ಲಂಡನ್ (ಇಂಗ್ಲೆಂಡ್): ಧರ್ಮದ ಆಧಾರದ ಮೇಲೆ ತಾರತಮ್ಯ ಮತ್ತು ಕ್ಯಾಂಪಸ್‌ನಲ್ಲಿ ಭಾರತ ವಿರೋಧಿ ವಾತಾವರಣ ಇದೆ ಎಂದು ಲಾ ಸ್ಕೂಲ್ ಆಫ್ ಲಂಡನ್ ಹಾಗೂ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದಾರೆ. ಎಲ್‌ಎಸ್‌ಇ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಮತ್ತು ಎಲ್‌ಎಸ್‌ಇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸುತ್ತಿರುವ ವಕೀಲ ಕರಣ್ ಕಟಾರಿಯಾ ಭಾನುವಾರ ಟ್ವಿಟರ್ನಲ್ಲಿ ಆರೋಪಿಸಿದ್ದಾರೆ. "ಹಿಂದೂ ರಾಷ್ಟ್ರೀಯತಾವಾದಿ" ಎಂಬ ಕಾರಣಕ್ಕಾಗಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಫರ್ಧಿಸಲು ತಮಗೆ ಅವಕಾಶ ಸಿಕ್ಕಿಲ್ಲ ಬದಲಾಗಿ ಸ್ಪರ್ಧೆಗೆ ಅನರ್ಹನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
"ಭಾರತ ವಿರೋಧಿ ನೀತಿ ಮತ್ತು ಹಿಂದೂಫೋಬಿಯಾದಿಂದಾಗಿ ನಾನು ವೈಯಕ್ತಿಕವಾಗಿ, ಕೆಟ್ಟ ಮತ್ತು ಉದ್ದೇಶಿತ ದಾಳಿಗಳನ್ನು ಎದುರಿಸಿದ್ದೇನೆ. @lsesu ಅದರ ತಾರ್ಕಿಕತೆಯ ಬಗ್ಗೆ ಪಾರದರ್ಶಕವಾಗಿರಬೇಕು ಎಂದು ನಾನು ಒತ್ತಾಯಿಸುತ್ತೇನೆ. ನಾನು ಹಿಂದೂಫೋಬಿಯಾಕ್ಕೆ ಬಲಿಪಶುವಾಗುವುದಿಲ್ಲ" ಎಂದು ಅವರು ಟ್ವೀಟ್‌ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕಟಾರಿಯಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದು,’’ ಈ ಹಿಂದೆ ಶೈಕ್ಷಣಿಕ ಪ್ರತಿನಿಧಿಯಾಗಿ ಮತ್ತು ವಿದ್ಯಾರ್ಥಿಗಳ ರಾಷ್ಟ್ರೀಯ ಒಕ್ಕೂಟಕ್ಕೆ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದೆ. ಸ್ನೇಹಿತರು ಮತ್ತು ಸಹಪಾಠಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರೇರೇಪಿಸಿದರು, ಆದರೆ, "ದುರದೃಷ್ಟವಶಾತ್, ಕೆಲವು ವ್ಯಕ್ತಿಗಳು ಭಾರತೀಯ ಹಾಗೂ ಹಿಂದೂ ಒಬ್ಬ ಎಲ್‌ಎಸ್‌ಇಎಸ್‌ಯು ಅನ್ನು ಮುನ್ನಡೆಸುವುದನ್ನು ಸಹಿಸಲಿಲ್ಲ ಮತ್ತು ನನ್ನ ಪಾತ್ರ ಮತ್ತು ಗುರುತನ್ನು ದೂಷಿಸಲು ಪ್ರಾರಂಭಿಸಿದರು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಎಲ್ಲಾ ರಾಷ್ಟ್ರೀಯ ವಿದ್ಯಾರ್ಥಿಗಳಿಂದ ಅಪಾರ ಬೆಂಬಲವನ್ನು ಪಡೆದಿದ್ದರೂ, ಎಲ್ಎಸ್ಇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚುನಾವಣೆಯಿಂದ ನನ್ನನ್ನು ಅನರ್ಹಗೊಳಿಸಲಾಯಿತು. ಹೋಮೋಫೋಬಿಕ್, ಇಸ್ಲಾಮೋಫೋಬಿಕ್, ಕ್ವೀರ್ಫೋಬಿಕ್ ಮತ್ತು ಹಿಂದೂ ರಾಷ್ಟ್ರೀಯತಾವಾದಿ ವಿರೋಧಿ ನೀತಿಯಿಂದಾಗಿ ನನ್ನ ಬಗ್ಗೆ ಅನೇಕ ದೂರುಗಳನ್ನು ದಾಖಲಿಸಲಾಗಿದೆ. ನನ್ನ ಇಮೇಜ್ ಹಾಳು ಮಾಡಲು ಅನೇಕ ಸುಳ್ಳು ಆರೋಪಗಳನ್ನು ಮಾಡಲಾಯಿತು. ಇದಕ್ಕೆ ವಿರುದ್ಧವಾಗಿ, ನಾನು ಯಾವಾಗಲೂ ಸಕಾರಾತ್ಮಕ ಬದಲಾವಣೆ ಮತ್ತು ಸಾಮಾಜಿಕ ಸಾಮರಸ್ಯವನ್ನೇ ಪ್ರತಿಪಾದಿಸಿದ್ದೇನೆ, ”ಎಂದು ಕಟಾರಿಯಾ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಇದು "ನೈಸರ್ಗಿಕ ನ್ಯಾಯದ ತತ್ವಗಳ ಸಂಪೂರ್ಣ ಉಲ್ಲಂಘನೆ"ಯಾಗಿದೆ ಎಂದು ಕಟಾರಿಯಾ ಕರೆದಿದ್ದು, ಕ್ಯಾಂಪಸ್ ತನ್ನ ಅಳಲನ್ನು ಆಲಿಸದೇ ಸುಖಾಸುಮ್ಮನೇ ನನ್ನನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸದಂತೆ ಅನರ್ಹತೆಗೊಳಿಸಿದೆ ಎಂದು ಆರೋಪಿಸಿದ್ದಾರೆ. ಮತದಾನದ ದಿನದಂದು ಭಾರತೀಯ ವಿದ್ಯಾರ್ಥಿಗಳನ್ನು ಬೆದರಿಸಲಾಯಿತು ಮತ್ತು ಅವರ ರಾಷ್ಟ್ರೀಯ ಮತ್ತು ಹಿಂದೂ ಧಾರ್ಮಿಕ ಗುರುತನ್ನು ಗುರಿಯಾಗಿಸಲಾಯಿತು ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ಏತನ್ಮಧ್ಯೆ, ಸೋಮವಾರ ಮತ್ತೊಬ್ಬ ಎಲ್‌ಎಸ್‌ಇ ವಿದ್ಯಾರ್ಥಿನಿ ತೇಜಶ್ವಿನಿ ಶಂಕರ್, ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಕಟಾರಿಯಾ ಅವರನ್ನು ಬೆಂಬಲಿಸಿದ್ದಕ್ಕಾಗಿ ತಮ್ಮನ್ನೂ ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ತನ್ನ ಧಾರ್ಮಿಕ ಗುರುತನ್ನು ಆಧರಿಸಿ ತನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.
"ನನ್ನ ಧಾರ್ಮಿಕ ಗುರುತಿನ ಆಧಾರದ ಮೇಲೆ ಮತ್ತು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ನೇಹಿತನನ್ನು ಬೆಂಬಲಿಸಿದ್ದಕ್ಕಾಗಿ ನನ್ನನ್ನು ಗುರಿಯಾಗಿಸಲಾಗಿದೆ ಮತ್ತು ನಿಂದಿಸಲಾಗಿದೆ. ಇನ್ನೊಂದು ಕಡೆ ವಿದ್ಯಾರ್ಥಿ ಸಂಘವು ಸೂಕ್ತ ಕ್ರಮ ತೆಗೆದುಕೊಳ್ಳಲು ನಿರಾಕರಿಸಿದೆ" ಎಂದು ವಿಡಿಯೊ ಹಂಚಿಕೊಂಡಿದ್ದಾರೆ ತೇಜಶ್ವಿನಿ ಶಂಕರ್
ವಿಡಿಯೋ ಸಂದೇಶದಲ್ಲಿ ಏನಿದೆ?: "ಹಾಯ್, ನಾನು ತೇಜಶ್ವಿನಿ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪದವಿ ವಿದ್ಯಾರ್ಥಿನಿಯಾಗಿದ್ದೇನೆ. ಕಳೆದೆರಡು ವಾರಗಳಲ್ಲಿ ಎಲ್‌ಎಸ್‌ಇಎಸ್‌ಯುನಿಂದ ಕೆಲವು ಅನ್ಯಾಯಗಳನ್ನು ಬೆಳಕಿಗೆ ತರಲು ನಾನು ಈ ವಿಡಿಯೋವನ್ನು ಮಾಡುತ್ತಿದ್ದೇನೆ. ವಿದ್ಯಾರ್ಥಿ ಸಂಘದ ಚುನಾವಣೆಗಳು ನಡೆಯುತ್ತಿವೆ. ಎಲ್‌ಎಸ್‌ಇ ಕ್ಯಾಂಪಸ್‌ನಲ್ಲಿ ನನ್ನ ಸ್ನೇಹಿತ ಕರಣ್ ಕಟಾರಿಯಾ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪ್ರಚಾರ ನಡೆಸುತ್ತಿದ್ದರು. ಕಳೆದ ವರ್ಷದ ಚುನಾವಣೆಯಲ್ಲಿ ಅವರನ್ನು ಕ್ವೀರ್ ಫೋಬಿಕ್ ಮತ್ತು ಇಸ್ಲಾಮೋಫೋಬಿಕ್ ಎಂದು ಕರೆದು ದುರುದ್ದೇಶಪೂರಿತ ವದಂತಿಯನ್ನು ಹಾಕಲಾಯಿತು ಮತ್ತು ಅವರು ಹಿಂದೂ ರಾಷ್ಟ್ರೀಯತಾವಾದಿ ಎಂದು ಆರೋಪ ಮಾಡಲಾಯಿತು. ನಾನು ಮತ್ತು ಕರಣ್‌ಗಾಗಿ ಪ್ರಚಾರ ಮಾಡುತ್ತಿದ್ದ ಇತರ ಕೆಲವರನ್ನು ಬೆದರಿಸಲಾಯಿತು. ಕ್ಯಾಂಪಸ್‌ನಲ್ಲಿ ಮತ್ತು ಆನ್‌ಲೈನ್‌ನಲ್ಲಿ ಕಿರುಕುಳ ನೀಡಲಾಯಿತು‘‘ ಎಂದು ಶಂಕರ್ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
"ನಾನು ಎಸ್‌ಯುಗೆ ದೂರುಗಳನ್ನು ಸಲ್ಲಿಸಿದ್ದೇನೆ. ಆದರೆ ಎಸ್‌ಯು ಇತರ ದೂರುಗಳು ಮತ್ತು ವದಂತಿಗಳಿಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡಿಲ್ಲ. ಕರಣ್ ಅವರನ್ನು ಅವರ ಅಭ್ಯರ್ಥಿತನದಿಂದ ಅನರ್ಹಗೊಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್‌ಎಸ್‌ಇಯ ನಿಷ್ಕ್ರಿಯತೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ" ಎಂದು ಅವರು ಟ್ವೀಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ವಿಶ್ವಾದ್ಯಂತ ತೆರೆ ಕಾಣಲಿದೆ ಅರುಣ್ ವಿಜಯ್ ಅಭಿನಯದ ಬಹು ನಿರೀಕ್ಷಿತ ಮಿಷನ್ ಚಾಪ್ಟರ್ 1 ಸಿನಿಮಾ