ಟೋಕಿಯೊ (ಜಪಾನ್): ರಾಜಧಾನಿ ಟೋಕಿಯೊ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ಭೂಕಂಪನ ಸಂಭವಿಸಿದ್ದು, ಕೆಲವು ಜನರು ಗಾಯಗೊಂಡಿದ್ದಾರೆ. ಕಟ್ಟಡಗಳಿಗೆ ಸಣ್ಣ ಪ್ರಮಾಣದ ಹಾನಿ ಉಂಟಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಕಂಪನದ ಕೇಂದ್ರಬಿಂದು ಟೋಕಿಯೊದ ಆಗ್ನೇಯದಲ್ಲಿರುವ ಚಿಬಾ ಪ್ರಾಂತ್ಯದಲ್ಲಿ ಪತ್ತೆಯಾಗಿದೆ ಎಂದು ಜಪಾನ್ನ ಭೂಕಂಪಶಾಸ್ತ್ರ ಅಧ್ಯಯನ ಕೇಂದ್ರ ತಿಳಿಸಿದೆ.
ಕ್ಯೂಡೋ ಸುದ್ದಿಸಂಸ್ಥೆಯೊಂದರ ವರದಿ ಪ್ರಕಾರ, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿನ ಕೆಲವು ರೈಲು ಸೇವೆ ರದ್ದುಗೊಳಿಸಲಾಗಿದೆ ಎಂದು ವರದಿ ಮಾಡಿದೆ. ಜಪಾನ್ ಪ್ರಪಂಚದ ಭೂಕಂಪಪೀಡಿತ ರಾಷ್ಟ್ರಗಳಲ್ಲಿ ಒಂದು. 2011ರ ಭೂಕಂಪ ಮತ್ತು ನಂತರದ ಸುನಾಮಿಯಂತಹ ಘಟನೆಗಳಲ್ಲಿ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು.
ಇತ್ತೀಚೆಗೆ ಸಂಭವಿಸಿದ ಭೂಕಂಪಗಳು..: ಏ. 9 ಮತ್ತು 10ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಆರು ಬಾರಿ ಭೂಮಿ ಕಂಪಿಸಿತ್ತು. ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿ ಭೂಮಿ ಕಂಪಿಸಿದೆ. ಕೊಲ್ಲಿಯ ಉತ್ತರದಿಂದ 220 ಕಿಲೋ ಮೀಟರ್ ದೂರದಲ್ಲಿ ಕೇಂದ್ರಬಿಂದು ಪತ್ತೆಯಾಗಿತ್ತು. 32 ಕಿ.ಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ.4.6ರಷ್ಟು ತೀವ್ರತೆಯ ಕಂಪನ ಉಂಟಾಗಿತ್ತು ಎಂದು ಭೂಕಂಪಶಾಸ್ತ್ರದ ಕೇಂದ್ರ ಹೇಳಿತ್ತು.
ಏ. 3ರಂದು ಆಸ್ಟ್ರೇಲಿಯಾದ ಪಪುವಾ ನ್ಯೂ ಗಿನಿಯಾದಲ್ಲೂ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 7 ತೀವ್ರತೆ ದಾಖಲಾಗಿತ್ತು. ನಾಲ್ವರು ಸಾವನ್ನಪ್ಪಿದ್ದರು. ಸುಮಾರು 17 ಜನರು ಗಾಯಗೊಂಡಿರುವ ವರದಿಯಾಗಿತ್ತು. 300ಕ್ಕೂ ಹೆಚ್ಚು ಮನೆಗಳು ಧರೆಗುರುಳಿದ್ದವು ಎಂದು ಸ್ಥಳೀಯ ಮಾಧ್ಯಮಗಳು ವರದಿ ಪ್ರಕಟಿಸಿದ್ದವು.
ಏ.28 ರಂದು ನೇಪಾಳದಲ್ಲಿ ಭೂಮಿ ಮೂರು ಬಾರಿ ಕಂಪಿಸಿತ್ತು. 4.4, 5.0 ಮತ್ತು 3.6 ತೀವ್ರತೆಯ ಕಂಪನ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು. ಬಜುರಾದ ದಹಕೋಟ್‌ನಲ್ಲಿ ಭೂಕಂಪನಗಳ ಕೇಂದ್ರ ಬಿಂದುಗಳು ಪತ್ತೆಯಾಗಿದ್ದವು ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿತ್ತು. ನ್ಯೂಜಿಲೆಂಡ್ನಲ್ಲೂ ಇತ್ತೀಚೆಗೆ ಎರಡೆರಡು ಪ್ರಬಲ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 7.2 ತೀವ್ರತೆಯ ಕಂಪನ ದಾಖಲಾಗಿತ್ತು.
ಇದನ್ನೂ ಓದಿ: ಮಧ್ಯರಾತ್ರಿ ಭೂಮಿ ಗಡಗಡ.. ಎರಡು ಗಂಟೆಗಳ ಅಂತರದಲ್ಲಿ ಮೂರು ಬಾರಿ ಭೂಕಂಪ