ಇಸ್ಲಾಮಾಬಾದ್ (ಪಾಕಿಸ್ತಾನ): ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (Tehreek-e-Insaf -PTI) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆಗಳನ್ನು ನಡೆಸುವಂತೆ ಪಿಟಿಐ ತನ್ನ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಕರೆ ನೀಡಿದೆ. ರಾಜಧಾನಿ ಇಸ್ಲಾಮಾಬಾದ್ನ ಸೆಷನ್ಸ್ ನ್ಯಾಯಾಧೀಶ ಝೇಬಾ ಚೌಧರಿ ಅವರನ್ನು ಬೆದರಿಸಿದ ಆರೋಪ ಮೇಲೆ ಇಸ್ಲಾಮಾಬಾದ್ ಸದ್ದಾರ್ ನ್ಯಾಯಾಧೀಶ ಅಲಿ ಜಾವೇದ್ ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನೆಯ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಇಮ್ರಾನ್ ಬಂಧಿಸುವ ಸಾಧ್ಯತೆಗಳಿವೆ.
ಶನಿವಾರ ಎಫ್9 ಪಾರ್ಕ್ನಲ್ಲಿ ಪಿಟಿಐ ರ್ಯಾಲಿಯನ್ನುದ್ದೇಶಿಸಿ ಇಮ್ರಾನ್ ಖಾನ್ ಮಾತನಾಡಿದ್ದರು. ಇದರ ನಂತರ ಅಂದು ರಾತ್ರಿ 10 ಗಂಟೆ ಸುಮಾರಿಗೆ ಮಾರ್ಗಲ್ಲಾ ಪೊಲೀಸ್ ಠಾಣೆಯಲ್ಲಿ ಇಮ್ರಾನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪ್ರತಿಭಟನೆಗಾಗಿ ಮಾಜಿ ಪ್ರಧಾನಿ ಇಮ್ರಾನ್ ಅವರ ಬನಿ ಗಾಲಾ ಮನೆಯ ಬಳಿ ಎಲ್ಲ ಕಾರ್ಯಕರ್ತರು ಮತ್ತು ಬೆಂಬಲಿಗರು ನೆರೆಯುವಂತೆ ಪಿಟಿಐ ಮುಖಂಡ ಫವಾದ್ ಚೌಧರಿ ಕರೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಪಿಟಿಐ ಉಪಾಧ್ಯಕ್ಷ ಶಾ ಮಹಮೂದ್ ಖುರೇಷಿ, ಪಕ್ಷದ ಕಾರ್ಯಕರ್ತರು ಇಮ್ರಾನ್ ಖಾನ್ ಬಂಧನದ ಸಂದರ್ಭದಲ್ಲಿ ಪ್ರತಿಭಟನೆಗೆ ಪಕ್ಷದ ಕರೆಗಾಗಿ ಸಿದ್ಧರಾಗಿರಿ ಎಂದು ಹೇಳಿದರು.
ಇಮ್ರಾನ್ ಖಾನ್ ಅವರ ಬನಿ ಗಾಲಾ ನಿವಾಸಕ್ಕೆ ಹೋಗುವ ಮಾರ್ಗಗಳನ್ನು ಪೊಲೀಸರು ಬಂದ್ ಮಾಡಿದ್ದು, ಅನಧಿಕೃತ ವ್ಯಕ್ತಿಗಳು ಈ ಮಾರ್ಗಗಳ ಮೂಲಕ ಪ್ರಯಾಣಿಸುವುದನ್ನು ನಿಷೇಧಿಸಿದ್ದಾರೆ ಎಂದು ವರದಿಯಾಗಿದೆ. ಇಮ್ರಾನ್ ನಿವಾಸಕ್ಕೆ ಹೋಗುವ ಮಾರ್ಗಗಳನ್ನು ಮುಳ್ಳುತಂತಿ ಹಾಕಿ ಬಂದ್ ಮಾಡಲಾಗಿದ್ದು, ಫ್ರಂಟಿಯರ್ ಕಾರ್ಪ್ಸ್ (FC) ನ ದೊಡ್ಡ ತುಕಡಿಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಇಮ್ರಾನ್ ಖಾನ್ ಚೌಕ್‌ನ ಬೀದಿ ದೀಪಗಳನ್ನು ಕೂಡ ಬಂದ್ ಮಾಡಲಾಗಿದೆ ಎಂದು ಪಾಕಿಸ್ತಾನದ ಪ್ರಮುಖ ಮಾಧ್ಯಮವೊಂದು ಹೇಳಿದೆ.
ಏತನ್ಮಧ್ಯೆ, ಇಸ್ಲಾಮಾಬಾದ್‌ನಲ್ಲಿ ಭಾಷಣ ಮಾಡುವಾಗ ಇಸ್ಲಾಮಾಬಾದ್ ಪೊಲೀಸ್ ಅಧಿಕಾರಿ ಮತ್ತು ಮಹಿಳಾ ಮ್ಯಾಜಿಸ್ಟ್ರೇಟ್‌ಗೆ ಬೆದರಿಕೆ ಹಾಕಿದ್ದಕ್ಕಾಗಿ ಇಮ್ರಾನ್ ಖಾನ್ ಅವರ ಭಾಷಣಗಳ ನೇರ ಪ್ರಸಾರ ಮಾಡದಂತೆ ಪಾಕಿಸ್ತಾನದ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ನಿಷೇಧಿಸಿದೆ. ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನಾ ವಿರೋಧಿ ಕಾಯ್ದೆ (ಎಟಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.