ಕೋಪನ್ಹ್ಯಾಗನ್(ಡೆನ್ಮಾರ್ಕ್): ಉತ್ತರ ಯೂರೋಪಿನ ನಾರ್ಡಿಕ್ ದೇಶ ಡೆನ್ಮಾರ್ಕ್ ರಾಣಿ ಮಾರ್ಗರೆಟ್ 2 ಅವರು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಹೊಸ ವರ್ಷ 2024ರ ಹಿನ್ನೆಲೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ತಾವು ರಾಣಿ ಸ್ಥಾನವನ್ನು ತ್ಯಜಿಸುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ತಮ್ಮ ಉತ್ತರಾಧಿಕಾರಿಯನ್ನೂ ತಿಳಿಸಿದ್ದಾರೆ.
ಹಿರಿಯ ಪುತ್ರ ಫ್ರೆಡೆರಿಕ್ ಯುವರಾಜನಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು. ದೇಶದ ಅಂದಾಜು 60 ಲಕ್ಷ ಜನರು ನೇರಪ್ರಸಾರದ ಭಾಷಣ ವೀಕ್ಷಿಸುತ್ತಿದ್ದಾಗ ರಾಣಿ ನಿರ್ಧಾರ ಪ್ರಕಟಿಸಿ ಅಚ್ಚರಿ ಹುಟ್ಟಿಸಿದರು.
ಮಾರ್ಗರೆಟ್ ಫೆಬ್ರವರಿ 2023ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚೇತರಿಕೆಯ ನಂತರ ತಮ್ಮ ಪರಂಪರೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದರು. "ನನ್ನ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಭವಿಷ್ಯದ ಬಗ್ಗೆ ಯೋಚಿಸುವಂತೆ ಮಾಡಿತು. ಮುಂದಿನ ಪೀಳಿಗೆಗೆ ಜವಾಬ್ದಾರಿಗಳನ್ನು ಹಸ್ತಾಂತರಿಸುವ ಸಮಯ ಬಂದಿದೆ. ನಾನು ಈಗ ನಿವೃತ್ತಿ ಹೊಂದಲು ಸಕಾಲ" ಎಂದಿದ್ದರು.
"ತಂದೆಯ ನಂತರ ನಾನು ರಾಣಿಯಾಗಿ 52 ವರ್ಷಗಳನ್ನು ಜನವರಿ 14, 2024ರಂದು ಪೂರ್ಣಗೊಳಿಸುತ್ತೇನೆ. ಅದೇ ದಿನ, ರಾಣಿಯ ಸ್ಥಾನ ತ್ಯಜಿಸುತ್ತಿದ್ದೇನೆ. ಮಗ ಕ್ರೌನ್ ಪ್ರಿನ್ಸ್ ಫ್ರೆಡೆರಿಕ್ ರಾಯಲ್ ಕಿರೀಟ ಧರಿಸುತ್ತಾರೆ"ಎಂದು ಭಾಷಣದಲ್ಲಿ ಹೇಳಿದರು.
ಇಷ್ಟು ವರ್ಷಗಳ ಕಾಲ ನೀಡಿದ ಬೆಂಬಲಕ್ಕಾಗಿ ಇದೇ ಸಂದರ್ಭದಲ್ಲಿ ಡ್ಯಾನಿಶ್ ಜನರಿಗೆ ರಾಣಿ ಧನ್ಯವಾದ ಅರ್ಪಿಸಿದರು. ಪ್ರಧಾನ ಮಂತ್ರಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರು ರಾಣಿಯ ಸೇವೆಗಳಿಗೆ ಕೃತಜ್ಞತೆ ಹೇಳಿದ್ದಾರೆ.
1972ರಲ್ಲಿ ಡೆನ್ಮಾರ್ಕ್‌ನ ಕಿಂಗ್ ಫ್ರೆಡೆರಿಕ್-9ರ ಮರಣಾನಂತರ, 31 ವರ್ಷದ ಮಾರ್ಗರೆಟ್-II ರಾಣಿ ಪಟ್ಟ ಅಲಂಕರಿಸಿದ್ದರು. ದಿವಂಗತ ಬ್ರಿಟಿಷ್ ರಾಣಿ ಎಲಿಜಬೆತ್ II ಅವರ ನಂತರ, 83 ವರ್ಷದ ಮಾರ್ಗರೆಟ್ II ಯುರೋಪ್ನಲ್ಲಿ ದೀರ್ಘಾವಧಿಯ ರಾಣಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
55 ವರ್ಷದ ಫ್ರೆಡೆರಿಕ್ ಇದೇ ತಿಂಗಳ 14ರಂದು ಡೆನ್ಮಾರ್ಕ್ ಸಿಂಹಾಸನ ಏರಲಿದ್ದಾರೆ. ಪಟ್ಟಾಭಿಷೇಕ ಸಮಾರಂಭ ಬ್ರಿಟಿಷ್ ರಾಜ ಸಂಪ್ರದಾಯದಂತೆ ನಡೆಯುವುದಿಲ್ಲ. ಕೋಪನ್‌ಹ್ಯಾಗನ್‌ನಲ್ಲಿರುವ ಡ್ಯಾನಿಶ್ ರಾಜಮನೆತನದ ನಿವಾಸ ಅಮೆಲಿಯನ್‌ಬೋರ್ಗ್‌ನಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗುತ್ತದೆ. ಇದರೊಂದಿಗೆ, ಡೆನ್ಮಾರ್ಕ್ ರಾಜ ಮತ್ತು ಗ್ರೀನ್ಲ್ಯಾಂಡ್ ಮತ್ತು ಫಾರೋ ದ್ವೀಪಗಳ ರಾಷ್ಟ್ರದ ಮುಖ್ಯಸ್ಥರಾಗುತ್ತಾರೆ. ಡೆನ್ಮಾರ್ಕ್ ದೇಶದ ಅಧಿಕಾರವು ಜನರಿಂದ ಚುನಾಯಿತವಾದ ಸರ್ಕಾರದ ಕೈಯಲ್ಲಿದೆ. ಆದರೆ ಆ ದೇಶವು ರಾಜಪ್ರಭುತ್ವ ವ್ಯವಸ್ಥೆ ಹೊಂದಿರುವುದರಿಂದ ರಾಜ ಅಥವಾ ರಾಣಿ ಸಾಮ್ರಾಜ್ಯದ ಮುಖ್ಯಸ್ಥರಾಗಿರುತ್ತಾರೆ.
ಇದನ್ನೂ ಓದಿ: ವಿಶ್ವದಲ್ಲಿ ಹೊಸ ವರ್ಷ ಆಚರಿಸಿದ ಮೊದಲ & ಕೊನೆಯ ದೇಶ ಯಾವುದು?