ಗಾಜಾ: ಒಂದೆಡೆ ಇಸ್ರೇಲ್ ದಾಳಿ, ಇನ್ನೊಂದೆಡೆ ಮೂಲ ಸೌಕರ್ಯಗಳ ಸ್ಥಗಿತ. ಇದು ಗಾಜಾವನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. ವಿದ್ಯುತ್, ಇಂಧನ ಕೊರತೆಯಿಂದ ಅಲ್ಲಿನ ಆಸ್ಪತ್ರೆಗಳು ಸಂಕಷ್ಟದ ಸುಳಿಗೆ ಸಿಲುಕುತ್ತಿವೆ. ಯುದ್ಧ, ನಿರ್ಬಂಧ ಮುಂದುವರಿದಲ್ಲಿ ಔಷಧ, ಸೌಲಭ್ಯಗಳು ಮುಗಿದು ರೋಗಿಗಳ ರಕ್ಷಣೆ ಕಷ್ಟವಾಗಲಿದೆ. ಅದರಲ್ಲೂ ಈಗಷ್ಟೇ ಜನಿಸಿದ ಮಕ್ಕಳ ರಕ್ಷಣೆ ಕಷ್ಟಸಾಧ್ಯ ಎಂದು ವೈದ್ಯರು ಹೇಳುತ್ತಿದ್ದಾರೆ.
ಮಧ್ಯ ಗಾಜಾ ಪಟ್ಟಿಯಲ್ಲಿರುವ ಅಲ್ ಅಕ್ಸಾ ಆಸ್ಪತ್ರೆಯಲ್ಲಿ ನವಜಾತ ಶಿಶುಗಳನ ವಾರ್ಡ್‌ನಲ್ಲಿ ಹಲವು ತೊಂದರೆಗಳಿಂದ ಬಳಲುತ್ತಿರುವ ಮಕ್ಕಳಿಗೆ ವೆಂಟಿಲೇಟರ್ ಮೂಲಕ ಪ್ರಾಣವಾಯು ನೀಡಲಾಗುತ್ತಿದೆ. ಇದಕ್ಕೆ ನಿರಂತರ ವಿದ್ಯುತ್ ಅಗತ್ಯ. ಆದರೆ, ಯುದ್ಧದಿಂದಾಗಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಇರುವ ಸೌಕರ್ಯದಲ್ಲೇ ಆಸ್ಪತ್ರೆಯನ್ನು ಮುನ್ನಡೆಸಲಾಗುತ್ತಿದೆ. ಆಸ್ಪತ್ರೆಯಲ್ಲಿನ ಜನರೇಟರ್‌ಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.
ಆದರೆ, ಜನರೇಟರ್ಗಳಿಗೆ ಇಂಧನದ ಕೊರತೆ ಉಂಟಾಗಿದೆ. ಅದರ ಸರಬರಾಜು ಆಗದೇ ಹೋದಲ್ಲಿ ಇರುವ ಇಂಧನ ಖಾಲಿಯಾಗುವ ಅಪಾಯವಿದೆ. ಒಂದೊಮ್ಮೆ ಜನರೇಟರ್‌ಗಳು ಸ್ಥಗಿತಗೊಂಡರೆ, ವಾರ್ಡ್‌ನಲ್ಲಿರುವ ಶಿಶುಗಳು ಉಸಿರಾಟ ಸಮಸ್ಯೆಯಿಂದಾಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಎಲ್ಲ ಆಸ್ಪತ್ರೆಗಳ ಸ್ಥಿತಿಯೂ ಒಂದೇ: ಗಾಜಾದಾದ್ಯಂತ ಇರುವ ಆಸ್ಪತ್ರೆಗಳ ಸ್ಥಿತಿ ಒಂದೇ ಆಗಿದೆ. ಶಿಶುಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಇದೇ ರೀತಿಯ ಭಯವನ್ನು ಎದುರಿಸುತ್ತಿದ್ದಾರೆ. ಆರು ನವಜಾತ ಶಿಶು ಘಟಕಗಳಲ್ಲಿ ಕನಿಷ್ಠ 130 ಶಿಶುಗಳು ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಕ್ಟೋಬರ್ 7 ರಂದು ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ವೈಮಾನಿಕ ದಾಳಿ ಶುರುವಾಗಿ ಗಾಜಾದ ಮೇಲೆ ದಿಗ್ಬಂಧನ ವಿಧಿಸಲಾಗಿದೆ. ಅಂದಿನಿಂದ ಇಂಧನ ಕೊರತೆ ಕಾಣಿಸಿಕೊಂಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಗಾಜಾದಲ್ಲಿ ಕನಿಷ್ಠ 50,000 ಗರ್ಭಿಣಿಯರು ಅಗತ್ಯ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲವಾಗಿದೆ. ಸುಮಾರು 5,500 ಮಕ್ಕಳು ಮುಂದಿನ ತಿಂಗಳಲ್ಲಿ ಜನಿಸಲಿದ್ದಾರೆ. ಇಸ್ರೇಲ್ ದಾಳಿಯಿಂದಾಗಿ ವಿದ್ಯುತ್, ನೀರು ಮತ್ತು ಇತರ ಅಗತ್ಯ ಸರಬರಾಜುಗಳ ಕೊರತೆಯಿಂದಾಗಿ ಸುಮಾರು 30 ಆಸ್ಪತ್ರೆಗಳಲ್ಲಿ ಕನಿಷ್ಠ ಏಳು ಆಸ್ಪತ್ರೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಉಳಿದ ಆಸ್ಪತ್ರೆಗಳು ಔಷಧ ಸೇರಿದಂತೆ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ.
ತುರ್ತಾಗಿ ಇಂಧನ ಬೇಕಿದೆ: ಈಗ ನೀಡಲಾದ ಮಾನವೀಯ ನೆರವಿನಲ್ಲಿ ಇಂಧನ, ವಿದ್ಯುತ್ ಸರಬರಾಜು ಆಗಿಲ್ಲ. ಬಂದ 20 ಟ್ರಕ್ಗಳಲ್ಲಿ ಆಹಾರ, ಔಷಧಗಳೇ ಇವೆ. ಆಸ್ಪತ್ರೆಗಳಿಗೆ ಬೇಕಾದ ಮೂಲ ಸೌಲಭ್ಯಗಳು ಬಂದಿಲ್ಲ. ಹೀಗಾಗಿ ಅಲ್ಲಿನ ಮಕ್ಕಳು, ಗರ್ಭಿಣಿಯರು ಪ್ರಾಣ ಕಳೆದುಕೊಳ್ಳಬೇಕಿದೆ. ಇದನ್ನು ಜಗತ್ತು ನೋಡಬಯಸುತ್ತದೆಯೇ ಎಂದು ಪ್ಯಾಲೆಸ್ಟೀನಿಯನ್ ಹೆಲ್ಪ್ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ ಮೆಲಾನಿ ವಾರ್ಡ್ ಪ್ರಶ್ನಿಸಿದ್ದಾರೆ.
ಗಾಜಾ ಗಡಿ ಭಾಗದಲ್ಲಿರುವ ಡಿಪೋದಿಂದ 7 ಟ್ಯಾಂಕರ್‌ಗಳು ಇಂಧನವನ್ನು ತುಂಬಿಕೊಂಡಿವೆ. ಅವುಗಳು ಆಸ್ಪತ್ರೆಗಳಿಗೆ ನೀಡುವ ಉದ್ದೇಶ ಹೊಂದಿವೆಯೇ ಎಂಬುದು ಸ್ಪಷ್ಟವಾಗಿಲ್ಲ. ಅವುಗಳು ಗಾಜಾ ಪ್ರವೇಶಕ್ಕೆ ಅನುಮತಿಸದಿದ್ದರೆ ಆಸ್ಪತ್ರೆಗಳಲ್ಲಿ ಇಂಧನ ಖಾಲಿಯಾಗಲಿದೆ. ಬಳಿಕ ಸಾವು ನೋವುಗಳು ಹೆಚ್ಚಾಗಲಿವೆ. ಗಾಜಾದ 5 ಮುಖ್ಯ ಆಸ್ಪತ್ರೆಗಳಲ್ಲಿ ಮೂಲಭೂತ ಸೇವೆಗಳನ್ನು ನೀಡಲು 1,50,000 ಲೀಟರ್ ಇಂಧನ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ತಾರಿಕ್ ಜಾರೆವಿಕ್ ಹೇಳಿದ್ದಾರೆ.
ಇದನ್ನೂ ಓದಿ: ಗಾಜಾದ ಆಸ್ಪತ್ರೆ ಜನರೇಟರ್ಗಳಿಗೆ ಇಂಧನ ಕೊರತೆ; ಇನ್ಕ್ಯುಬೇಟರ್ನಲ್ಲಿ ಅಪಾಯಕ್ಕೆ ಸಿಲುಕಿಕೊಂಡಿರುವ ನವಜಾತ ಶಿಶುಗಳು