ರಬತ್ (ಮೊರಾಕ್ಕೊ) : ಶುಕ್ರವಾರ ತಡರಾತ್ರಿ ಮೊರಾಕ್ಕೊದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದುವರೆಗೆ 2,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ದೇಶದಲ್ಲಿ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ ಎಂದು ಅಲ್ಲಿನ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
![Morocco earthquake](https://etvbharatimages.akamaized.net/etvbharat/prod-images/10-09-2023/morocco-earthquake--a-look-at-the-deadliest-quakes-over-the-past-25-years_c269b22e5ac84f50b046b04f1ebb9602_1009a_1694293470_469.jpg)
ಮರಕೇಶ್ನ ನೈಋತ್ಯ ಭಾಗದಲ್ಲಿ ಶುಕ್ರವಾರ ತಡರಾತ್ರಿ 6.8 ತೀವ್ರತೆಯ ಭಾರಿ ಭೂಕಂಪನ ಸಂಭವಿಸಿತ್ತು. ಮರಕೇಶ್ನಿಂದ 44 ಮೈಲಿ (71 ಕಿಲೋ ಮೀಟರ್) ದೂರದಲ್ಲಿ ರಾತ್ರಿ 11:11ಕ್ಕೆ 18.5 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿತ್ತು. ಭೂಮಿ ಕಂಪಿಸಿದ ಬಳಿಕ ಈವರೆಗೆ 2,012ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 2,059ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ ಎಂದು ತಿಳಿದು ಬಂದಿದೆ.
![Morocco earthquake](https://etvbharatimages.akamaized.net/etvbharat/prod-images/10-09-2023/morocco-earthquake--a-look-at-the-deadliest-quakes-over-the-past-25-years_4b6e27e314e446549ef8ef2c78740bd4_1009a_1694293470_145.jpg)
ಮೊರಾಕ್ಕೊದ ಕಿಂಗ್ ಮೊಹಮ್ಮದ್ VI ಹೇಳಿಕೆ ಬಿಡುಗಡೆ ಮಾಡಿ, ವಿಶೇಷ ರಕ್ಷಣಾ ಶೋಧ ಕಾರ್ಯಾಚರಣೆ ಮತ್ತು ಕ್ಷೇತ್ರ ಶಸ್ತ್ರಚಿಕಿತ್ಸಾ ಆಸ್ಪತ್ರೆಗಳನ್ನು ಕೂಡಲೇ ತೆರೆಯುವಂತೆ ಸಶಸ್ತ್ರ ಪಡೆಗಳಿಗೆ ನಿರ್ದೇಶಿಸಿದ್ದಾರೆ. ಅವಶೇಷಗಳಡಿ ಸಿಲುಕಿರುವವರಿಗಾಗಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದ್ದು, ರಸ್ತೆಗಳನ್ನು ತೆರವುಗೊಳಿಸಲಾಗುತ್ತಿದೆ. ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಇಲಾಖೆಯು, ವೈದ್ಯಕೀಯ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದೆ. ಸ್ಥಳದಲ್ಲಿ ನುರಿತ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಿದೆ. ಅಷ್ಟೇ ಅಲ್ಲದೆ, ತುರ್ತು ಕರೆ ವ್ಯವಸ್ಥೆ ಕೂಡ ಮಾಡಲಾಗಿದೆ.
![Morocco earthquake](https://etvbharatimages.akamaized.net/etvbharat/prod-images/10-09-2023/powerful-quake-in-morocco-kills-more-than-1-000-people-and-damages-historic-buildings-in-marrakech_9135f7e2ffa44c01b31e508dd5a9e33f_1009a_1694284319_618.jpg)
ಇದನ್ನೂ ಓದಿ : ಇಂಡೋನೇಷ್ಯಾದ ಬಾಲಿ, ಜಾವಾ ದ್ವೀಪಗಳಲ್ಲಿ ಪ್ರಬಲ ಭೂಕಂಪ : ಯಾವುದೇ ಸಾವು - ನೋವುಗಳು ವರದಿಯಾಗಿಲ್ಲ
ಪ್ರಧಾನಿ ಮೋದಿ ಸಂತಾಪ: ಪ್ರಧಾನಿ ನರೇಂದ್ರ ಮೋದಿ ಅವರು ಭೂಕಂಪದಲ್ಲಿ ಸಂಭವಿಸಿದ ಪ್ರಾಣಹಾನಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಆ್ಯಪ್ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, "ಮೊರಾಕ್ಕೊದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಉಂಟಾದ ಜೀವಹಾನಿಯು ತೀವ್ರ ನೋವುಂಟು ಮಾಡಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಈ ಕಷ್ಟದ ಸಮಯದಲ್ಲಿ ಮೊರಾಕ್ಕೊಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡಲು ಭಾರತ ಸಿದ್ಧವಾಗಿದೆ. ಮೊರಾಕ್ಕೊದ ಜನರೊಂದಿಗೆ ನಾವಿದ್ದೇವೆ" ಎಂದು ಧೈರ್ಯ ತುಂಬಿದ್ದಾರೆ.
![Morocco earthquake](https://etvbharatimages.akamaized.net/etvbharat/prod-images/10-09-2023/powerful-quake-in-morocco-kills-more-than-1-000-people-and-damages-historic-buildings-in-marrakech_56f25ccaf2cf4e658e44de819ade7654_1009a_1694284319_771.jpg)
ಇದನ್ನೂ ಓದಿ : ಮಹಾರಾಷ್ಟ್ರದ ಕೊಲ್ಲಾಪುರ ಸೇರಿ ಮೂರು ಜಿಲ್ಲೆಯಲ್ಲಿ 3.4 ತೀವ್ರತೆ ಭೂಕಂಪ : ಯಾವುದೇ ಪ್ರಾಣ ಹಾನಿ ಇಲ್ಲ
![Morocco earthquake](https://etvbharatimages.akamaized.net/etvbharat/prod-images/10-09-2023/powerful-quake-in-morocco-kills-more-than-1-000-people-and-damages-historic-buildings-in-marrakech_faab778af00444ecbd544f960cdfc659_1009a_1694284319_755.jpg)
ಚೀನಾದಲ್ಲಿ ಕಂಪಿಸಿದ ಭೂಮಿ: ಇಂದು ಬೆಳಗ್ಗೆ 05:40ಕ್ಕೆ ಚೀನಾದ ಕ್ಸಿಜಾಂಗ್‌ನಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ಘಟನೆಯಿಂದ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. (ಎಎನ್‌ಐ)
![Morocco earthquake](https://etvbharatimages.akamaized.net/etvbharat/prod-images/10-09-2023/powerful-quake-in-morocco-kills-more-than-1-000-people-and-damages-historic-buildings-in-marrakech_160f1648c1d74f29934ef2d335aa014d_1009a_1694284319_284.jpg)
ಇದನ್ನೂ ಓದಿ : ಮೊರಾಕ್ಕೊದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪನ.. ಸಾವಿರ ಮಂದಿ ಸಾವು.. ಲಕ್ಷಾಂತರ ಮಂದಿ ನಿರಾಶ್ರಿತ