ಇಸ್ಲಾಮಾಬಾದ್ (ಪಾಕಿಸ್ತಾನ) : ಪಾಕಿಸ್ತಾನವು ಇಸ್ರೇಲ್‌ನೊಂದಿಗೆ ಯಾವುದೇ ವ್ಯಾಪಾರ ಅಥವಾ ರಾಜತಾಂತ್ರಿಕ ಸಂಬಂಧಗಳನ್ನು ಹೊಂದುವ ಬಗೆಗಿನ ವರದಿಗಳನ್ನು ಪಾಕಿಸ್ತಾನದ ವಿದೇಶಾಂಗ ಕಚೇರಿ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಸಚಿವಾಲಯ ಭಾನುವಾರ ತಿರಸ್ಕರಿಸಿದ್ದು, ಇಸ್ಲಾಮಾಬಾದ್ ಟೆಲ್ ಅವೀವ್‌ನೊಂದಿಗೆ ಯಾವುದೇ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧ ಹೊಂದುವುದಿಲ್ಲ ಎಂದು ಹೇಳಿದೆ. ಪಾಕಿಸ್ತಾನದಿಂದ ಬಂದ ಮೊದಲ ಆಹಾರ ಸರಕುಗಳ ಶಿಪ್ಮೆಂಟ್ ಒಂದನ್ನು ಇಸ್ರೇಲ್‌ನಲ್ಲಿ ಇಳಿಸಿಕೊಳ್ಳಲಾಗಿದೆ ಎಂದು ಅಮೆರಿಕನ್ ಜ್ಯೂಯಿಶ್ ಕಾಂಗ್ರೆಸ್ ಹೇಳಿದ ಕೆಲ ದಿನಗಳ ನಂತರ ಪಾಕಿಸ್ತಾನದಿಂದ ಈ ಸ್ಪಷ್ಟೀಕರಣ ಬಂದಿದೆ. ಅಮೆರಿಕನ್ ಜ್ಯೂಯಿಶ್ ಕಾಂಗ್ರೆಸ್ ಇದು ಇಸ್ರೇಲ್ ಬಿಟ್ಟು ಹೊರದೇಶಗಳಲ್ಲಿ ವಾಸಿಸುತ್ತಿರುವ ಯಹೂದಿಗಳ ಹಿತಾಸಕ್ತಿ ರಕ್ಷಣೆಗೆ ಸ್ಥಾಪಿಸಲಾಗಿರುವ, ಅಮೆರಿಕದಲ್ಲಿರುವ ಯಹೂದಿಗಳ ಸಂಘಟನೆಯಾಗಿದೆ.
ಇಸ್ರೇಲ್ ಮಾರುಕಟ್ಟೆಗಳಲ್ಲಿ ಪಾಕಿಸ್ತಾನಿ ಸರಕುಗಳ ಮಾರಾಟದ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್, ಯಹೂದಿ ರಾಷ್ಟ್ರವಾಗಿರುವ ಇಸ್ರೇಲ್ ಬಗ್ಗೆ ಪಾಕಿಸ್ತಾನದ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. ಇಸ್ರೇಲ್‌ನೊಂದಿಗೆ ಪಾಕಿಸ್ತಾನದ ಅಧಿಕೃತ ವ್ಯಾಪಾರ ಸಂಬಂಧಗಳ ಬಗ್ಗೆ ಯಾವುದೇ ಪ್ರಸ್ತಾಪವಿರದ ಎಜೆಸಿಯ ಪತ್ರಿಕಾ ಪ್ರಕಟಣೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ವಾಣಿಜ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಪಾಕಿಸ್ತಾನ-ಇಸ್ರೇಲ್ ಮಧ್ಯೆ ವ್ಯಾಪಾರದ ಆರಂಭದ ಬಗೆಗಿನ ವದಂತಿಗಳು ಕೇವಲ ದುರುದ್ದೇಶದ ಮಾತುಗಳಾಗಿವೆ. ನಾವು ಇಸ್ರೇಲ್‌ನೊಂದಿಗೆ ವ್ಯಾಪಾರ ಸಂಬಂಧಗಳನ್ನು ಪ್ರಾರಂಭಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ವಕ್ತಾರರು ಹೇಳಿದರು.
ಇದಕ್ಕೂ ಮೊದಲು, ದಕ್ಷಿಣ ಬಂದರು ನಗರವಾದ ಕರಾಚಿಯಲ್ಲಿ ನೆಲೆಸಿರುವ ಪಾಕಿಸ್ತಾನಿ ಯಹೂದಿ ಫಿಶೆಲ್ ಬೆಂಖಾಲ್ಡ್ ಎಂಬುವರು ಪಾಕಿಸ್ತಾನವು ಇಸ್ರೇಲ್‌ಗೆ ತನ್ನ ಮೊದಲ ಕೋಷರ್ ಆಹಾರ ಶಿಪ್ಮೆಂಟ್ ಬಗ್ಗೆ ಟ್ವೀಟ್ ಮಾಡಿದ್ದು, ಇದು ವೈರಲ್ ಆಗಿತ್ತು. ಪಾಕಿಸ್ತಾನದವನಾಗಿ ನನಗೆ ಅಭಿನಂದನೆಗಳು. ನಾನು ಪಾಕಿಸ್ತಾನದ ಆಹಾರ ಉತ್ಪನ್ನಗಳ ಮೊದಲ ಬ್ಯಾಚ್ ಅನ್ನು ಇಸ್ರೇಲ್ ಮಾರುಕಟ್ಟೆಗೆ ರಫ್ತು ಮಾಡಿದ್ದೇನೆ ಎಂದು ಪಾಕಿಸ್ತಾನಿ ಯಹೂದಿ ಫಿಶೆಲ್ ಬೆಂಖಾಲ್ಡ್ ಅವರು ಕಳೆದ ವಾರ ಟ್ವೀಟ್ ಮಾಡಿದ್ದರು. ಈ ಬಗ್ಗೆ ವರದಿ ಮಾಡಿರುವ ಇಸ್ರೇಲ್ ಟೈಮ್ಸ್ ಪತ್ರಿಕೆ, ಎರಡೂ ದೇಶಗಳ ಮಧ್ಯೆ ರಾಜತಾಂತ್ರಿಕ ಸಂಬಂಧ ಇಲ್ಲ ಎಂದಿದೆ.
ಏತನ್ಮಧ್ಯೆ, ಪಾಕಿಸ್ತಾನವು ಇಸ್ರೇಲ್‌ಗೆ ಯಾವುದೇ ರಫ್ತು ಸರಕುಗಳನ್ನು ಕಳುಹಿಸಿಲ್ಲ ಎಂದು ವಾಣಿಜ್ಯ ಮತ್ತು ವ್ಯಾಪಾರ ಕಾರ್ಯದರ್ಶಿ ಸುವಾಲೆಹ್ ಅಹ್ಮದ್ ಫಾರುಕಿ ದೃಢಪಡಿಸಿದ್ದಾರೆ ಮತ್ತು ಇಂಥ ಪ್ರತಿಪಾದನೆಗಳು ರಾಜಕೀಯ ಉದ್ದೇಶಗಳಿಗಾಗಿ ಮಾಡಿದ ಪ್ರತಿಪಾದನೆಗಳಾಗಿವೆ ಎಂದು ಹೇಳಿದ್ದಾರೆ. ಕರಾಚಿ ಬಂದರಿನ ಕಸ್ಟಮ್ಸ್ ಅಧಿಕಾರಿಗಳು ಕೂಡ ವ್ಯಾಪಾರ ಕಾರ್ಯದರ್ಶಿಯ ಹೇಳಿಕೆಯನ್ನು ಸಮರ್ಥಿಸಿದ್ದಾರೆ. ಮಾರ್ಚ್ 30 ರಂದು ಅಮೇರಿಕನ್ ಯಹೂದಿ ಕಾಂಗ್ರೆಸ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಪಾಕಿಸ್ತಾನದಿಂದ ಬಂದ ಮೊದಲ ಶಿಪ್ಮೆಂಟ್ ಒಂದನ್ನು ಇಸ್ರೇಲ್‌ನಲ್ಲಿ ಸ್ವೀಕರಿಸಲಾಗಿದೆ ಎಂದು ಹೇಳಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಕಳೆದ ವರ್ಷ ಪಾಕಿಸ್ತಾನಿ ನಿಯೋಗವೊಂದು ಇಸ್ರೇಲ್‌ಗೆ ಹೋಗಿತ್ತು ಎಂಬ ವರದಿಯ ಹಿನ್ನೆಲೆಯಲ್ಲಿ ಇಸ್ರೇಲ್ ಮತ್ತು ಪಾಕಿಸ್ತಾನಗಳ ಮಧ್ಯದ ಸಂಬಂಧದ ಬಗ್ಗೆ ವಿವಾದ ಏರ್ಪಟ್ಟಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಪಾಕಿಸ್ತಾನ ವಿದೇಶಾಂಗ ವಕ್ತಾರರು, ಪಾಕಿಸ್ತಾನಿ ನಿಯೋಗ ಇಸ್ರೇಲ್‌ಗೆ ಭೇಟಿ ನೀಡಿದೆ ಎಂಬ ವಿಷಯದಲ್ಲಿ ಪಾಕಿಸ್ತಾನದಲ್ಲಿ ನೆಲೆ ಇಲ್ಲದ, ಬೇರೆ ದೇಶದ ಎನ್ಜಿಓ ಒಂದು ಈ ಭೇಟಿಯನ್ನು ಆಯೋಜಿಸಿತ್ತು ಮತ್ತು ಪ್ಯಾಲೇಸ್ಟಿನಿಯನ್ ವಿಷಯದ ಬಗ್ಗೆ ಪಾಕಿಸ್ತಾನದ ನಿಲುವು ಸ್ಪಷ್ಟವಾಗಿದೆ ಮತ್ತು ನಿಸ್ಸಂದಿಗ್ಧವಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ : ಚುನಾವಣಾ ವ್ಯವಸ್ಥೆ ಮೇಲೆ ಇಸ್ರೇಲ್ ಸಂಸ್ಥೆ ಪ್ರಭಾವ ಆರೋಪ: ತನಿಖೆಗೆ ಕಾಂಗ್ರೆಸ್ ಆಗ್ರಹ