ಲಂಡನ್ : ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ತಮ್ಮ ಸಚಿವ ಸಂಪುಟವನ್ನು ಪುನರ್ ರಚಿಸುತ್ತಿದ್ದು, ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರನ್ನು ಬ್ರಿಟನ್ನ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ. ಕ್ಯಾಮರೂನ್ ಅವರನ್ನು ವಿದೇಶಾಂಗ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ರಾಜ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಡೌನಿಂಗ್ ಸ್ಟ್ರೀಟ್ ಕಚೇರಿಯು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಲಂಡನ್ನಲ್ಲಿ ನಡೆದ ಪ್ಯಾಲೆಸ್ಟೈನ್ ಪರ ಪ್ರತಿಭಟನೆಗಳ ಬಗ್ಗೆ ಪೊಲೀಸರನ್ನು ಟೀಕಿಸಿ ದಿ ಟೈಮ್ಸ್ ಪತ್ರಿಕೆಯಲ್ಲಿ ವಿವಾದಾತ್ಮಕ ಲೇಖನ ಬರೆದ ನಂತರ ಭಾರತೀಯ ಮೂಲದ ಸುಯೆಲ್ಲಾ ಬ್ರೇವರ್ಮನ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಆ ಸ್ಥಾನಕ್ಕೆ ಹೊಸ ಗೃಹ ಕಾರ್ಯದರ್ಶಿಯಾಗಿ ಜೇಮ್ಸ್ ಕ್ಲೆವರ್ಲಿ ಅವರನ್ನು ನೇಮಿಸಲಾಗಿದೆ. ಪಕ್ಷದ ಬಲಪಂಥೀಯರನ್ನು ಪ್ರತಿನಿಧಿಸುತ್ತಿರುವ ಭಾರತೀಯ ಮೂಲದ ಟೋರಿ ಪಕ್ಷದ ನಾಯಕಿ ಬ್ರೇವರ್ಮನ್ ಅವರು ಪೊಲೀಸರ ಕ್ರಮಗಳ ಬಗ್ಗೆ ನೀಡಿದ ಹೇಳಿಕೆಗಳ ವಿವಾದದ ಮಧ್ಯೆ ಸ್ಥಾನ ತೊರೆಯುವಂತೆ ಅವರಿಗೆ ಸುನಕ್ ಸೂಚಿಸಿದ್ದರು.
2010 ರಿಂದ 2016 ರವರೆಗೆ ಬ್ರಿಟನ್ ನಾಯಕರಾಗಿದ್ದ ಡೇವಿಡ್ ಕ್ಯಾಮರೂನ್ ಬ್ರೆಕ್ಸಿಟ್ ಜನಾಭಿಪ್ರಾಯ ಸಂಗ್ರಹದಲ್ಲಿ ಸೋತ ನಂತರ ರಾಜೀನಾಮೆ ನೀಡಿದ್ದರು. ಅನಿರೀಕ್ಷಿತ ಬೆಳವಣಿಗೆಯಲ್ಲಿ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡ ಜೇಮ್ಸ್ ಕ್ಲೆವರ್ಲಿ ಅವರ ಸ್ಥಾನವನ್ನು ಅವರು ತುಂಬಲಿದ್ದಾರೆ. "ಅವರ ಕೆಲ ವೈಯಕ್ತಿಕ ನಿರ್ಧಾರಗಳನ್ನು ನಾನು ಒಪ್ಪದಿದ್ದರೂ, ರಿಷಿ ಸುನಕ್ ಪ್ರಬಲ ಮತ್ತು ಸಮರ್ಥ ಪ್ರಧಾನಿ ಎಂಬುದು ನನಗೆ ಸ್ಪಷ್ಟವಾಗಿದೆ" ಎಂದು ಡೇವಿಡ್ ಕ್ಯಾಮರೂನ್ ಹೇಳಿದರು.
ಡೇವಿಡ್ ಕ್ಯಾಮರೂನ್ ಅವರಿಗೆ ಬ್ರಿಟನ್ನ ಮೇಲ್ಮನೆಯಾದ ಹೌಸ್ ಆಫ್ ಲಾರ್ಡ್ಸ್ನಲ್ಲಿ ಸ್ಥಾನ ನೀಡಲು ಕಿಂಗ್ ಚಾರ್ಲ್ಸ್ ಅನುಮೋದನೆ ನೀಡಿದ್ದಾರೆ ಎಂದು ರಿಷಿ ಸುನಕ್ ಅವರ ಕಚೇರಿ ತಿಳಿಸಿದೆ. ಡೇವಿಡ್ ಕ್ಯಾಮರೂನ್ ಯುಕೆ ಸಂಸತ್ತಿನ ಚುನಾಯಿತ ಸದಸ್ಯರಲ್ಲ ಎಂಬುದು ಗಮನಾರ್ಹ.
ಕ್ಯಾಮರೂನ್ ಯುಕೆಯ ಮಾಜಿ ಪ್ರಧಾನಿಯಾಗಿದ್ದು, ಕನ್ಸರ್ವೇಟಿವ್ ಪಕ್ಷದ ಹಿರಿಯ ನಾಯಕರಾಗಿದ್ದಾರೆ. ಯುನೈಟೆಡ್ ಕಿಂಗ್ಡಮ್ನ ಅನೇಕ ಪ್ರಮುಖ ರಾಜಕಾರಣಿಗಳಂತೆ ಅವರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆಯುವ ಮೊದಲು ಪ್ರತಿಷ್ಠಿತ ಎಟನ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ಕ್ಯಾಮರೂನ್ ನೇತೃತ್ವದಲ್ಲಿ ಕನ್ಸರ್ವೇಟಿವ್ ಪಕ್ಷವು 2010 ಮತ್ತು 2015ರಲ್ಲಿ ಎರಡು ಸಾರ್ವತ್ರಿಕ ಚುನಾವಣೆಗಳನ್ನು ಗೆದ್ದುಕೊಂಡಿತ್ತು. ಆದರೆ, 2016 ರ ಬ್ರೆಕ್ಸಿಟ್ ಮತದಾನದ ನಂತರ, ಅವರು ಹುದ್ದೆಗೆ ರಾಜೀನಾಮೆ ನೀಡಿದರು ಮತ್ತು ಥೆರೆಸಾ ಮೇ ಪ್ರಧಾನಿಯಾದರು.
ಇದನ್ನೂ ಓದಿ : ಲಂಡನ್ನ ಸ್ವಾಮಿ ನಾರಾಯಣ ದೇವಾಲಯಕ್ಕೆ ಸಚಿವ ಜೈಶಂಕರ್ ಭೇಟಿ