆ ಮತ್ತು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹಮಾಸ್ ತಿಳಿಸಿದೆ.
9) ಹಮಾಸ್ ದಾಳಿಯ ಹೊಣೆಗಾರಿಕೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ವಹಿಸಿಕೊಂಡಿದ್ದಾರೆ.
ಇಟಲಿಯ ಪ್ರಧಾನಿ ಭೇಟಿ ಮಾಡಿದ ಇಸ್ರೇಲಿಗರ ಕುಟುಂಬಸ್ಥರು : ಹಮಾಸ್ನಿಂದ ಒತ್ತೆಯಾಳಾಗಿರುವ ಮತ್ತು ಹತ್ಯೆಗೊಳಗಾದ ಇಸ್ರೇಲಿಗರ ಕುಟುಂಬಸ್ಥರು ಬುಧವಾರ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರನ್ನು ಭೇಟಿ ಮಾಡಿದರು. ಈ ವೇಳೆ ತಮ್ಮ ಕುಟುಂಬಸ್ಥರನ್ನು ರಕ್ಷಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಇದನ್ನೂ ಓದಿ : 'ಶತ್ರುಗಳ ಶಿರಚ್ಛೇದದ ಹೊರತು ಬೇರೆ ಚಿಕಿತ್ಸೆ ಇಲ್ಲ': ಹಮಾಸ್ ಉಗ್ರರ ಟಿಪ್ಪಣಿ ಬಿಡುಗಡೆ ಮಾಡಿದ ಇಸ್ರೇಲ್