ಕೊಲಂಬೋ(ಶ್ರೀಲಂಕಾ): ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ಜನರು ದಂಗೆ ಎದ್ದಿದ್ದು ಮಾಲ್ಡೀವ್ಸ್ಗೆ ಪರಾರಿಯಾಗಿ ಅಲ್ಲಿಂದ ಸಿಂಗಾಪುರಕ್ಕೆ ತೆರಳಿರುವ ಗೊಟಬಯ ರಾಜಪಕ್ಸ ಕೊನೆಗೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಈಗ ಅವರ ರಾಜೀನಾಮೆಯನ್ನು ಶ್ರೀಲಂಕಾ ಸ್ಪೀಕರ್ ಅಂಗೀಕರಿಸಿದ್ದಾರೆ.
ರಾಜಪಕ್ಸ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಮುಂದಿನ ಕಾನೂನು ಪ್ರಕ್ರಿಯೆಯನ್ನು ಅನುಸರಿಸಲಾಗುವುದು. ನಾಳೆ (ಅಧ್ಯಕ್ಷರನ್ನು ಆಯ್ಕೆ ಮಾಡಲು) ಸದಸ್ಯರನ್ನು ಆಹ್ವಾನಿಸಲಾಗುತ್ತದೆ. ಗೊಟಬಯ ಅವರು ಗುರುವಾರ ಕಾನೂನುಬದ್ಧವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಅಬೇವರ್ಧನ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ದೇಶದ ಜನರ ದಂಗೆಗೆ ಬೆದರಿ ಸಿಂಗಾಪುರಕ್ಕೆ ಪಲಾಯನಗೈದಿರುವ ರಾಜಪಕ್ಸ ಅವರಿಗೆ ಸಿಂಗಾಪುರ ವಿದೇಶಾಂಗ ಸಚಿವಾಲಯ ಖಾಸಗಿ ಭೇಟಿಗಾಗಿ ಆಹ್ವಾನಿಸಿದೆ. ಇದೇ ಸಂದರ್ಭದಲ್ಲಿ ಗೊಟಬಯ ಅವರು ದೇಶದ ಆಶ್ರಯ ಕೇಳಿಲ್ಲ. ಅವರಿಗೆ ನಾವು ಆಶ್ರಯ ನೀಡಿಲ್ಲ ಎಂದು ಹೇಳಿಕೆ ನೀಡಿದೆ. ಜುಲೈ 9 ರಂದು ಶ್ರೀಲಂಕಾದಿಂದ ಮಾಲ್ಡೀವ್ಸ್ಗೆ ಪಲಾಯನ ಮಾಡಿದ್ದ ರಾಜಪಕ್ಸ ನಿನ್ನೆ ಸಂಜೆ ಅಲ್ಲಿಂದ ಸೌದಿ ಏರ್‌ಲೈನ್ಸ್ ವಿಮಾನದಲ್ಲಿ ಸಿಂಗಾಪುರಕ್ಕೆ ಆಗಮಿಸಿದ್ದಾರೆ.
ಇದನ್ನೂ ಓದಿ: ಕೊನೆಗೂ ಅಧ್ಯಕ್ಷ ಸ್ಥಾನಕ್ಕೆ ಗೊಟಬಯಾ ರಾಜಪಕ್ಸ ರಾಜೀನಾಮೆ.. ಸಿಂಗಾಪುರಕ್ಕೆ ಪರಾರಿ
ಜನರಿಂದ ಹರ್ಷಾಚರಣೆ: ರಾಜಪಕ್ಸ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಬೆನ್ನಲ್ಲೇ ಕೊಲಂಬೋದಲ್ಲಿ ಪ್ರತಿಭಟನಾಕಾರರು ಸಂತಸ ವ್ಯಕ್ತಪಡಿಸಿದ್ದಾರೆ. ಬೀದಿಗಳಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ರಾಜಪಕ್ಸ ಸಹೋದರರು ರಾಜೀನಾಮೆ ನೀಡಬೇಕು ಎಂದು ತಿಂಗಳುಗಳಿಂದ ಜನರು ಪ್ರತಿಭಟನೆ ನಡೆಸುತ್ತಿದ್ದರು. ಪ್ರಧಾನಿ ಹುದ್ದೆಗೆ ಮಹಿಂದಾ ರಾಜಪಕ್ಸ ಈ ಹಿಂದೆಯೇ ರಾಜೀನಾಮೆ ನೀಡಿದ್ದರು. ಇದೀಗ ಅವರ ಸಹೋದರ ಗೊಟಬಯ ರಾಜಪಕ್ಸ ರಾಜೀನಾಮೆ ಅಂಗೀಕಾರವಾಗಿದೆ.