ಫ್ರಾನ್ಸ್(ಪ್ಯಾರಿಸ್): ಜೂನ್ 27ರಂದು ಕಾರು ಚಾಲನೆ ಮಾಡುತ್ತಿದ್ದ ಅಲ್ಜೀರಿಯಾ ಮೂಲದ 17 ವರ್ಷದ ಫ್ರಾನ್ಸ್ ನಿವಾಸಿ ನಹೆಲ್ ಎಂಬಾತನನ್ನು ನಾಂಟೆರ್ರೆ ಎಂಬಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಟ್ರಾಫಿಕ್ ಸಿಗ್ನಲ್ನಲ್ಲಿ ಕಾರು ನಿಲ್ಲಿಸದ ಕಾರಣಕ್ಕೆ ಗುಂಡಿಟ್ಟು ಹತ್ಯೆ ಮಾಡಿದ್ದರು. ಈ ಘಟನೆಯ ನಂತರ ಪೊಲೀಸರ ವಿರುದ್ಧ ಫ್ರಾನ್ಸ್ನಾದ್ಯಂತ ಗಲಭೆ ಭುಗಿಲೆದ್ದಿದೆ. ಹಿಂಸಾತ್ಮಕ ಪ್ರತಿಭಟನೆಗಳ ನಡುವೆ 1,300 ಕ್ಕೂ ಹೆಚ್ಚು ಜನರನ್ನು ಬಂಧಿಸಿದ ನಂತರ ಸಾವನ್ನಪ್ಪಿದ್ದ ಬಾಲಕನ ಮೃತದೇಹದ ಅಂತ್ಯಕ್ರಿಯೆ ಪ್ಯಾರಿಸ್‌ನ ಉಪನಗರ ನಾಂಟೆರ್ರೆಯಲ್ಲಿರುವ ಮಸೀದಿಯ ಆವರಣದಲ್ಲಿ ನಡೆಯಿತು.
ಇದಕ್ಕೂ ಮುನ್ನ, ಅಂತಿಮ ವಿಧಿವಿಧಾನಗಳನ್ನು ಪೂರೈಸಲಾಯಿತು. ನಂತರ ಮೃತದೇಹವನ್ನು ಅಂತ್ಯಕ್ರಿಯೆಗೆ ಕೊಂಡೊಯ್ಯಲಾಗಿದೆ. ಈ ವೇಳೆ ಪರಿಸ್ಥಿತಿ ಶಾಂತವಾಗಿತ್ತು. ಮೊದಲೇ ಗಲಭೆ ಇರುವ ಕಾರಣ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಸೀದಿಯ ಸುತ್ತಲಿನ ಪ್ರದೇಶದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ಗುಂಡು ಹಾರಿಸಿದ ಪೊಲೀಸ್ ಅಧಿಕಾರಿಯ ಬಂಧನ: ನಹೆಲ್ನ ಹತ್ಯೆಯ ನಂತರ ಪ್ಯಾರಿಸ್ನಲ್ಲಿ ಪ್ರತಿಭಟನೆ ಶುರುವಾಗಿ ನಂತರ ಅದು ಭಾರಿ ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನಾಕಾರರು ಸರ್ಕಾರಿ ಟೌನ್ ಹಾಲ್‌ಗಳು, ಶಾಲೆಗಳು ಮತ್ತು ಪೊಲೀಸ್ ಠಾಣೆಗಳು ಮತ್ತು ಸೂಪರ್‌ಮಾರ್ಕೆಟ್‌ಗಳಂತಹ ಇತರ ಕಟ್ಟಡಗಳನ್ನು ಗುರಿಯಾಗಿಸಿಕೊಂಡರು. ನೂರಾರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಬೆಳವಣಿಗೆಗಳ ನಂತರ ಬಾಲಕನನ್ನು ಗುಂಡಿಕ್ಕಿ ಕೊಂದ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ.
ಹತ್ಯೆ ಕುರಿತು ಪ್ರತಿಕ್ರಿಯಿಸಿದ ನಹೆಲ್ನ ತಾಯಿ, "ನನ್ನ ಮಗನ ಸಾವಿಗೆ ಪೊಲೀಸರೇ ಹೊಣೆಗಾರರು" ಎಂದು ಬೇಸರ ವ್ಯಕ್ತಪಡಿಸಿದರು. ಅಂತ್ಯಕ್ರಿಯೆಯ ಹಿಂದಿನ ದಿನ ರಾಷ್ಟ್ರದಲ್ಲಿ ಎಲ್ಲ ದೊಡ್ಡ ಮಟ್ಟದ ಪ್ರಮುಖ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿತ್ತು. ಶನಿವಾರ ಮುಂಜಾನೆ ಪ್ರತಿಭಟನೆಗಳು ಮುಂದುವರಿದವು. ಫ್ರಾನ್ಸ್ನ ಹಲವಾರು ಸ್ಥಳಗಳಲ್ಲಿ ಗಲಭೆಗಳು ಭುಗಿಲೆದ್ದವು. ಪ್ರತಿಭಟನಕಾರರನ್ನು ನಿಯಂತ್ರಿಸುತ್ತಿದ್ದ 79 ಪೊಲೀಸರಲ್ಲದೇ ಅಗ್ನಿಶಾಮಕ ದಳದವರೂ ಗಾಯಗೊಂಡಿದ್ದಾರೆ. 58 ಪೊಲೀಸ್ ಠಾಣೆಗಳ ಮೇಲೆ ದಾಳಿಗಳು ನಡೆದಿವೆ. ಶುಕ್ರವಾರ ಸಂಜೆ ಓಲ್ಡ್ ಫೋರ್ಟ್ ಆಫ್ ಮಾರ್ಸಿಲ್ಲೆಯಲ್ಲಿ ಸ್ಪೋಟ ಸಂಭವಿಸಿದ್ದು, ಯಾವುದೇ ಸಾವು-ನೋವು ವರದಿಯಾಗಿಲ್ಲ.
ತುರ್ತು ಸಭೆ ಕರೆದಿದ್ದ ಅಧ್ಯಕ್ಷ ಮ್ಯಾಕ್ರನ್: ಘಟನೆಯ ಕುರಿತು ಫ್ರಾನ್ಸ್ ಅಧ್ಯಕ್ಷರು ಕಳೆದ ಬುಧವಾರ ತುರ್ತು ಸಭೆ ಕರೆದಿದ್ದರು. ಬಾಲಕನ ಹತ್ಯೆಯನ್ನು ಸಮರ್ಥಿಸಲಾಗದು ಎಂದು ಇದೇ ವೇಳೆ ಹೇಳಿದ್ದರು. ಪ್ರಧಾನಿ ಎಲಿಜಬೆತ್ ಬೋರ್ನ್ ಕೂಡಾ ಗುಂಡು ಹಾರಿಸಿದ್ದು ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಖಂಡಿಸಿದ್ದಾರೆ.
ಇದನ್ನೂ ಓದಿ: ಬಾಲಕನನ್ನು ಗುಂಡಿಕ್ಕಿ ಕೊಂದ ಪೊಲೀಸರು.. ಭುಗಿಲೆದ್ದ ಆಕ್ರೋಶ, ನೂರಾರು ಕಾರುಗಳಿಗೆ ಬೆಂಕಿ, ಪಟಾಕಿಯಿಂದ ದಾಳಿ