ಪ್ಯಾರಿಸ್ (ಫ್ರಾನ್ಸ್): 17 ವರ್ಷದ ನಹೆಲ್ ಎಂಬ ಬಾಲಕನನ್ನು ಪೊಲೀಸ್ ಅಧಿಕಾರಿಯೊಬ್ಬರು ಗುಂಡಿಕ್ಕಿ ಕೊಂದ ನಂತರ ಫ್ರಾನ್ಸ್‌ನಾದ್ಯಂತ ಪ್ರಾರಂಭವಾದ ಗಲಭೆ ಮುಂದುವರೆದಿದೆ. ಭಾನುವಾರ ಮುಂಜಾನೆ ಪೊಲೀಸರೊಂದಿಗೆ ಘರ್ಷಣೆಗಿಳಿದ ಗಲಭೆಕೋರರು, ಮಧ್ಯರಾತ್ರಿ ಪ್ಯಾರಿಸ್‌ನ ದಕ್ಷಿಣ ವಿಭಾಗದ ಮೇಯರ್ ಮೆನೆಗೆ ಕಾರು ನುಗ್ಗಿಸಿದರು. ಘಟನೆಯಲ್ಲಿ ಮೇಯರ್ ಪತ್ನಿ ಹಾಗೂ ಓರ್ವ ಮಗ ಗಾಯಗೊಂಡಿದ್ದಾರೆ.
ಪ್ಯಾರಿಸ್‌ನ ಉಪನಗರವಾದ ಎಲ್ 'ಹೇ-ಲೆಸ್-ರೋಸಸ್‌ನಲ್ಲಿರುವ ಮೇಯರ್ ವಿನ್ಸೆಂಟ್ ಜೀನ್‌ಬ್ರುನ್ ಅವರ ಮನೆಗೆ ಕಾರು ನುಗ್ಗಿಸಿ ಬೆಂಕಿ ಹಚ್ಚಲಾಗಿದೆ. ಇದು ಮೇಯರ್ ಅವರನ್ನು ಗುರಿಯಾಗಿಸಿ ಮಾಡಿರುವ ವೈಯಕ್ತಿಕ ದಾಳಿ ಎಂದೇ ಹೇಳಲಾಗಿದೆ. ಈ ಬಗ್ಗೆ ಮೇಯರ್ ಟ್ವಿಟ್ ಮಾಡಿದ್ದಾರೆ.
"ಮಧ್ಯರಾತ್ರಿ 1.30ಕ್ಕೆ ಕಾರಿನ ಮೂಲಕ ಮನೆ ಮೇಲೆ ದಾಳಿ ನಡೆಸಲಾಗಿದೆ. ನಿದ್ರೆಯಲ್ಲಿದ್ದ ಪತ್ನಿ ಮತ್ತು ಓರ್ವ ಮಗನಿಗೆ ಗಾಯಗಳಾಗಿವೆ. ನಾನು ಟೌನ್ಹಾಲ್ನಲ್ಲಿ ಹಿಂಸಾಚಾರ ಪ್ರತಿಭಟನೆ ಬಗ್ಗೆ ವಿಚಾರಣೆ ನಡೆಸುತ್ತಿದ್ದೆ. ದಾಳಿ ಭಯಾನಕ ಮತ್ತು ಅವಮಾನಕರವಾಗಿದ್ದು, ಇದೀಗ ಹೊಸ ರೂಪ ಪಡೆದುಕೊಂಡಿದೆ" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಾಲಕನ ಅಜ್ಜಿಯಿಂದ ಹಿಂಸಾಚಾರ ಕೊನೆಗೊಳಿಸುವಂತೆ ಮನವಿ: ಶನಿವಾರ ನಹೆಲ್ನ ಅಂತ್ಯಕ್ರಿಯೆಯ ಬಳಿಕ ರಾತ್ರಿಯಾಗುತ್ತಿದ್ದಂತೆ, ಸಣ್ಣ ಜನಸಮೂಹವು ಎಲಿಸೀಸ್‌ನಲ್ಲಿ ಪ್ರತಿಭಟಿಸಲು ಜಮಾಯಿಸಿತ್ತು. ಪೊಲೀಸರು ಇದಕ್ಕೆ ಅವಕಾಶ ನೀಡದೇ ಪ್ರತಿಭಟನಾಕಾರರನ್ನು ಚದುರಿಸಿದ್ದರು. ನಹೆಲ್ನ ಅಜ್ಜಿ, ಹಿಂಸಾಚಾರದ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ಭಾನುವಾರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಆದರೂ ಪ್ರತಿಭಟನೆಗಳು ಮುಂದುವರೆದಿವೆ.
ಪ್ರಧಾನಮಂತ್ರಿ ಎಲಿಸಬೆತ್ ಬೋರ್ನ್ ಅವರು ಆಂತರಿಕ ಭದ್ರತಾ ಸಚಿವ ಜೆರಾಲ್ಡ್ ಡರ್ಮನಿನ್ ಮತ್ತು ಇತರ ಅಧಿಕಾರಿಗಳೊಂದಿಗೆ ಮೇಯರ್ ಜೀನ್‌ಬ್ರನ್ ಅವರನ್ನು ಭೇಟಿ ಮಾಡಿ, ಹೆಚ್ಚಿನ ಭದ್ರತೆಯೊಂದಿಗೆ ನಗರದಲ್ಲಿ ಶಾಂತಿ ಕಾಪಾಡುವ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಗಲಭೆ ಆರಂಭವಾದ ಸಂದರ್ಭದಲ್ಲಿ ಒಟ್ಟು 719 ಜನರನ್ನು ಪೊಲೀಸರು ಬಂಧಿಸಿದ್ದರು. ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಿದ ಬಳಿಕ ಬಂಧಿತರ ಸಂಖ್ಯೆ 3,000ಕ್ಕೆ ತಲುಪಿದೆ ಎಂದು ಸ್ಥಳೀಯ ಸುದ್ಧಿ ಸಂಸ್ಥೆಗಳು ವರದಿ ಮಾಡಿವೆ.
ಪ್ರಕರಣದ ಹಿನ್ನೆಲೆ ಹೀಗಿದೆ..: ಜೂನ್ 27ರಂದು ಅಲ್ಜೀರಿಯಾ ಮೂಲದ ನಹೆಲ್ ಎಂಬ ಬಾಲಕನನ್ನು ನಾಂಟೆರ್ರೆ ಎಂಬಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಟ್ರಾಫಿಕ್ ಸಿಗ್ನಲ್ನಲ್ಲಿ ಕಾರು ನಿಲ್ಲಿಸದ ಕಾರಣಕ್ಕೆ ಗುಂಡಿಟ್ಟು ಹತ್ಯೆ ಮಾಡಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ವಿರೋಧಿಸಿ ಫ್ರಾನ್ಸ್‌ನ ಅನೇಕ ನಗರಗಳಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು. ಪ್ರತಿಭಟನೆಗಳು ಹಿಂಸಾಚಾರದ ಸ್ವರೂಪ ಪಡೆದುಕೊಂಡವು. ಕಳೆದ ಐದು ದಿನಗಳಿಂದ ಫ್ರಾನ್ಸ್ ಹೊತ್ತಿ ಉರಿಯುತ್ತಿದೆ.
ಜರ್ಮನಿ ಭೇಟಿ ಮುಂದೂಡಿದ ಫ್ರಾನ್ಸ್ ಅಧ್ಯಕ್ಷ: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ತಮ್ಮ ಜರ್ಮನಿ ಪ್ರವಾಸವನ್ನು ಸದ್ಯಕ್ಕೆ ಮುಂದೂಡಿದ್ದಾರೆ. ಗಲಭೆಕೋರರನ್ನು ತಡೆಯಲು ದೇಶಾದ್ಯಂತ 45,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಫ್ರೆಂಚ್ ಆಂತರಿಕ ಭದ್ರತಾ ಸಚಿವ ಜೆರಾಲ್ಡ್ ಡರ್ಮನಿನ್ ಹೇಳಿದ್ದಾರೆ.