ಕರಾಚಿ (ಪಾಕಿಸ್ತಾನ) : ಪಾಕಿಸ್ತಾನದಲ್ಲಿ ಹಿಂದೂ ದೇವಾಲಯದ ಮೇಲಿನ ದಾಳಿಗಳು ಮುಂದುವರೆದಿವೆ. ದಕ್ಷಿಣ ಸಿಂಧ್ ಪ್ರಾಂತ್ಯದ ದೇವಾಲಯದ ಮೇಲೆ ದುಷ್ಕರ್ಮಿಗಳು ರಾಕೆಟ್ ಲಾಂಚರ್ಗಳಿಂದ ದಾಳಿ ನಡೆಸಿರುವ ಘಟನೆ ನಡೆದಿದೆ. ಈ ಬಗ್ಗೆ ಪಾಕ್ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಿಂಧ್ ಪ್ರಾಂತ್ಯದ ಕಾಶ್ಮೋರ್ನಲ್ಲಿರುವ ದೇವಾಲಯದ ಮೇಲೆ ದುಷ್ಕರ್ಮಿಗಳ ಕೆಂಗಣ್ಣು ಬಿದ್ದಿದೆ. ಇಲ್ಲಿನ ಹಿಂದೂಗಳು ಸೇರಿ ದೇವಾಲಯ ನಿರ್ಮಿಸಿದ್ದರು. ಇದರ ಮೇಲೆ ಭಾನುವಾರ ಮುಂಜಾನೆ ರಾಕೆಟ್ ಲಾಂಚರ್ಗಳಿಂದ ಹಾನಿ ಮಾಡಲಾಗಿದೆ. ಸ್ಥಳಕ್ಕೆ ಕಾಶ್ಮೋರ್- ಕಂಧಕೋಟ್ ಪೊಲೀಸರು ಮತ್ತು ಎಸ್ಎಸ್ಪಿ ಇರ್ಫಾನ್ ಸಮ್ಮೋ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ, "ಕೆಲವು ದುಷ್ಕರ್ಮಿಗಳು ಇಲ್ಲಿನ ದೇವಾಲಯದ ಮೇಲೆ ರಾಕೆಟ್ ಲಾಂಚರ್ ಮೂಲಕ ದಾಳಿ ನಡೆಸಿದರು. ಈ ಸಂದರ್ಭ ದೇವಸ್ಥಾನವನ್ನು ಮುಚ್ಚಲಾಗಿತ್ತು. ಬಾಗ್ರಿ ಸಮುದಾಯದವರು ವಾರ್ಷಿಕ ಪೂಜೆಯ ಸಂದರ್ಭದಲ್ಲಿ ದೇವಾಲಯವನ್ನು ತೆರೆಯುತ್ತಾರೆ. ಸ್ಥಳಕ್ಕೆ ಧಾವಿಸಿದ ನಮ್ಮ ಪೊಲೀಸರ ಮೇಲೂ ಗುಂಡು ಹಾರಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಸುಮಾರು 8 ರಿಂದ 9 ಮಂದಿ ಗುಂಡಿನ ದಾಳಿ ನಡೆಸಿದ್ದಾರೆ" ಎಂದು ಮಾಹಿತಿ ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಬಾಗ್ರಿ ಸಮುದಾಯದ ಮುಖಂಡ ಡಾ. ಸುರೇಶ್, "ದಾಳಿಕೋರರು ರಾಕೆಟ್ ಲಾಂಚರ್ ಮೂಲಕ ದೇವಾಲಯವನ್ನು ಸ್ಫೋಟಿಸಲು ವಿಫಲ ಯತ್ನ ನಡೆಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಲ್ಲಿನ ಜನರು ತುಂಬಾ ಭಯಭೀತರಾಗಿದ್ದಾರೆ. ಹಿಂದೂಗಳಿಗೆ ಸೂಕ್ತ ರಕ್ಷಣೆ ನೀಡಬೇಕು" ಎಂದು ಒತ್ತಾಯಿಸಿದರು. ಎಸ್ಎಸ್ಪಿ ಸಮ್ಮೋ ಅವರು ಹಿಂದೂಗಳಿಗೆ ಸೂಕ್ತ ರಕ್ಷಣೆ ಒದಗಿಸುವ ಭರವಸೆ ನೀಡಿದ್ದಾರೆ. ಕಾಶ್ಮೋರ್ ಪ್ರದೇಶದಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ.
ಈ ದಾಳಿಯು ತನ್ನ ಪ್ರಿಯಕರನಿಗಾಗಿ ಪಾಕಿಸ್ತಾನದ ಮಹಿಳೆಯೋರ್ವಳು ನಾಲ್ಕು ಮಕ್ಕಳೊಂದಿಗೆ ಭಾರತವನ್ನು ಪ್ರವೇಶಿಸಿದ ಘಟನೆಗೆ ಪ್ರತೀಕಾರ ಎಂದು ಹೇಳಲಾಗಿದೆ. ದುಷ್ಕರ್ಮಿಗಳು ಕಾಶ್ಮೋರ್ ಮತ್ತು ಘೋಟ್ಕಿ ಪ್ರದೇಶದಲ್ಲಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಕಾಶ್ಮೋರ್ನಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ ನಡೆದಿದೆ.
ಸೀಮಾ ಎಂಬ ಪಾಕಿಸ್ತಾನದ ಮಹಿಳೆ ತನ್ನ ಪಬ್ಜಿ ಪ್ರಿಯಕರನನ್ನು ಭೇಟಿ ಮಾಡಲು ನಾಲ್ವರು ಮಕ್ಕಳೊಂದಿಗೆ ನೇಪಾಳದ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿದ್ದಳು. ಬಳಿಕ ದೆಹಲಿ ಸಮೀಪದ ನೋಯ್ಡಾದಲ್ಲಿ ಪ್ರಿಯಕರ ಸಚಿನ್ ಮೀನಾನನ್ನು ಭೇಟಿಯಾಗಿದ್ದಳು. ಸಚಿನ್ ಇಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ. ಜುಲೈ 4ರಂದು ಸೀಮಾಳನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು. ಜೊತೆಗೆ ಆಶ್ರಯ ನೀಡಿದ ಹಿನ್ನೆಲೆಯಲ್ಲಿ ಸಚಿನ್ನನ್ನೂ ಬಂಧಿಸಿ ಇತ್ತೀಚೆಗೆ ಬಿಡುಗಡೆ ಮಾಡಿದ್ದರು.
ಈ ನಡುವೆ ಪಾಕಿಸ್ತಾನದ ಮಾನವ ಹಕ್ಕು ಆಯೋಗ, ಕಾಶ್ಮೋರ್ ಮತ್ತು ಘೋಟ್ಕಿಯಲ್ಲಿ ಕಾನೂನು ಹದಗೆಟ್ಟಿರುವ ಬಗ್ಗೆ ಎಚ್ಚರಿಕೆ ನೀಡಿತ್ತು. ಸುಮಾರು 30ಕ್ಕೂ ಹೆಚ್ಚು ಹಿಂದೂ ಸಮುದಾಯದ ಮಹಿಳೆಯರನ್ನು ಮತ್ತು ಮಕ್ಕಳನ್ನು ದುಷ್ಕರ್ಮಿಗಳು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
ದುಷ್ಕರ್ಮಿಗಳು ಹಿಂದೂ ಸಮುದಾಯ ದೇವಾಲಯ ಮತ್ತು ಮಂದಿರಗಳನ್ನು ನಾಶ ಮಾಡುವುದಾಗಿ ಬೆದರಿಕೆ ಒಡ್ಡಿದ್ದು, ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯ ಕೇಳಿಬಂದಿದೆ. ಕರಾಚಿಯಲ್ಲಿ ಅನೇಕ ಪುರಾತನ ಹಿಂದೂ ದೇವಾಲಯಗಳಿವೆ. ಹಿಂದೂಗಳು ಪಾಕಿಸ್ತಾನದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದೆ. ಪಾಕಿಸ್ತಾನದ ಬಹುಪಾಲು ಹಿಂದೂ ಸಮುದಾಯವು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದ್ದಾರೆ.
ಇದನ್ನೂ ಓದಿ : Hindu Temple demolish: ಪಾಕಿಸ್ತಾನದಲ್ಲಿ 150 ವರ್ಷಗಳ ಹಳೆಯ ದೇವಸ್ಥಾನ ಧ್ವಂಸ; ಮಾರಿ ಮಾತಾ ದೇವಾಲಯ ನೆಲಸಮ