ವಾಷಿಂಗ್ಟನ್(ಅಮೆರಿಕ): ಭದ್ರತಾ ಕಾರಣಗಳಿಗಾಗಿ ಭಾರತದಲ್ಲಿ ನಿಷೇಧಕ್ಕೊಳಗಾಗಿರುವ ಚೀನಾ ಮೂಲದ ಟಿಕ್‌ಟಾಕ್ ಆ್ಯಪ್ ಅಮೆರಿಕದಲ್ಲೂ ಗೌಪ್ಯ ಮಾಹಿತಿಗಳನ್ನು ಸೋರಿಕೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಆ್ಯಪ್ ಚೀನಾ ಸರ್ಕಾರದ ಕೈಯಲ್ಲಿದೆ ಎಂದು ಹೇಳಿದ್ದಾರೆ.
ರೀಲ್ಸ್ಗಳನ್ನು ಮಾಡಲು ಅವಕಾಶವಿರುವ ಟಿಕ್‌ಟಾಕ್ ಬೈಟ್‌ಡ್ಯಾನ್ಸ್ ಎಂಬ ಖಾಸಗಿ ಸಂಸ್ಥೆಯ ಒಡೆತನದಲ್ಲಿದ್ದರೂ, ಅದನ್ನು ಚೀನಾ ಸರ್ಕಾರ ನಿರ್ವಹಿಸುತ್ತಿದೆ. ದೇಶದ ರಹಸ್ಯ ಮಾಹಿತಿ ಮತ್ತು ಜನರ ದಾಖಲೆಗಳನ್ನು ಕಲೆ ಹಾಕುತ್ತಿದೆ. ಇದು ಭದ್ರತೆಗೆ ಧಕ್ಕೆ ತರಲಿದೆ ಎಂದು ಎಫ್‌ಬಿಐ ನಿರ್ದೇಶಕ ಕ್ರಿಸ್ ವ್ರೇ ಹೇಳಿದ್ದಾರೆ.
ಅಮೆರಿಕದ ಡೇಟಾವನ್ನು ಸಂಗ್ರಹಿಸಿ ಚೀನಾ ಸರ್ಕಾರ ಬಳಸಿಕೊಳ್ಳುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಅಗತ್ಯ ಬಿದ್ದಲ್ಲಿ ಆ್ಯಪ್ ಅನ್ನು ದೇಶದಲ್ಲಿ ನಿಷೇಧಕ್ಕೆ ಒಳಪಡಿಸಬೇಕು ಎಂದು ಅಧಿಕಾರಿ ಸಲಹೆ ನೀಡಿದ್ದಾರೆ.
ಎಚ್ಚರಿಕೆ ನೀಡಿದ್ದ ಮಾಜಿ ಅಧ್ಯಕ್ಷ ಟ್ರಂಪ್: ಈ ಹಿಂದೆ 2020 ರಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಟಿಕ್‌ಟಾಕ್ ಕಾರ್ಯಾಚರಣೆಯ ಬಗ್ಗೆ ಶಂಕೆ ವ್ಯಕ್ತಪಡಿಸಿ ದೇಶದಲ್ಲಿ ಆ್ಯಪ್ ಬ್ಯಾನ್ ಮಾಡುವ ಎಚ್ಚರಿಕೆ ನೀಡಿದ್ದರು. ಟಿಕ್‌ಟಾಕ್ ಅನ್ನು ಅಮೆರಿಕ ಕಂಪನಿಗೆ ಮಾರಾಟ ಮಾಡಲು ಬೈಟ್‌ಡ್ಯಾನ್ಸ್ ಮೇಲೆ ಒತ್ತಡ ಬಂದಿತ್ತು. ಭದ್ರತಾ ಲೋಪವಾಗುತ್ತಿರುವ ಬಗ್ಗೆ ಅಮೆರಿಕದ ಅಧಿಕಾರಿಗಳು ಆ್ಯಪ್ ಜೊತೆ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಮುಂದಾಗಿದ್ದಾರೆ.
ಆರೋಪ ನಿರಾಕರಿಸಿದ ಟಿಕ್‌ಟಾಕ್: ತನ್ನ ಮೇಲೆ ಕೇಳಿ ಬಂದ ಆರೋಪವನ್ನು ನಿರಾಕರಿಸಿರುವ ಟಿಕ್‌ಟಾಕ್, ಅಮೆರಿಕದ ಯಾವುದೇ ಪ್ರಜೆಯ ಮಾಹಿತಿಯನ್ನು ಮಾರಾಟ ಮಾಡಲಾಗಿಲ್ಲ. ಡೇಟಾವನ್ನು ರಕ್ಷಿಸಲಾಗುತ್ತದೆ. ಆ್ಯಪ್ನಲ್ಲಿ ಚೀನಾ ಸರ್ಕಾರದ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ ಎಂದು ಹೇಳಿದೆ.
ಓದಿ: ಮಾನವನ ಮಿದುಳಿಗೆ ಚಿಪ್ ಅಳವಡಿಕೆ ಪರೀಕ್ಷೆಗೆ ಮುಂದಾದ ಮಸ್ಕ್ ಸಂಸ್ಥೆ: ಏನಿದು ಹೊಸ ಯೋಜನೆ?