ರಾಫಾ: ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆಯ ದಾಳಿ ಮುಂದುವರಿದಿದ್ದು, ಹಮಾಸ್ಅನ್ನು ಮಾತ್ರ ಗುರಿಯಾಗಿಸಿಕೊಂಡು ಮುನ್ನುಗ್ಗುತ್ತಿದೆ. ಈ ನಡುವೆ ಅಚಾರ್ಯವೊಂದು ನಡೆದಿದೆ. ಇಸ್ರೇಲಿ ಪಡೆಯು ಶುಕ್ರವಾರ ಗಾಜಾ ಪಟ್ಟಿಯಲ್ಲಿ ತನ್ನ ಗ್ರೌಂಡ್ಲೆವಲ್ ಕಾರ್ಯಾಚರಣೆಯಲ್ಲಿ, ಹಮಾಸ್ ವಶದಲ್ಲಿದ್ದ ಒತ್ತೆಯಾಳುಗಳಲ್ಲಿ ಮೂವರನ್ನು ಶತ್ರುಗಳೆಂದು ತಪ್ಪಾಗಿ ಭಾವಿಸಿ ಗುಂಡಿಕ್ಕಿ ಕೊಂದಿದೆ. ಇದನ್ನು ಸ್ವತಃ ಐಡಿಎಫ್ ಬಹಿರಂಗಪಡಿಸಿದೆ.
ಗಾಜಾದ ಶಿಜೈಯಾದಲ್ಲಿ ನಡೆಯುತ್ತಿರುವ ದಾಳಿಯಲ್ಲಿ ನಾವು ತಪ್ಪಾಗಿ ಮೂವರು ಇಸ್ರೇಲಿ ಒತ್ತೆಯಾಳುಗಳ ಮೇಲೆ ಗುಂಡು ಹಾರಿಸಿದೆವು. ಪರಿಣಾಮವಾಗಿ ಅವರು ಮೃತಪಟ್ಟಿದ್ದಾರೆ. ಈ ಘಟನೆಗಾಗಿ ನಾವು ವಿಷಾದಿಸುತ್ತೇವೆ. ನಾವು ಮಾಡಿದ ತಪ್ಪಿನಿಂದ ಪಾಠ ಕಲಿಯುತ್ತೇವೆ ಎಂದು ಐಡಿಎಫ್ ಮುಖ್ಯ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದಾರೆ.
ಮೃತರಲ್ಲಿ ಒಬ್ಬನನ್ನು ಇಸ್ರೇಲ್‌ನ ಅಜಾಹ್‌ನ ಯೋತಮ್ ಹೈಮ್ ಮತ್ತು ಇನ್ನೊಬ್ಬನನ್ನು ಕಿಬ್ಬುತ್ಜ್ ನಿರ್ ಆಮ್ ಎಂದು ಗುರುತಿಸಲಾಗಿದೆ. ಕುಟುಂಬದ ಸದಸ್ಯರ ಮನವಿ ಮೇರೆಗೆ ಮೂರನೇ ವ್ಯಕ್ತಿಯ ಹೆಸರನ್ನು ತಡೆಹಿಡಿಯಲಾಗಿದೆ.
ಇಸ್ರೇಲ್ ದಾಳಿಯಿಂದ ಕ್ಯಾಮರಾಮನ್ ಸಾವು, ಗಾಯಗೊಂಡ ವರದಿಗಾರ: ಅಲ್ ಜಜೀರಾ ದೂರದರ್ಶನವು ಶುಕ್ರವಾರದಂದು ಗಾಜಾದಲ್ಲಿ ತನ್ನ ಪತ್ರಕರ್ತರಲ್ಲಿ ಒಬ್ಬರಾದ ಪ್ಯಾಲೇಸ್ಟಿನಿಯನ್ ಕ್ಯಾಮರಾಮನ್ ಸಮರ್ ಅಬು ಡಕ್ಕಾ ಅವರು ಇಸ್ರೇಲಿ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಕತಾರ್ ಒಡೆತನದ ಮಾಧ್ಯಮವೊಂದರ ಗಾಜಾದ ಮುಖ್ಯ ವರದಿಗಾರ ವೇಲ್ ದಹದೌಹ್ ಕೂಡ ದಾಳಿಯಲ್ಲಿ ಗಾಯಗೊಂಡಿದ್ದಾರೆ. ದಾಳಿ ನಡೆದಾಗ ಇಬ್ಬರು ದಕ್ಷಿಣ ಗಾಜಾ ನಗರದ ಖಾನ್ ಯೂನಿಸ್‌ನಲ್ಲಿರುವ ಶಾಲೆಯೊಂದರ ಮೈದಾನದಲ್ಲಿ ವರದಿ ಮಾಡುತ್ತಿದ್ದರು ಎಂದು ಮಾಧ್ಯಮ ಸಂಸ್ಥೆ ಹೇಳಿದೆ.
ಹಮಾಸ್ನವರು ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ಮಾಡಿದ್ದರು. ಇಸ್ರೇಲ್‌ನ 116 ಸೈನಿಕರು ಸಾವನ್ನಪ್ಪಿದ್ದಾರೆ. 1,200ಕ್ಕೂ ಹೆಚ್ಚು ಅಮಾಯಕರ ಪ್ರಾಣ ಕಳೆದುಕೊಂಡಿದ್ದರು. 240 ಜನರನ್ನು ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು ಎಂದು ಇಸ್ರೇಲ್ ಹೇಳಿತ್ತು. ಹಮಾಸ್ ನೆಲೆಯಾಗಿರುವ ಗಾಜಾ ಮೇಲೆ ಇಸ್ರೇಲ್ ಪ್ರತಿದಾಳಿ ನಡೆಸುತ್ತಿದೆ.
ಹಮಾಸ್ ನೇತೃತ್ವದ ಆರೋಗ್ಯ ಸಚಿವಾಲಯವು, ಇಸ್ರೇಲ್ ದಾಳಿಯಲ್ಲಿ ಇದುವರೆಗೆ 18,700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಬಹಿರಂಗಪಡಿಸಿದೆ. ಮತ್ತೊಂದೆಡೆ, ಅಮೆರಿಕ ಸೇರಿದಂತೆ ಅನೇಕ ದೇಶಗಳು ಗಾಜಾದಲ್ಲಿ ಯುದ್ಧವನ್ನು ನಿಲ್ಲಿಸಲು ಮತ್ತು ಕನಿಷ್ಠ ಯುದ್ಧದ ತೀವ್ರತೆಯನ್ನು ಕಡಿಮೆ ಮಾಡಲು ಇಸ್ರೇಲ್ ಅನ್ನು ಒತ್ತಾಯಿಸುತ್ತಿವೆ. ಇದರಿಂದ ಮಾನವೀಯ ನೆರವು ಮುಂದುವರಿಯುತ್ತದೆ. ಏತನ್ಮಧ್ಯೆ, ಹಮಾಸ್ ಅನ್ನು ಸೋಲಿಸುವವರೆಗೆ ಯುದ್ಧವನ್ನು ನಿಲ್ಲಿಸುವ ಉದ್ದೇಶವಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್, ಮೊಲ್ಡೊವಾ ಜೊತೆ EU ಸದಸ್ಯತ್ವದ ಮಾತುಕತೆ: ಇದು ಉಕ್ರೇನ್ ವಿಜಯ ಎಂದು ಕರೆದ ಝೆಲೆನ್ಸ್ಕಿ