ಢಾಕಾ (ಬಾಂಗ್ಲಾದೇಶ): ಪಶ್ಚಿಮ ಬಾಂಗ್ಲಾದೇಶದ ಹಿಂದೂ ದೇವಾಲಯದಲ್ಲಿ ಅಪರಿಚಿತ ದುಷ್ಕರ್ಮಿಗಳು ದೇವರ ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ. ದೇವಾಲಯದ ಆವರಣದಿಂದ ಅರ್ಧ ಕಿಲೋಮೀಟರ್ ದೂರದ ರಸ್ತೆಯಲ್ಲಿ ದೇವರ ಮೂರ್ತಿಯು ಬಿದ್ದಿದ್ದು, ಸ್ಥಳೀಯ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬಾಂಗ್ಲಾದೇಶದಲ್ಲಿ 10 ದಿನಗಳ ಕಾಲ ದುರ್ಗಾ ಪೂಜೆ ಉತ್ಸವಗಳು ನಡೆದಿವೆ. ದೇಶಾದ್ಯಂತ ವಿವಿಧ ನದಿ ಘಾಟ್‌ಗಳಲ್ಲಿ ವಿಜಯದಶಮಿಯಂದು ದೇವತೆಯ ವಿಗ್ರಹಗಳ ನಿಮಜ್ಜನದೊಂದಿಗೆ ಉತ್ಸವಗಳು ಮುಕ್ತಾಯಗೊಂಡಿದೆ. ಇದಾದ 24 ಗಂಟೆಗಳಲ್ಲಿ ಎಂದರೆ ಶುಕ್ರವಾರ ರಾತ್ರಿ ಜೆನೈದಾ ಪ್ರದೇಶದಲ್ಲಿ ಕಾಳಿ ದೇವಿಯ ವಿಗ್ರಹ ಧ್ವಂಸಗೊಳಿಸಲಾಗಿದೆ.
ಈ ಕಾಳಿ ದೇವಸ್ಥಾನವು ಹಿಂದೂಗಳ ಆರಾಧನೆಯ ಸ್ಥಳವಾಗಿತ್ತು. ರಾತ್ರಿ ದೇವಿ ವಿಗ್ರಹವು ಒಡೆದು ಹಾಕಲಾಗಿದ್ದು, ಅರ್ಧ ಕಿಲೋಮೀಟರ್ ದೂರದ ರಸ್ತೆಯಲ್ಲಿ ವಿಗ್ರಹದ ತಲೆ ಭಾಗ ಪತ್ತೆಯಾಗಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಸುಕುಮಾರ್ ಕುಂದಾ ಹಾಗೂ ಬಾಂಗ್ಲಾದೇಶದ ಪೂಜಾ ಆಚರಣೆ ಮಂಡಳಿಯ ಪ್ರಧಾನ ಕಾರ್ಯದರ್ಶಿ ಚಂದನಾಥ್ ಪೊದ್ದಾರ್ ತಿಳಿಸಿದ್ದಾರೆ.
ಢಾಕಾ ವಿಶ್ವವಿದ್ಯಾಲಯದ ಗಣಿತ ಪ್ರಾಧ್ಯಾಪಕರು ಆಗಿರುವ ಚಂದನಾಥ್ ಪೊದ್ದಾರ್, ಇದು ದುರದೃಷ್ಟಕರ ಘಟನೆ. ಏಕೆಂದರೆ ಹತ್ತು ದಿನಗಳ ಉತ್ಸವವನ್ನು ಯಾವುದೇ ಅಡ್ಡಿಯಿಲ್ಲದೆ ದೇಶಾದ್ಯಂತ ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ. ಇತ್ತ, ಜೆನೈದಾ ಪೊಲೀಸ್ ಸಹಾಯಕ ಅಧೀಕ್ಷಕ ಅಮಿತ್ ಕುಮಾರ್ ಬರ್ಮನ್ ಮಾತನಾಡಿ, ಈ ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಶಂಕಿತ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಘಟನೆಯನ್ನು ಹೊರತುಪಡಿಸಿ ಈ ವರ್ಷ ಬಾಂಗ್ಲಾದೇಶದಾದ್ಯಂತ ದುರ್ಗಾ ಪೂಜೆ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲಾಗಿದೆ. ಇನ್ನು, ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶದ 16.9 ಕೋಟಿ ಜನಸಂಖ್ಯೆಯಲ್ಲಿ ಸುಮಾರು ಶೇ.10ರಷ್ಟು ಹಿಂದೂಗಳು ಇದ್ದಾರೆ.
ಇದನ್ನೂ ಓದಿ:ಗುಜರಾತ್ನಲ್ಲಿ ಅಕ್ರಮ ಮಸೀದಿ ಕಟ್ಟಡ ತೆರವು.. ಭುಗಿಲೆದ್ದ ಪ್ರತಿಭಟನೆ, ಐವರು ಪೊಲೀಸರಿಗೆ ಗಾಯ