ನವದೆಹಲಿ : ಟ್ವಿಟರ್ ಸಿಇಓ ಹಾಗೂ ಉದ್ಯಮಿ ಎಲೋನ್ ಮಸ್ಕ್ ಮತ್ತೊಮ್ಮೆ ವಿಶ್ವದ ಅತ್ಯಂತ ಸಿರಿವಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಈಗ ಮಸ್ಕ್ ಪುನಃ ಅತ್ಯಂತ ಸಿರಿವಂತ ಪಟ್ಟಕ್ಕೇರಿದ್ದಾರೆ. ಫ್ರೆಂಚ್ ಐಷಾರಾಮಿ ಬ್ರಾಂಡ್ ಲೂಯಿ ವಿಟಾನ್ನ ಸಿಇಓ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿರುವ ಮಸ್ಕ್ ಮತ್ತೊಮ್ಮೆ ವಿಶ್ವದ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ, ಗುರುವಾರದ ಹೊತ್ತಿಗೆ ಮಸ್ಕ್ ಅವರ ಸಂಪತ್ತಿನ ನಿವ್ವಳ ಮೌಲ್ಯ ಸುಮಾರು 192 ಶತಕೋಟಿ ಯುಎಸ್ ಡಾಲರ್ ಆಗಿದೆ. ಅದೇ ಹೊತ್ತಿಗೆ ಅರ್ನಾಲ್ಟ್ 187 ಶತಕೋಟಿ ಡಾಲರ್ ಸಂಪತ್ತು ಹೊಂದಿದ್ದಾರೆ. ಇಂಡೆಕ್ಸ್ ಡೇಟಾ ಪ್ರಕಾರ ಇವರಿಬ್ಬರ ನಂತರ ಪಟ್ಟಿಯಲ್ಲಿರುವ ಅತ್ಯಧಿಕ ಸಿರಿವಂತರೆಂದರೆ ಜೆಫ್ ಬೆಜೋಸ್ ಮತ್ತು ಬಿಲ್ ಗೇಟ್ಸ್. ಇವರ ಸಂಪತ್ತಿನ ಮೌಲ್ಯ ಕ್ರಮವಾಗಿ 144 ಶತಕೋಟಿ ಡಾಲರ್ ಮತ್ತು 125 ಶತಕೋಟಿ ಡಾಲರ್ ಆಗಿದೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಇದು ಪ್ರಪಂಚದ ಅತ್ಯಂತ ಶ್ರೀಮಂತ ಜನರ ದೈನಂದಿನ ಶ್ರೇಯಾಂಕವಾಗಿದೆ. ಪ್ರತಿ ಬಿಲಿಯನೇರ್ ಪ್ರೊಫೈಲ್ ಪುಟದಲ್ಲಿ ನಿವ್ವಳ ಮೌಲ್ಯದ ವಿಶ್ಲೇಷಣೆಯಲ್ಲಿ ಲೆಕ್ಕಾಚಾರಗಳ ಕುರಿತು ವಿವರಗಳನ್ನು ಒದಗಿಸಲಾಗಿದೆ. ಅಂಕಿಅಂಶಗಳನ್ನು ನ್ಯೂಯಾರ್ಕ್‌ನಲ್ಲಿ ಪ್ರತಿ ವ್ಯಾಪಾರದ ದಿನದ ಕೊನೆಯಲ್ಲಿ ನವೀಕರಿಸಲಾಗುತ್ತದೆ. ಇತ್ತೀಚಿನ ವಹಿವಾಟಿನಲ್ಲಿ ಅರ್ನಾಲ್ಟ್ ಸಂಸ್ಥೆಯ ಷೇರುಗಳು ಶೇಕಡಾ 2 ಕ್ಕಿಂತ ಹೆಚ್ಚು ಕುಸಿದ ನಂತರ ಟೆಸ್ಲಾ ಮುಖ್ಯಸ್ಥ ಮಸ್ಕ್ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನದಲ್ಲಿದ್ದಾರೆ.
ಟೆಸ್ಲಾ ಸ್ಟಾಕ್ ಬೆಲೆಗಳಲ್ಲಿನ ಇತ್ತೀಚಿನ ಏರಿಕೆಯು ಮಸ್ಕ್ ಅವರ ಸಂಪತ್ತಿನಲ್ಲಿ ಏರಿಕೆಯಾಗಲು ಭಾಗಶಃ ಕಾರಣವಾಗಿದೆ. ಟೆಸ್ಲಾ ಷೇರು ಬೆಲೆಗಳು 2023 ರಲ್ಲಿ ಇಲ್ಲಿಯವರೆಗೆ ಶೇಕಡಾ 89 ರಷ್ಟು ಏರಿಕೆಯಾಗಿವೆ. ಮಸ್ಕ್ ಮತ್ತು ಅರ್ನಾಲ್ಟ್ ಇವರಿಬ್ಬರೂ ಶ್ರೀಮಂತರ ಪಟ್ಟಿಯಲ್ಲಿ ನಿಕಟ ಪೈಪೋಟಿ ಹೊಂದಿದ್ದಾರೆ. ಡಿಸೆಂಬರ್ 2022 ರಲ್ಲಿ ಬರ್ನಾರ್ಡ್ ಅರ್ನಾಲ್ಟ್ ಅವರು ಎರಡು ತಿಂಗಳಿಗಿಂತ ಹೆಚ್ಚು ಕಾಲ ಎರಡನೇ ಸ್ಥಾನದಲ್ಲಿದ್ದಾಗ ಟೆಸ್ಲಾ ಮುಖ್ಯಸ್ಥ ಮಸ್ಕ್ರನ್ನು ಹಿಂದಿಕ್ಕಿದ್ದರು. ಫೆಬ್ರವರಿ ಅಂತ್ಯದಲ್ಲಿ ಮಸ್ಕ್ ಮತ್ತೆ ಹಿಂದೆ ಬಿದ್ದಿದ್ದರು.
ಉದ್ಯಮಿ ಎಲೋನ್ ಮಸ್ಕ್ ಅವರು ಎಲೆಕ್ಟ್ರಿಕ್ ಆಟೋಮೊಬೈಲ್ ತಯಾರಕ ಕಂಪನಿ ಟೆಸ್ಲಾ ಇಂಕ್ (TSLA) ಮತ್ತು ಖಾಸಗಿ ಬಾಹ್ಯಾಕಾಶ ಕಂಪನಿ SpaceX ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಜಾಗತಿಕ ಪ್ರಖ್ಯಾತಿ ಗಳಿಸಿದ್ದಾರೆ. ಮಸ್ಕ್ ಹಲವಾರು ಟೆಕ್ ಕಂಪನಿಗಳಲ್ಲಿ ಆರಂಭಿಕ ಹೂಡಿಕೆದಾರರಾಗಿದ್ದರು ಮತ್ತು ಅಕ್ಟೋಬರ್ 2022 ರಲ್ಲಿ ಅವರು Twitter, Inc. (ಈಗ X Corp) ಅನ್ನು ಖಾಸಗಿಯಾಗಿ ಸ್ವಾಧೀನಪಡಿಸಿಕೊಂಡರು.
ಬರ್ನಾರ್ಡ್ ಅರ್ನಾಲ್ಟ್ ಇವರು ವಿಶ್ವದ ಪ್ರಮುಖ ಐಷಾರಾಮಿ ಉತ್ಪನ್ನಗಳನ್ನು ತಯಾರಿಸುವ ಕಂಪನಿ LVMH ಮೊಯೆಟ್ ಹೆನ್ನೆಸ್ಸಿ ಲೂಯಿ ವಿಟಾನ್ ಸಮೂಹದ ಅಧ್ಯಕ್ಷ ಮತ್ತು CEO ಆಗಿದ್ದಾರೆ. ಮಾರ್ಚ್ 5, 1949 ರಂದು ಫ್ರಾನ್ಸ್‌ನ ರೌಬೈಕ್ಸ್‌ನಲ್ಲಿ ಕೈಗಾರಿಕಾ ಕುಟುಂಬದಲ್ಲಿ ಜನಿಸಿದ ಅರ್ನಾಲ್ಟ್, ಎಕೋಲ್ ಪಾಲಿಟೆಕ್ನಿಕ್‌ನಲ್ಲಿ ಅಧ್ಯಯನ ಮಾಡಿದರು. ವಿವಾಹಿತರಾಗಿರುವ ಅರ್ನಾಲ್ಟ್ ಐದು ಮಕ್ಕಳ ತಂದೆಯಾಗಿದ್ದಾರೆ. ಅವರಿಗೆ ಲೀಜನ್ ಆಫ್ ಆನರ್ ಆಫ್ ಗ್ರ್ಯಾಂಡ್ ಆಫೀಸರ್ ಮತ್ತು ಕಮಾಂಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್ ಗೌರವ ಪ್ರಶಸ್ತಿಗಳನ್ನು ನೀಡಲಾಗಿದೆ.
ಇದನ್ನೂ ಓದಿ : ಮಣಿಪುರ ಹಿಂಸಾಚಾರ: ನಿವೃತ್ತ ನ್ಯಾಯಾಧೀಶರ ಸಮಿತಿಯಿಂದ ತನಿಖೆ, ನಾಳೆಯಿಂದ ಕೂಂಬಿಂಗ್