ಅರ್ಜೆಂಟೀನಾ/ತಜಿಕಿಸ್ತಾನ್: ಭೂಮಿಯ ಒಳಪದರಗಳಲ್ಲಿ ತೀವ್ರ ತಿಕ್ಕಾಟ ನಡೆಯುತ್ತಿದ್ದು, ವಿಶ್ವದ ಹಲವು ರಾಷ್ಟ್ರಗಳಲ್ಲಿ ಸತತವಾಗಿ ಭೂಕಂಪನ ಉಂಟಾಗುತ್ತಲೇ ಇದೆ. ಬುಧವಾರ ರಾತ್ರಿ ದಕ್ಷಿಣ ಅಮೆರಿಕ ಖಂಡದ ದೇಶವಾದ ಅರ್ಜೆಂಟೀನಾದ ಸ್ಯಾನ್ ಆಂಟೋನಿಯೊ ಡಿ ಲಾಸ್ ಕೋಬ್ರೆಸ್ ಮತ್ತು ಮಧ್ಯ ಏಷ್ಯಾದ ತಜಕಿಸ್ತಾನದಲ್ಲಿ ಭೂಮಿ ಕಂಪಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ.
ಅರ್ಜೆಂಟೀನಾದಲ್ಲಿ ಸಂಭವಿಸಿದ ಕಂಪನವು ಬುಧವಾರ ರಾತ್ರಿ 8.30 ರ ಸುಮಾರಿನಲ್ಲಿ ಸಂಭವಿಸಿದೆ. ಸ್ಯಾನ್ ಆಂಟೋನಿಯೊ ಡಿ ಲಾಸ್ ಕೋಬ್ರೆಸ್‌ನಿಂದ 84 ಕಿಮೀ ದೂರದ ಉತ್ತರ ಪ್ರದೇಶದಲ್ಲಿ ಇದು ಘಟಿಸಿದೆ. 210 ಕಿ.ಮೀ ಆಳದಲ್ಲಿ ಕಂಪನದ ಅಲೆಗಳು ಎದ್ದಿವೆ. ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆ ದಾಖಲಾಗಿದೆ ಎಂದು ಯುಎಸ್‌ಜಿಎಸ್ ತಿಳಿಸಿದೆ. ಈವರೆಗೂ ಯಾವುದೇ ಸಾವು-ನೋವಿನ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
ತಜಕಿಸ್ತಾನದಲ್ಲಿ ಕಂಪನ: ಇನ್ನೊಂದೆಡೆ, ತಜಕಿಸ್ತಾನದಲ್ಲಿ ರಿಕ್ಟರ್ ಮಾಪಕದಲ್ಲಿ ದಾಖಲಾದಂತೆ 5.9 ತೀವ್ರತೆಯ ಭೂಕಂಪನ ಸಂಭವಿಸಿದೆ. ಇಲ್ಲಿನ ನೊವೊಬೋಡ್‌ನಿಂದ 51 ಕಿಮೀ ದೂರದ ವಾಯುವ್ಯ ಭಾಗದಲ್ಲಿ ಕಂಪನ ಉಂಟಾಗಿದೆ. ಭೂಕಂಪವು 01:37 ರ ಸುಮಾರಿನಲ್ಲಿ ಸಂಭವಿಸಿದೆ. ನೊವೊಬೋಡ್‌ನ 5.6 ಕಿಮೀ ಆಳದಲ್ಲಿ ಅಲೆಗಳು ಎದ್ದಿವೆ. ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಇನ್ನೂ ವರದಿಯಾಗಿಲ್ಲ.
ಅಫ್ಘಾನಿಸ್ತಾನದಲ್ಲಿ ಕಂಪನ, 4 ಸಾವು: ಇನ್ನೊಂದೆಡೆ ಅಫ್ಘಾನಿಸ್ತಾನದಲ್ಲಿ ಭೂಕಂಪನ ಉಂಟಾಗಿದೆ. ಮಾರ್ಚ್ 21 ರಂದು ಕಂಪನ ಉಂಟಾಗಿತ್ತು. ಇದರಿಂದ ಜನರು ದಿಕ್ಕಾಪಾಲಾಪಾಗಿ ಓಡಿದ್ದರು. ಈಶಾನ್ಯ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿ, ಸುಮಾರು 80 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
ಅಫ್ಘಾನಿಸ್ತಾನದ ಬಡಾಕ್ಷನ್‌ನ ಜುರ್ಮ್ ಜಿಲ್ಲೆಯ ಆಗ್ನೇಯಕ್ಕೆ 40 ಕಿ.ಮೀ ದೂರದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿತ್ತು. ಭೂಕಂಪವು ಪಂಜಶೀರ್, ತಖರ್, ಕುಂದುಜ್, ಪಂಜ್ಶೀರ್, ಲಗ್ಮನ್, ಕಾಬೂಲ್ ಮತ್ತು ಹಲವಾರು ಇತರ ಪ್ರಾಂತ್ಯಗಳು ಮತ್ತು ನೆರೆಯ ಭಾರತ ಮತ್ತು ಪಾಕಿಸ್ತಾನದ ಹಲವು ರಾಜ್ಯಗಳು ಮತ್ತು ಪ್ರಾಂತ್ಯಗಳನ್ನು ತಲ್ಲಣ ಉಂಟು ಮಾಡಿತ್ತು.
ಬಡಾಕ್ಷನ್ ಪ್ರಾಂತ್ಯದ ಜುರ್ಮ್ ಜಿಲ್ಲೆಯಲ್ಲಿ ಭೂಕಂಪನ ಭಾರಿ ನಷ್ಟ ಉಂಟು ಮಾಡಿತ್ತು. ಕನಿಷ್ಠ 50 ಮನೆಗಳು ನಾಶವಾಗಿವೆ. ನೂರಾರು ಜನರು ಗಾಯಗೊಂಡಿದ್ದಾರೆ. 200ಕ್ಕೂ ಹೆಚ್ಚು ಜನರನ್ನು ಸ್ವಾತ್ ಕಣಿವೆ ಮತ್ತು ಖೈಬರ್ ಪಖುಂತ್ವಾ ಪ್ರಾಂತ್ಯದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಪಾಕಿಸ್ತಾನದಲ್ಲಿ 11 ಸಾವು: ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಮಂಗಳವಾರ ಭೂಮಿ ನಡುಗಿ, 11 ಮಂದಿ ಸಾವಿಗೀಡಾಗಿದ್ದಾರೆ. 100 ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ಅಫ್ಘಾನಿಸ್ತಾನದ ಹಿಂಡುಕುಶ್ ಪ್ರದೇಶ ಭೂಕಂಪನದ ಕೇಂದ್ರಬಿಂದುವಾಗಿದೆ. ಇಲ್ಲಿನ 180 ಕಿ.ಮೀ. ಆಳದಲ್ಲಿ ಕಂಪನ ಎದ್ದಿದ್ದು, ಪಾಕಿಸ್ತಾನದಲ್ಲಿ ಇವರ ಪರಿಣಾಮ ಉಂಟಾಗಿದೆ.
ಇಸ್ಲಾಮಾಬಾದ್, ಪೇಶಾವರ, ಚಾರ್ಸದ್ದಾ, ಲಾಹೋರ್ ಮತ್ತು ರಾವಲ್ಪಿಂಡಿ ಸೇರಿದಂತೆ ವಿವಿಧ ನಗರಗಳ ಜನರಿಗೆ ಕಂಪನದ ಅನುಭವವಾಗಿದೆ. ಗುಜ್ರಾನ್‌ವಾಲಾ, ಗುಜರಾತ್, ಸಿಯಾಲ್‌ಕೋಟ್, ಕೋಟ್ ಮೊಮಿನ್, ಮಧ್ ರಂಝಾ, ಚಕ್ವಾಲ್, ಕೊಹತ್ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶಗಳಲ್ಲಿಯೂ ಭೂಮಿ ನಡುಗಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿಯೂ ಪ್ರಬಲ ಭೂಕಂಪ: 11 ಸಾವು, 100ಕ್ಕೂ ಮಂದಿಗೆ ಗಾಯ