ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನವು ತನ್ನ ಇತಿಹಾಸದಲ್ಲೇ ಅತಿ ಕೆಟ್ಟ ಹಿಟ್ಟಿನ ಕೊರತೆಯ ಸಮಸ್ಯೆ ಎದುರಿಸುತ್ತಿದೆ. ಗೋದಿಗಾಗಿ ದೇಶದ ಎಲ್ಲ ಭಾಗದಲ್ಲೂ ಹಾಹಾಕಾರ ಉಂಟಾಗಿದ್ದು, ಖೈಬರ್ ಪಖ್ತುನಖ್ವಾ, ಸಿಂಧ್ ಮತ್ತು ಬಲೂಚಿಸ್ತಾನ ಪ್ರಾಂತ್ಯಗಳಲ್ಲಿ ಗೋದಿ ಹಿಟ್ಟು ಪಡೆಯಲು ನೂಕುನುಗ್ಗಲು ಉಂಟಾಗಿ ಕಾಲ್ತುಳಿತದ ಘಟನೆಗಳು ನಡೆದ ಬಗ್ಗೆ ವರದಿಯಾಗಿವೆ. ಪಾಕಿಸ್ತಾನದ ಪ್ರಮುಖ ಮಾಧ್ಯಮವೊಂದರ ವರದಿಯ ಪ್ರಕಾರ, ಮಾರುಕಟ್ಟೆಯಲ್ಲಿ ಸಿಗುವ ಸಬ್ಸಿಡಿ ಇರುವ ಹಿಟ್ಟಿನ ಚೀಲಗಳನ್ನು ಪಡೆದುಕೊಳ್ಳಲು ಜನತೆ ಪ್ರತಿದಿನ ಹತ್ತಾರು ಗಂಟೆಗಳ ಕಾಲ ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಸಬ್ಸಿಡಿ ಹಿಟ್ಟಿನ ಚೀಲಗಳ ಕೊರತೆಯಿಂದ ಅಷ್ಟು ಕಾದರೂ ಜನರಿಗೆ ಅವು ಸಿಗುತ್ತಿಲ್ಲ.
ಶಸ್ತ್ರಸಜ್ಜಿತ ಯೋಧರ ಬೆಂಗಾವಲಿನಲ್ಲಿ ಮಿನಿ ಟ್ರಕ್‌ಗಳು ಮತ್ತು ವ್ಯಾನ್‌ಗಳು ಹಿಟ್ಟು ಹಂಚಲು ಹೋಗುತ್ತಿರುವಾಗ ವಾಹನಗಳ ಸುತ್ತಲೂ ಜನರು ಜಮಾಯಿಸಿ ಪರಸ್ಪರ ತಳ್ಳಾಟ ನಡೆಸಿರುವ ದೃಶ್ಯಗಳು ಕಾಣಿಸುತ್ತಿವೆ. ಹಿಟ್ಟಿನ ವ್ಯಾಪಾರ ಕೇಂದ್ರಗಳು ಮತ್ತು ತಂದೂರ್‌ಗಳಲ್ಲಿ ಹಲವಾರು ಘರ್ಷಣೆಗಳು ನಡೆದ ಬಗ್ಗೆ ವರದಿಯಾಗಿವೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಗೋಧಿ ಮತ್ತು ಹಿಟ್ಟಿನ ಬೆಲೆಗಳು ಗಗನಕ್ಕೇರಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕರಾಚಿಯಲ್ಲಿ ಹಿಟ್ಟು ಪ್ರತಿ ಕಿಲೋಗ್ರಾಂಗೆ 140 ರೂ.ನಿಂದ 160 ರೂ.ಗೆ ಮಾರಾಟವಾಗುತ್ತಿದೆ. ಇಸ್ಲಾಮಾಬಾದ್ ಮತ್ತು ಪೇಶಾವರದಲ್ಲಿ, 10 ಕೆಜಿ ಹಿಟ್ಟಿನ ಪ್ರತಿ ಬ್ಯಾಗ್ 1,500 ರೂ.ಗೆ ಮಾರಾಟವಾಗುತ್ತಿದ್ದು, 20 ಕೆಜಿ ಹಿಟ್ಟಿನ ಬ್ಯಾಗ್ 2,800 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್ ಪ್ರಾಂತ್ಯದ ಗಿರಣಿ ಮಾಲೀಕರು ಹಿಟ್ಟಿನ ಬೆಲೆಯನ್ನು ಕಿಲೋಗ್ರಾಂಗೆ 160 ರೂ.ಗೆ ಹೆಚ್ಚಿಸಿದ್ದಾರೆ. ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಗೋಧಿ ದಾಸ್ತಾನು ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ಬಲೂಚಿಸ್ತಾನದ ಆಹಾರ ಸಚಿವ ಜಮಾರಕ್ ಅಚಕ್‌ಝೈ ಹೇಳಿದ್ದಾರೆ. ಬಲೂಚಿಸ್ತಾನಕ್ಕೆ ತಕ್ಷಣವೇ 4,00,000 ಚೀಲ ಗೋದಿ ಅಗತ್ಯವಿದೆ. ಇಲ್ಲದಿದ್ದರೆ ಬಿಕ್ಕಟ್ಟು ತೀವ್ರಗೊಳ್ಳಬಹುದು ಎಂದು ಅವರು ಎಚ್ಚರಿಸಿದರು.
ಹಾಗೆಯೇ, ಖೈಬರ್ ಪಖ್ತುನಖ್ವಾ ಪ್ರಾಂತ್ಯ ಕೂಡ ಅತ್ಯಧಿಕ ಹಿಟ್ಟಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಲ್ಲಿ 20 ಕಿಲೋಗ್ರಾಂ ಹಿಟ್ಟಿನ ಚೀಲವನ್ನು 3100 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರವು ಹಿಟ್ಟಿನ ಬೆಲೆ ಸ್ಥಿರವಾಗಿಡಲು ವಿಫಲವಾಗಿದೆ ಎಂದು ಪಾಕಿಸ್ತಾನ ಮೂಲದ ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. ಸಿಂಧ್ ಸರ್ಕಾರದ ಸಬ್ಸಿಡಿ ಹಿಟ್ಟನ್ನು ಜನರಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ಮಿರ್ಪುರ್ಖಾಸ್ ಎಂಬಲ್ಲಿ ಕಾಲ್ತುಳಿತ ಉಂಟಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ತಲಾ 200 ಚೀಲಗಳನ್ನು ಹೊತ್ತ ಎರಡು ವಾಹನಗಳು ಗುಲಿಸ್ತಾನ್-ಎ-ಬಲ್ದಿಯಾ ಪಾರ್ಕ್‌ನ ಹೊರಗೆ ಹಿಟ್ಟು ಮಾರಾಟ ಮಾಡುತ್ತಿದ್ದಾಗ ಕಮಿಷನರ್ ಕಚೇರಿ ಬಳಿ ಕಾಲ್ತುಳಿತ ಉಂಟಾಗಿ ಸಾವು ಸಂಭವಿಸಿದೆ.
ಖೈಬರ್ ಪಖ್ತುನಖ್ವಾದಲ್ಲಿ ಕಳೆದ ವಾರಗಳಲ್ಲಿ ಬೆಲೆ ವಿಷಯದ ಬಗ್ಗೆ ಹಿಟ್ಟಿನ ವಿತರಕರು ಮತ್ತು ತಂದೂರ್‌ಗಳಲ್ಲಿ ಹಲವಾರು ಘರ್ಷಣೆಗಳು ವರದಿಯಾಗಿವೆ. ಕೆಲ ದಿನಗಳ ಹಿಂದೆ, ಪಿಷ್ಟಾಖರಾದಲ್ಲಿ ಇಬ್ಬರು ಸ್ಥಳೀಯರು ತಂದೂರ್ ಮಾಲೀಕರೊಂದಿಗೆ ರೋಟಿಯ ಬೆಲೆ ವಿಚಾರದಲ್ಲಿ ಗಲಾಟೆ ಮಾಡಿ ಆತನ ಮೇಲೆ ಗುಂಡು ಹಾರಿಸಿದ್ದರು. ಈ ಸಂಘರ್ಷದಲ್ಲಿ ಓರ್ವ ದಾರಿಹೋಕ ಗುಂಡೇಟಿನಿಂದ ಮೃತಪಟ್ಟಿದ್ದ. ಇಲ್ಲಿ ಸಬ್ಸಿಡಿ ಹಿಟ್ಟು ವಿತರಣೆ ವೇಳೆ ಗಲಭೆಯಾಗಿ ಹಲವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಗೋಧಿ ಹಿಟ್ಟು ರಫ್ತಿಗೆ ನಿರ್ಬಂಧ ವಿಧಿಸಿದ ಕೇಂದ್ರ ಸರ್ಕಾರ