ಮನಿಲಾ: ಉತ್ತರ ಫಿಲಿಪ್ಪೀನ್ಸ್‌ನಲ್ಲಿ ಬುಧವಾರ ಪ್ರಬಲ ಭೂಕಂಪನ ಉಂಟಾಗಿದೆ. ಇದರಿಂದ ಭೂಮಿ ಗಢಗಢ ನಡುಗಿ ಕಟ್ಟಡಗಳಿಗೆ ಹಾನಿ ಉಂಟಾಗಿದೆ. ಪ್ರಾಣ ಹಾನಿ ಬಗ್ಗೆ ಇನ್ನೂ ವರದಿಯಾಗಿಲ್ಲ.
ಅಬ್ರಾ ಪ್ರಾಂತ್ಯದ ಸುತ್ತಲೂ ಭೂಕಂಪನ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲಾಗಿದೆ. ಭೂಮಿ ಕಂಪಿಸಿದಾಗ ಜನರು ಕಟ್ಟಡಗಳಿಂದ ಓಡಿ ರಸ್ತೆಗೆ ಬಂದಿದ್ದಾರೆ. ವಿಪರೀತ ನಡುಕದಿಂದ ಜನರು ಆಘಾತಗೊಂಡಿದ್ದರು. ಬಳಿಕ ಹಲವಾರು ಕಟ್ಟಡಗಳಿಗೆ ಹಾನಿಯುಂಟಾಗಿದೆ ಎಂದು ಫಿಲಿಪ್ಪೀನ್ಸ್ ಜ್ವಾಲಾಮುಖಿ ಮತ್ತು ಭೂಕಂಪನಶಾಸ್ತ್ರ ತಿಳಿಸಿದೆ.
25 ಕಿಲೋಮೀಟರ್ ಆಳದವರೆಗೂ ಕಂಪನದ ತೀವ್ರತೆ ಕಂಡು ಬಂದಿದೆ. ಬಲವಾದ ನಡುಗುವಿಕೆಯಿಂದಾಗಿ ಹಲವೆಡೆ ಹೆಚ್ಚಿನ ಹಾನಿ ಸಂಭವಿಸಿರಬಹುದು. ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬಲವಾದ ಕಂಪನದಿಂದಾಗಿ ಕಟ್ಟಡಗಳು ಮತ್ತು ಮನೆಗಳಲ್ಲಿ ಬಿರುಕು ಉಂಟಾದ ಬಗ್ಗೆ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫಿಲಿಪ್ಪೀನ್ಸ್ ಪೆಸಿಫಿಕ್ ಮಹಾಸಾಗರದ ಉದ್ದಕ್ಕೂ ಹರಡಿಕೊಂಡಿದೆ. ಇಲ್ಲಿ ಪ್ರಪಂಚದಲ್ಲಿಯೇ ಹೆಚ್ಚಿನ ಭೂಕಂಪಗಳು ಸಂಭವಿಸುತ್ತವೆ. ಪ್ರತಿ ವರ್ಷ ಸುಮಾರು 20 ಸುನಾಮಿಗಳು ಮತ್ತು ಉಷ್ಣ ಬಿರುಗಾಳಿ ಅಪ್ಪಳಿಸುತ್ತದೆ. ಇದು ವಿಶ್ವದ ಅತ್ಯಂತ ವಿಪತ್ತುಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. 1990ರಲ್ಲಿ ಉತ್ತರ ಫಿಲಿಪ್ಪೀನ್ಸ್‌ನಲ್ಲಿ 7.7 ತೀವ್ರತೆಯ ಭೂಕಂಪನವು 2 ಸಾವಿರಕ್ಕೂ ಅಧಿಕ ಜನರನ್ನು ಆಪೋಷನ ಪಡೆದಿತ್ತು.
ಇದನ್ನೂ ಓದಿ: ಮೂರುವರೆ ಸಾವಿರ ಕೋಟಿ ರೂಪಾಯಿ ಕರೆಂಟ್ ಬಿಲ್ ನೋಡಿ ಆಸ್ಪತ್ರೆ ಸೇರಿದ ಮಾವ-ಸೊಸೆ