ವಾಷಿಂಗ್ಟನ್: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ನಾಜಿ ನಾಯಕ, ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ಗೆ ಸೇರಿದ್ದೆಂದು ಹೇಳಲಾದ ಕೈಗಡಿಯಾರವನ್ನು ಮೇರಿಲ್ಯಾಂಡ್‌ನ ಅಲೆಕ್ಸಾಂಡರ್ ಐತಿಹಾಸಿಕ ಹರಾಜಿನಲ್ಲಿ ಅನಾಮಧೇಯ ಖರೀದಿದಾರನಿಗೆ ಬರೋಬ್ಬರಿ 1.1 ದಶಲಕ್ಷ ಡಾಲರ್ (ಅಂದಾಜು 8.7 ಕೋಟಿ ರೂ.)ಗೆ ಮಾರಾಟ ಮಾಡಲಾಗಿದೆ. ಈ ಹರಾಜು ಬಹಳಷ್ಟು ಗಮನ ಸೆಳೆದಿದೆ. ವರದಿಯ ಪ್ರಕಾರ ಯಹೂದಿ ಸಮುದಾಯದ ಸದಸ್ಯರ ಆತಂಕದ ಹೊರತಾಗಿಯೂ ವಾಚ್ ಅನ್ನು ಅಮೆರಿಕದ ಖರೀದಿದಾರರಿಗೆ ಮಾರಾಟ ಮಾಡಲಾಗಿದೆ.
ಅಮೆರಿಕದ ಅಲೆಕ್ಸಾಂಡರ್ ಐತಿಹಾಸಿಕ ಹರಾಜು ಸಂಸ್ಥೆ ಈ ಹರಾಜನ್ನು ನಡೆಸಿಕೊಟ್ಟಿದೆ. ಅದನ್ನು ಹರಾಜು ಸಂಸ್ಥೆಯು ವೆಬ್‌ಸೈಟ್‌ನಲ್ಲಿ 'ಐತಿಹಾಸಿಕ ವಿಶ್ವಯುದ್ಧ 2ರ ಅಳಿದುಳಿದ ಅವಶೇಷ' ಎಂದು ಹೆಸರಿಸಿತ್ತು. ಹ್ಯೂಬರ್ ವಾಚ್ ಸಂಸ್ಥೆಗೆ ಸೇರಿರುವ ಈ ವಾಚ್ನ್ನು 1930ರ ದಶಕದಲ್ಲಿ ಹಿಟ್ಲರ್ ಅವರಿಗೆ ಅವರ ಜನ್ಮದಿನದ ಪ್ರಯುಕ್ತ ಉಡುಗೊರೆಯಾಗಿ ಕೊಡಲಾಗಿತ್ತು ಎಂದು ಹೇಳಲಾಗಿದೆ.
ವಾಚ್‌ನ ವಿಶೇಷತೆ: ಇದೊಂದು ರಿವರ್ಸಿಬಲ್ ವಾಚ್. ಕಪ್ಪು ಬಣ್ಣದ ಬೆಲ್ಟ್ ಇದೆ. ವಿಶೇಷವಾಗಿ ವಾಚ್‌ನ ಮೇಲ್ಮೈ ಭಾಗದಲ್ಲಿ ಸ್ವಸ್ತಿಕ್ ಚಿಹ್ನೆ ಮತ್ತು ಎಹೆಚ್ ಎಂದು ಕೆತ್ತಲಾಗಿದೆ ಮತ್ತು ಮೂರು ವಿಶೇಷ ದಿನಾಂಕಗಳನ್ನು ಕಾಣಬಹುದು. ಹಿಟ್ಲರ್ ಜನ್ಮದಿನ, ಹಿಟ್ಲರ್ ಚಾನ್ಸಲರ್ ಆದ ದಿನ ಹಾಗೂ 1933ರ ನಾಜಿ ಪಕ್ಷ ಚುನಾವಣೆಯನ್ನು ಗೆದ್ದ ದಿನವನ್ನು ಅದರಲ್ಲಿ ನಮೂದಿಸಲಾಗಿದೆ. ವಾಚ್‌ನ ಮೇಲ್ಮೈ ಯನ್ನು ತಿರುವಿಸಿದರೆ ಅಲ್ಲಿ ಗಡಿಯಾರ ಕಾಣಸಿಗುತ್ತದೆ.
ಮೇರಿಲ್ಯಾಂಡ್‌ನ ಅಲೆಕ್ಸಾಂಡರ್ ಹರಾಜು ಮಳಿಗೆಯು, ಐತಿಹಾಸಿಕ ವ್ಯಕ್ತಿಗಳ ಅಟೋಗ್ರಾಫ್ಗಳು, ದಾಖಲೆ ಪತ್ರಗಳು, ಛಾಯಾ ಚಿತ್ರಗಳೂ, ಸೇನಾ ಸಂಘರ್ಷದ ದಾಖಲೆಗಳು ಹಾಗೂ ಮಹತ್ವದ ಪ್ರಾಕ್ತನ ಅವಶೇಷಗಳು ಇತಾದಿಗಳನ್ನು ಹರಾಜಿಗಿಡುತ್ತದೆ. ನಾಜಿ ಯುಗದ ಈ ಸ್ಮರಣಿಕೆ ಹಿಟ್ಲರ್‌ಗೆ ಸೇರಿದ್ದು ಎಂಬುದು ಗ್ಯಾರಂಟಿ ಇಲ್ಲ.
ಹರಾಜು ಸಂಸ್ಥೆಯಿಂದ ಒದಗಿಸಲಾದ ದಾಖಲೆಗಳು ಹಿಟ್ಲರ್ ನಿಜವಾಗಿಯೂ ವಾಚ್ ಧರಿಸಿದ್ದಕ್ಕೆ ಪುರಾವೆ ನೀಡಲು ಸಾಧ್ಯವಿಲ್ಲ. ಆದರೆ ತಜ್ಞರ ಮೌಲ್ಯಮಾಪನವು ಅದು ಹಿಟ್ಲರ್‌ಗೆ ಸೇರಿದ್ದಾಗಿದೆೆ ಎಂದು ತೀರ್ಮಾನಿಸಿದೆ. ಈ ವಾಚ್ನ್ನು ಅಡಾಲ್ಫ್ ಹಿಟ್ಲರ್‌ಗೆ ಆತನ 44ನೇ ಜನ್ಮ ದಿನವಾದ 1933ರ ಏಪ್ರಿಲ್ 20ರಂದು, ಆತ ಜರ್ಮನಿಯ ಚಾನ್ಸಲರ್ (ಅಧ್ಯಕ್ಷ )ಆದಾಗ ನೀಡಿರುವ ಸಾಧ್ಯತೆ ಅಧಿಕವಾಗಿದೆಯೆಂದು, ಹರಾಜು ವಸ್ತುವಿನ ಪರಿಚಯ ಪತ್ರ ( ಕ್ಯಾಟಲಾಗ್)ನಲ್ಲಿ ಮಾಹಿತಿ ನೀಡಲಾಗಿದೆ.
1945ರ ಮೇ 4ರಂದು ಹಿಟ್ಲರ್ನ ಪರ್ವತ ವಿಶ್ರಾಂತಿ ಧಾಮವಾದ ಬರ್ಗಾಫ್ಗೆ 30 ಫ್ರೆಂಚ್ ಸೈನಿಕರ ತಂಡವೊಂದು ದಾಳಿ ನಡೆಸಿ ಈ ವಾಚ್ನ್ನು ಯುದ್ಧ ಸ್ಮರಣಿಕೆಯಾಗಿ ಕೊಂಡೊಯ್ದಿದ್ದರು ಎಂದು ಕ್ಯಾಟಲಾಗ್ನಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ಚಂದ್ರನ ಕುಳಿಗಳಲ್ಲಿ ಇದೆ ಮಾನವ ವಾಸ ಯೋಗ್ಯ ಪರಿಸರ: ನಾಸಾ ವಿಜ್ಞಾನಿಗಳ ಮಹತ್ವದ ಸಂಶೋಧನೆ