ವಾಷಿಂಗ್ಟನ್: ಗಾಜಾ ಪಟ್ಟಣವನ್ನು ಮತ್ತೆ ಆಕ್ರಮಿಸಿಕೊಳ್ಳದಂತೆ ಅಮೆರಿಕ ಇಸ್ರೇಲ್ಗೆ ಮಂಗಳವಾರ ಎಚ್ಚರಿಕೆ ನೀಡಿದೆ. ಯುದ್ಧ ಮುಗಿದ ನಂತರ ಅನಿರ್ದಿಷ್ಟಾವಧಿಗೆ ಇಸ್ರೇಲ್ ಗಾಜಾದ ಸಂಪೂರ್ಣ ಸುರಕ್ಷತಾ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದೆ ಎಂಬ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿಕೆಯ ನಂತರ ಅಮೆರಿಕ ಈ ಎಚ್ಚರಿಕೆ ನೀಡಿದೆ.
ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ 'ಸಿಎನ್ಎನ್ ದಿಸ್ ಮಾರ್ನಿಂಗ್' ನಲ್ಲಿ ಮಾತನಾಡಿ, "ಇಸ್ರೇಲ್ ಪಡೆಗಳು ಗಾಜಾವನ್ನು ಪುನಃ ಆಕ್ರಮಿಸುವುದು ಒಳ್ಳೆಯದಲ್ಲ ಎಂದು ಅಧ್ಯಕ್ಷರ ಭಾವನೆಯಾಗಿದೆ. ಇದು ಇಸ್ರೇಲ್ ಗೆ ಒಳ್ಳೆಯದಲ್ಲ ಮತ್ತು ಇದು ಇಸ್ರೇಲಿ ಜನರಿಗೂ ಒಳ್ಳೆಯದಲ್ಲ." ಎಂದು ಹೇಳಿದರು.
"ಯುದ್ಧದ ನಂತರ ಗಾಜಾ ಹೇಗಿರಲಿದೆ ಎಂಬ ಬಗ್ಗೆ ಸೆಕ್ರೆಟರಿ ಆಂಟನಿ ಬ್ಲಿಂಕೆನ್ ಚರ್ಚೆ ನಡೆಸುತ್ತಿದ್ದಾರೆ. ಆದರೆ ಗಾಜಾದಲ್ಲಿನ ಆಡಳಿತ ಅಕ್ಟೋಬರ್ 6 ರಂದು ಹೇಗಿತ್ತೋ ಹಾಗೆ ಮತ್ತೆ ಇರಲಾರದು. ಹಮಾಸ್ ಖಂಡಿತವಾಗಿಯೂ ಇರಲ್ಲ" ಎಂದು ಅವರು ತಿಳಿಸಿದರು.
ಹಮಾಸ್ನ ಮಾರ್ಗವನ್ನು ಮುಂದುವರಿಸಲು ಬಯಸದವರು ಮಾತ್ರ ಗಾಜಾ ಆಳಬೇಕು ಎಂದು ನೆತನ್ಯಾಹು ಸೋಮವಾರ ಎಬಿಸಿ ನ್ಯೂಸ್ಗೆ ತಿಳಿಸಿದ್ದರು. ಇಸ್ರೇಲ್ ಅನಿರ್ದಿಷ್ಟ ಅವಧಿಗೆ ಒಟ್ಟಾರೆ ಗಾಜಾದ ಭದ್ರತಾ ಜವಾಬ್ದಾರಿಯನ್ನು ಹೊಂದಿರುತ್ತದೆ. ಹಾಗೆ ಮಾಡದಿದ್ದರೆ ಏನಾಗುತ್ತದೆ ಎಂಬುದನ್ನು ನಾವು ನೋಡಿದ್ದೇವೆ ಎಂದು ಅವರು ಹೇಳಿದ್ದರು.
ಯುದ್ಧದ ನಂತರ ಗಾಜಾ ಹೇಗಿರಬಹುದು ಎಂಬುದರ ಬಗ್ಗೆ ನೆತನ್ಯಾಹು ಹೇಳಿಕೆ ಸ್ಪಷ್ಟತೆಯನ್ನು ನೀಡುತ್ತದೆ. ಆದರೆ ಇಸ್ರೇಲ್ನ ಈ ನಿಲುವು ಆಮೆರಿಕ ಹಾಗೂ ಅದರ ಅಧ್ಯಕ್ಷ ಜೋ ಬಿಡೆನ್ ಅವರ ನಿಲುಗಳಿಗಿಂತ ಭಿನ್ನವಾಗಿದೆ. ಕಳೆದ ತಿಂಗಳು ಮಾಧ್ಯಮದೊಂದಿಗೆ ಮಾತನಾಡಿದ್ದ ಅಧ್ಯಕ್ಷ ಬಿಡೆನ್, ಇಸ್ರೇಲ್ ಗಾಜಾವನ್ನು ಪುನಃ ಆಕ್ರಮಿಸಿದರೆ ಅದು ಬಹಳ ದೊಡ್ಡ ತಪ್ಪಾಗಲಿದೆ ಎಂದು ಹೇಳಿದ್ದರು.
ಗಾಜಾವನ್ನು ವಶಪಡಿಸಿಕೊಳ್ಳುವ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ನೆತನ್ಯಾಹು ಅವರ ಹಿರಿಯ ಸಲಹೆಗಾರ ಮಾರ್ಕ್ ರೆಗೆವ್, ಭದ್ರತಾ ನಿಯಂತ್ರಣ ಮತ್ತು ರಾಜಕೀಯ ನಿಯಂತ್ರಣದ ನಡುವೆ ವ್ಯತ್ಯಾಸವಿದೆ. ಗಾಜಾದಲ್ಲಿ ಇಸ್ರೇಲ್ನ ಭದ್ರತಾ ವ್ಯವಸ್ಥೆ ಇರುತ್ತದೆ. ಆದರೆ ಹಾಗಂತ ಇಸ್ರೇಲ್ ಗಾಜಾವನ್ನು ಮರುವಶ ಮಾಡಿಕೊಳ್ಳುತ್ತದೆ ಅಥವಾ ಗಾಜಾವನ್ನು ಇಸ್ರೇಲ್ ಆಳುತ್ತದೆ ಎಂದರ್ಥವಲ್ಲ ಎಂದರು.
ಒತ್ತೆಯಾಳುಗಳು ಮತ್ತು ನಾಗರಿಕರಿಗೆ ಗಾಜಾವನ್ನು ತೊರೆಯಲು ಮತ್ತು ಪ್ಯಾಲೆಸ್ಟೀನಿಯರಿಗೆ ಒಳಗೆ ಪ್ರವೇಶಿಸಲು ಸಹಾಯಕವಾಗುವಂತೆ ಮಾನವೀಯ ಯುದ್ಧ ವಿರಾಮ ಘೋಷಿಸಬೇಕೆಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಕಳೆದ ವಾರ ಇಸ್ರೇಲ್ ಅನ್ನು ಒತ್ತಾಯಿಸಿದ್ದರು. ಆದರೆ ಇಸ್ರೇಲ್ ಇದಕ್ಕೆ ಸೊಪ್ಪು ಹಾಕಿಲ್ಲ. "ನಾಗರಿಕರು ಹಮಾಸ್ನ ಕೃತ್ಯದ ಪರಿಣಾಮಗಳನ್ನು ಅನುಭವಿಸುವುದು ಬೇಡ" ಎಂಬ ಬ್ಲಿಂಕೆನ್ ಅವರ ಬಲವಾದ ಸಂದೇಶದ ಹೊರತಾಗಿಯೂ, ಇಸ್ರೇಲಿ ಪಡೆಗಳು ಗಾಜಾದಲ್ಲಿನ ನಾಗರಿಕ ತಾಣಗಳ ಮೇಲೆ ದಾಳಿ ಮುಂದುವರಿಸಿವೆ. ಈ ತಾಣಗಳನ್ನು ಹಮಾಸ್ ಬಳಸುತ್ತಿದೆ ಎಂದು ಪಡೆಗಳು ಹೇಳಿಕೊಂಡಿವೆ.
ಇದನ್ನೂ ಓದಿ: ಹಮಾಸ್ ಹತ್ತಿಕ್ಕಲು ಇಸ್ರೇಲ್ ಶಪಥ: ಗಾಜಾದ ನಿರಾಶ್ರಿತ ಶಿಬಿರದ ಮೇಲೆ ವೈಮಾನಿಕ ದಾಳಿ, 52 ಸಾವು