ವಿಶ್ವಸಂಸ್ಥೆ: ನಿನ್ನೆಗೆ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿ ಒಂದು ವರುಷ ಕಳೆದಿದೆ. ಯುದ್ದ ನಡೆದು ಒಂದು ವರುಷ ತುಂಬಿದ ದಿನದಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರಷ್ಯಾ ಉಕ್ರೇನ್ ಮುಖಾಮುಖಿಯಾಗಿದ್ದು, ದಾಳಿಯಲ್ಲಿ ಸಾವನ್ನಪ್ಪಿದ್ದ ಸಾವಿರಾರು ಜನರಿಗೆ ಮೌನಚರಣೆಯನ್ನು ಕೈಗೊಂಡಿತು. ಇನ್ನು ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ ಅಧಿವೇಶನವು ಔಪಚಾರಿಕವಾಗಿ ಪ್ರಾರಂಭವಾಗುವ ಮೊದಲೇ ಈ ಎರಡು ರಾಷ್ಟ್ರಗಳು ಕಿತ್ತಾಡಲು ಪ್ರಾರಂಭಿಸಿದವು.
ರಷ್ಯಾದ ರಾಯಭಾರಿ ಸ್ಪೀಕರ್ ಪಟ್ಟಿಯಲ್ಲಿ ಕೌನ್ಸಿಲ್ ಸದಸ್ಯರಿಗಿಂತ ಉಕ್ರೇನ್ ಏಕೆ ಮುಂದಿದೆ ಎಂದು ತಿಳಿಸಿ ಎಂದು ಒತ್ತಾಯಿಸಲು ಶುರುಮಾಡಿದರು. ಈ ಎರಡೂ ದೇಶಗಳು ಯುದ್ದದಲ್ಲಿ ಸಾವನ್ನಪ್ಪಿದವರಿಗೆ ಗೌರವ ಸಲ್ಲಿಸಲೂ ಕೂಡ ಜಗಳವಾಡಿಕೊಂಡರು. ಇದರ ಮಧ್ಯೆ ರಷ್ಯಾ - ಉಕ್ರೇನ್ ನಡುವೆ ಶಾಂತಿ ಏರ್ಪಡಿಸುವ ಬಗ್ಗೆ ಚರ್ಚೆ ನಡೆಸಲಾಯಿತು.
ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ, ಈ ದುರಂತದ ದಿನವಾದ ಇಂದು ರಷ್ಯಾದ ದಾಳಿಯ ಪರಿಮಣಾಮ ಮರಣವಾದ ಪ್ರತಿಯೊಂದು ಜೀವಕ್ಕೂ ಒಂದು ನಿಮಿಷ ಮೌನವನ್ನು ಆಚರಿಸಲು ನಾನು ದಯವಿಟ್ಟು ಕೇಳಿಕೊಳ್ಳುತ್ತೇನೆ ಎಂದರು. ಈ ಸಂದರ್ಭದಲ್ಲಿ ಪರಿಷತ್ತಿನ ಸಭಾಂಗಣದಲ್ಲಿ ಎಲ್ಲರೂ ಮೌನವಾಗಿ ನಿಂತರು. ಆದರೆ, ಸಾವನ್ನಪ್ಪಿದವರ ಗೌರವದ ಕ್ಷಣದಲ್ಲಿಯೂ ಸಹ ರಷ್ಯಾ ಮತ್ತು ಉಕ್ರೇನ್ ನಡುವೆ ಭಿನ್ನಾಭಿಪ್ರಾಯ ಮೂಡಿದ್ದವು.
ಮೌನಚರಣೆಯ ನಂತರ ಸಚಿವ ಕುಲೆಬಾ ಕುಳಿತುಕೊಂಡ ತಕ್ಷಣ, ರಷ್ಯಾದ ರಾಯಭಾರಿ ವಾಸಿಲಿ ನೆಬೆಂಜಿಯಾ, 2014 ರಲ್ಲಿ ಉಕ್ರೇನ್ ನಡವಳಿಕೆಯನ್ನು ನೆನಪಿಸಿ ಮಾತನಾಡಿದರು. 2014 ರಲ್ಲಿ ಉಕ್ರೇನ್ನ ಮಾಸ್ಕೋ ಸ್ನೇಹಿ ಅಧ್ಯಕ್ಷರನ್ನು ಸಾಮೂಹಿಕ ಪ್ರತಿಭಟನೆ ಮಾಡುವ ಮೂಲಕ ಕಚೇರಿಯಿಂದ ಹೊರಹಾಕಲಾಯಿತು. ಈ ಮೂಲಕ ಉಕ್ರೇನ್ನೊಂದಿಗೆ ಒಳಗಿಂದದೊಳಗೆ ಸಂಘರ್ಷ ಪ್ರಾರಂಭವಾಯಿತು ಎಂದರು.
ಇನ್ನು ಉಕ್ರೇನ್ ಸಚಿವ ಡಿಮಿಟ್ರೋ ಕುಲೆಬಾ, ಉಕ್ರೇನ್ ಖಂಡಿತಾ ಗೆಲ್ಲುತ್ತದೆ ಮತ್ತು ರಷ್ಯಾದ ಅಧ್ಯಷ ಪುಟಿನ್ ಯೋಚಿಸುದಕ್ಕಿಂತ ಮೊದಲೇ ಎಲ್ಲ ಕಳೆದುಕೊಳ್ಳಲಿದ್ದಾರೆ ಎಂದು ವಿಶ್ವಸಂಸ್ಥೆಯಲ್ಲಿ ತಿಳಿಸಿದರು. ಜೊತೆಗೆ ರಷ್ಯಾದ ಅಧಿಕಾರಿಗಳಿಗೆ , ನೀವು ಮಾಡಿದ ಅಪರಾಧದಿಂದ ತಪ್ಪಿಸಿಕೊಳ್ಳುತ್ತೀರಿ ಎಂದು ಭಾವಿಸಿದ್ದಿರಿ, ಆದರೆ ಖಂಡಿತವಾಗಿಯೂ ನೀವು ಅನುಭವಿಸಲಿದ್ದಿರಿ ಎಂದು ಖಡಕ್ ಆಗಿಯೇ ಉತ್ತರ ನೀಡಿದರು.
ಅಧ್ಯಕ್ಷ ವೊಲೊಡಿಮ್ರಿ ಝೆಲೆನ್ಸ್ಕಿಯ ಶಾಂತಿ ಯೋಜನೆಯನ್ನು ಕಾರ್ಯಗತಗೊಳಿಸಲು ಎಲ್ಲಾ ದೇಶಗಳು ಪ್ರಯತ್ನಿಸಬೇಕು ಎಂದು ಇದೇ ವೇಳೆ ಒತ್ತಾಯಿಸಿದರು. ಯುಎನ್ ಚಾರ್ಟರ್ ಅಗತ್ಯವಿರುವಂತೆ ತನ್ನ ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಎತ್ತಿಹಿಡಿಯಬೇಕೆಂದು ಒತ್ತಾಯಿಸುವ 141 ದೇಶಗಳ ಬೆಂಬಲದೊಂದಿಗೆ ಗುರುವಾರ ಸಾಮಾನ್ಯ ಸಭೆಯ ನಿರ್ಣಯ ಅಂಗೀಕರಿಸಿತು. ಈ ನಿರ್ಣಯವು ಯುದ್ಧವನ್ನು ನಿಲ್ಲಿಸಲು ಮತ್ತು ಉಕ್ರೇನ್‌ನಿಂದ ಎಲ್ಲಾ ರಷ್ಯಾದ ಪಡೆಗಳನ್ನು ಹಿಂತೆಗೆದುಕೊಳ್ಳಲು ಕರೆ ನೀಡುತ್ತದೆ. ಈ ನಿರ್ಣಯವನ್ನು 15 ಕೌನ್ಸಿಲ್ ಸದಸ್ಯರಲ್ಲಿ 11 ಸದಸ್ಯರು ಬೆಂಬಲಿಸಿದರು. ಆದರೆ ರಷ್ಯಾ ಅದನ್ನು ವಿರೋಧಿಸಿತು.
ರಷ್ಯಾ ಯುದ್ಧವನ್ನು ನಿಲ್ಲಿಸಿದರೆ ಮತ್ತು ಉಕ್ರೇನ್ ತೊರೆದರೆ, ಈ ಯುದ್ಧವು ಕೊನೆಗೊಳ್ಳುತ್ತದೆ. ಅದೇ ಉಕ್ರೇನ್ ಹೋರಾಟವನ್ನು ನಿಲ್ಲಿಸಿದರೆ, ಉಕ್ರೇನ್ ಯುದ್ಧ ಕೊನೆಗೊಳ್ಳುತ್ತದೆ ಎಂದು ಬ್ಲಿಂಕನ್ ಹೇಳಿದರು. ವ್ಲಾಡಿಮಿರ್ ಪುಟಿನ್ ಈ ಯುದ್ಧವನ್ನು ಪ್ರಾರಂಭಿಸಿದರು. ಒಬ್ಬ ಮನುಷ್ಯನಾಗಿ ಅವರೇ ಅದನ್ನು ಕೊನೆಗೊಳಿಸಬಹುದು ಎಂದರು. ಗುಟೆರೆಸ್ ಮಾತನಾಡಿ ಬಂದೂಕುಗಳು ಈಗ ಮಾತನಾಡುತ್ತಿವೆ. ಆದರೆ, ಕೊನೆಯಲ್ಲಿ ಯುಎನ್ ಚಾರ್ಟರ್ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಶಾಂತಿ ರಾಜತಾಂತ್ರಿಕತೆ ಮತ್ತು ಹೊಣೆಗಾರಿಕೆಯ ಮಾರ್ಗವು ನ್ಯಾಯಯುತ ಮತ್ತು ಸುಸ್ಥಿರ ಶಾಂತಿಯ ಹಾದಿ ಎಂದು ನಮಗೆಲ್ಲರಿಗೂ ತಿಳಿದಿದೆ ಎಂದರು.
ಇದನ್ನೂ ಓದಿ: ಭಾರತೀಯ ಸೇನೆಯೊಂದಿಗೆ ಸಂಬಂಧ ಬೆಳೆಸಲು ಎದುರು ನೋಡುತ್ತಿದ್ದೇವೆ: ಪೆಂಟಗಾನ್