ನ್ಯೂಯಾರ್ಕ್: ಭಯೋತ್ಪಾದನೆಯ ಅಪರಾಧಿಗಳನ್ನು ಸಮರ್ಥಿಸಲು ಮತ್ತು ರಕ್ಷಿಸಲು ಬಹುಪಕ್ಷೀಯ ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಬುಧವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ಮತ್ತು ಅದರ ನಿಕಟ ಮಿತ್ರ ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿದರು.
ಪಾಕಿಸ್ತಾನ ವಿರುದ್ಧ ಭಾರತ ವಾಗ್ದಾಳಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದಕ್ಕಾಗಿ ಭಾರತ ಬುಧವಾರ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿತು. ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್‌ಗೆ ಆತಿಥ್ಯ ವಹಿಸಿದ ಮತ್ತು ನೆರೆಯ ದೇಶದ ಸಂಸತ್ತಿನ ಮೇಲೆ ದಾಳಿ ಮಾಡಿದ ದೇಶವು ವಿಶ್ವಸಂಸ್ಥೆಯಲ್ಲಿ 'ಬೋಧನೆ' ಮಾಡುವ ಅರ್ಹತೆಯನ್ನು ಹೊಂದಿಲ್ಲ ಎಂದು ಜೈ ಶಂಕರ್ ಖಾರವಾಗಿ ಪ್ರತಿಕ್ರಿಯೆ ನೀಡಿದರು. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಕಾಶ್ಮೀರದ ಬಗ್ಗೆ ಹೇಳಿಕೆ ನೀಡಿದ ನಂತರ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಈ ವಿಷಯವನ್ನು ಪ್ರತಿಪಾದಿಸಿದರು.
'ಅಂತರರಾಷ್ಟ್ರೀಯ ಶಾಂತಿ, ಭದ್ರತೆ ಮತ್ತು ಸುಧಾರಿತ ಬಹುಪಕ್ಷೀಯತೆಗೆ ಹೊಸ ನಿರ್ದೇಶನ' ಎಂಬ ವಿಷಯದ ಕುರಿತು ಮುಕ್ತ ಚರ್ಚೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೈಶಂಕರ್, 'ನಾವು ಇಂದು ಬಹುಪಕ್ಷೀಯತೆಯನ್ನು ಸುಧಾರಿಸುವ ಕುರಿತು ಸ್ಪಷ್ಟವಾಗಿ ಗಮನಹರಿಸುತ್ತಿದ್ದೇವೆ. ಸ್ವಾಭಾವಿಕವಾಗಿ ನಾವು ನಮ್ಮದೇ ಆದ ನಿರ್ದಿಷ್ಟ ಅಭಿಪ್ರಾಯಗಳನ್ನು ಹೊಂದಿರುತ್ತೇವೆ ಎಂದರು.
ಒಸಾಮಾ ಬಿನ್ ಲಾಡೆನ್‌ಗೆ ಆತಿಥ್ಯ ನೀಡುವುದು ಮತ್ತು ನೆರೆಯ ದೇಶದ ಸಂಸತ್ತಿನ ಮೇಲೆ ದಾಳಿ ಮಾಡಿದ ದೇಶದ ಬೋಧನೆಯನ್ನು ನಂಬುದು ಕಷ್ಟ. ಡಿಸೆಂಬರ್ 13, 2001 ರಂದು ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ಸಂಸತ್ತಿನ ಮೇಲೆ ದಾಳಿ ಮಾಡಿದರು. ಈ ದಾಳಿಯಲ್ಲಿ ಐವರು ದೆಹಲಿ ಪೊಲೀಸ್ ಸಿಬ್ಬಂದಿ, ಮಹಿಳಾ ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಇಬ್ಬರು ಸಂಸದರು ಹುತಾತ್ಮರಾದರು. ಅಷ್ಟೇ ಅಲ್ಲ ಒಬ್ಬ ಉದ್ಯೋಗಿ ಮತ್ತು ಕ್ಯಾಮೆರಾಮನ್ ಕೂಡ ಸಾವನ್ನಪ್ಪಿದ್ದಾರೆ ಎಂದು ಪ್ರಸ್ತಾಪಿಸಿದರು.
ಸಂಘರ್ಷವು ಬಹುಪಕ್ಷೀಯ ವೇದಿಕೆಯ ನಿಷ್ಕ್ರಿಯ ಮನೋಭಾವವನ್ನು ಹೊಂದಲು ಸಾಧ್ಯವಾಗದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಭಯೋತ್ಪಾದನೆಯ ಸವಾಲಿನ ಮೇಲೆ ಜಗತ್ತು ಹೆಚ್ಚು ಒಗ್ಗಟ್ಟಾಗಿ ಮುಂದೆ ಬರುತ್ತಿದೆ. ಆದರೆ ಪಿತೂರಿಗಾರರನ್ನು ಸಮರ್ಥಿಸಲು ಮತ್ತು ರಕ್ಷಿಸಲು ಬಹುಪಕ್ಷೀಯ ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನಂತಹ ಭಯೋತ್ಪಾದಕರನ್ನು ಪಟ್ಟಿ ಮಾಡಲು ಭಾರತ ಮತ್ತು ಅಮೆರಿಕ ಹಲವಾರು ಸಂದರ್ಭಗಳಲ್ಲಿ ನಡೆಸಿದ ಪ್ರಯತ್ನಗಳಿಗೆ ಇದು ಅಡ್ಡಿಯಾಯಿತು ಎಂದು ಅವರು ಚೀನಾ ಮತ್ತು ಪಾಕಿಸ್ತಾನದ ಮೇಲೆ ಪರೋಕ್ಷವಾಗಿ ದಾಳಿ ಮಾಡಿದರು.