ಲಾಹೋರ್ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 20 ವರ್ಷದ ಯುವತಿಯನ್ನು ಕುಟುಂಬದ ಗೌರವದ ಹೆಸರಿನಲ್ಲಿ ಸಜೀವ ದಹನ ಮಾಡಿರುವ ಘಟನೆ ನಡೆದಿದೆ. ಲಾಹೋರ್‌ನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಜಾಂಗ್ ಜಿಲ್ಲೆಯ ಗರ್ ಮಹಾರಾಜದಲ್ಲಿ ಶುಕ್ರವಾರ ಘಟನೆ ನಡೆದಿದೆ. ರಜಬ್ ಅಲಿ ಎಂಬಾತ ತನ್ನ ಮಕ್ಕಳಾದ ಜಬ್ಬಾರ್, ಅಮೀರ್ ಮತ್ತು ಇತರ ಕೆಲವು ಕುಟುಂಬ ಸದಸ್ಯರೊಂದಿಗೆ ಸೇರಿಕೊಂಡು (ಮೇ 26 ರಂದು) ತಮ್ಮ ಮಗಳನ್ನು ಸುಟ್ಟು ಹಾಕಿದ್ದಾನೆ. ಇದಕ್ಕೂ ಮುನ್ನ ಆಕೆಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ತನಿಖಾಧಿಕಾರಿ ಮುಹಮ್ಮದ್ ಅಜಮ್ ಪಾಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಪ್ರಿಯಕರನ ಭೇಟಿಯಾಗಿದ್ದ ಯುವತಿ: ಯುವತಿ ತನ್ನ ಆಯ್ಕೆಯ ಪುರುಷನನ್ನು ಮದುವೆಯಾಗಲು ಬಯಸಿದ್ದಳು. ಸಜೀವ ದಹನಕ್ಕೆ ಒಂದು ದಿನ ಹಿಂದೆ ಆಕೆ ತನ್ನ ಪ್ರಿಯಕರನ ಭೇಟಿಗಾಗಿ ಮನೆಯಿಂದ ಹೊರಟು ಹೋಗಿದ್ದಳು. ಅಲ್ಲದೇ ಅಲ್ಲಿ ಅವಳು ಆತನೊಂದಿಗೆ ಸ್ವಲ್ಪ ಸಮಯ ಕಳೆದಿದ್ದಳು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಕುಟುಂಬಕ್ಕೆ ಅಗೌರವ ತಂದಿದ್ದಾಳೆ ಎಂದು ಕುಟುಂಬದ ಸದಸ್ಯರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.
ತದನಂತರ ಸಂತ್ರಸ್ತೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ ಅದಾಗಲೇ ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಸಾವನ್ನಪ್ಪಿದ್ದಾಳೆ. ಸಾವಿಗೂ ಮುನ್ನ ಆಕೆ ತನಗೆ ಬೆಂಕಿ ಹಚ್ಚಿದವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ತಂದೆ, ಇಬ್ಬರು ಸಹೋದರರು ಮತ್ತು ಸಹೋದರಿಯನ್ನು ಬಂಧಿಸಲಾಗಿದೆ. ಬಂಧಿತರು ತಮ್ಮ ದುಷ್ಕೃತ್ಯಕ್ಕೆ ಯಾವುದೇ ಪಶ್ಚಾತ್ತಾಪ ಪಡುತ್ತಿಲ್ಲ. ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ವಾರ್ಷಿಕ ಸರಾಸರಿ 650 ಮರ್ಯಾದಾ ಹತ್ಯೆ ವರದಿ: ಪಾಕಿಸ್ತಾನದ ವಿವಿಧ ಭಾಗಗಳಲ್ಲಿ ಪ್ರತಿ ವರ್ಷ ನೂರಾರು ಮಹಿಳೆಯರನ್ನು ಗೌರವದ ಹೆಸರಿನಲ್ಲಿ ಹತ್ಯೆ ಮಾಡಲಾಗುತ್ತಿದೆ. ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ (HRCP) ಕಳೆದ ಒಂದು ದಶಕದಲ್ಲಿ ವಾರ್ಷಿಕ ಸರಾಸರಿ 650 ಮರ್ಯಾದಾ ಹತ್ಯೆಗಳನ್ನು ವರದಿ ಮಾಡಿದೆ. ಆದರೆ ಹೆಚ್ಚಿನವು ವರದಿಯಾಗದ ಕಾರಣ ನೈಜ ಸಂಖ್ಯೆ ಹೆಚ್ಚಿರುವ ಸಾಧ್ಯತೆ ಇದೆ.
ಸಹೋದರಿಯನ್ನೇ ಕೊಲೆಗೈದ ಸಹೋದರ: ಇನ್ನೊಂದೆಡೆ, ಕುಟುಂಬದವರ ವಿರೋಧದ ನಡುವೆಯೂ ಪ್ರೇಮ ವಿವಾಹವಾದ ಯುವತಿಯನ್ನು ಆಕೆ ಸಹೋದರ ಹಾಗೂ ಸಂಬಂಧಿಕರು ಸೇರಿಕೊಂಡು ಬರ್ಬರವಾಗಿ ಹತ್ಯೆ ಮಾಡಿದ್ದ ಕೃತ್ಯ (ಜೂನ್ 18-2022) ರಂದು ಪಂಜಾಬ್ನ ತರ್ನ್‌ತರಣ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿತ್ತು.
ದೇನಾ ಎಂಬಾಕೆ ಕೊಲೆಯಾದ ಯುವತಿ. ಕೃತ್ಯಕ್ಕೂ 15 ದಿನಗಳ ಹಿಂದೆಯಷ್ಟೇ ರಾಜನ್ ಜೇಸನ್ ಅಲಿಯಾಸ್ ಬಿಲ್ಲಾ ಎಂಬಾತನನ್ನು ಈಕೆ ಪ್ರೀತಿಸಿ ಮದುವೆಯಾಗಿದ್ದಳು. ಈ ಕಾರಣಕ್ಕೆ ಮನೆಗೆ ಬಂದ ಸಹೋದರ ಮತ್ತು ಇತರ ಸಂಬಂಧಿಕರು ಆಕೆಯನ್ನು ಹೊರಗೆಳೆದು ಹರಿತವಾದ ಆಯುಧಗಳಿಂದ ದಾಳಿ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಪತಿ ರಾಜನ್ ಪ್ರತಿಕ್ರಿಯಿಸಿ, ನಮ್ಮ ಪ್ರೇಮ ವಿವಾಹದಿಂದ ದೇನಾ ಕುಟುಂಬದವರು ಕೋಪಗೊಂಡಿದ್ದರು. ವಿವಾಹವಾದ ದಿನದಿಂದಲೂ ಬೆದರಿಕೆ ಹಾಕುತ್ತಿದ್ದರು ಎಂದು ಹೇಳಿದ್ದ. ಈತನ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಕುಟುಂಬದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ: ಮರ್ಯಾದಾ ಹತ್ಯೆ : ಮನೆಯಿಂದ ಹೊರಗೆಳೆದು ಸಹೋದರಿಯನ್ನೇ ಕೊಲೆಗೈದ ಸಹೋದರ