ವಾಶಿಂಗ್ಟನ್: ಅಪರಾಧಿಯೊಬ್ಬನನ್ನು ನೈಟ್ರೋಜನ್ ಹೈಪೋಕ್ಸಿಯಾ ಮೂಲಕ ಮರಣದಂಡನೆ ಶಿಕ್ಷೆಗೆ ಗುರಿಪಡಿಸಲು ಅಮೆರಿಕದ ಅಲಾಬಾಮಾ ರಾಜ್ಯ ದಿನಾಂಕ ನಿಗದಿಪಡಿಸಿದೆ. ಅಮೆರಿಕದಲ್ಲಿ ನೈಟ್ರೋಜನ್ ಹೈಪೋಕ್ಸಿಯಾ ಮೂಲಕ ಮರಣದಂಡನೆ ನೀಡಲಾಗುತ್ತಿರುವುದು ಇದೇ ಮೊದಲು. ಇದಕ್ಕೂ ಮುನ್ನ ಮಾರಣಾಂತಿಕ ಚುಚ್ಚುಮದ್ದು ನೀಡುವ ಮೂಲಕ ಮರಣದಂಡನೆ ಜಾರಿಗೊಳಿಸುವ ವ್ಯವಸ್ಥೆ ಅಮೆರಿಕದಲ್ಲಿದೆ.
ಬುಧವಾರ ಹೊರಡಿಸಿದ ಪ್ರಕಟಣೆಯ ಪ್ರಕಾರ, 1988 ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕೆನ್ನೆತ್ ಯುಜೀನ್ ಸ್ಮಿತ್ ಅವರನ್ನು 2024 ರ ಜನವರಿ 25 ಮತ್ತು 26 ರ ನಡುವೆ ಗಲ್ಲಿಗೇರಿಸಲಾಗುವುದು ಎಂದು ಸಿಎನ್ಎನ್ ವರದಿ ಮಾಡಿದೆ. ನೈಟ್ರೋಜನ್ ಹೈಪೋಕ್ಸಿಯಾ ವಿಧಾನದಲ್ಲಿ ಮೆದುಳು ಮತ್ತು ದೇಹದಲ್ಲಿನ ಆಮ್ಲಜನಕ ಕಡಿಮೆಯಾಗುವ ಮೂಲಕ ಕೈದಿ ಉಸಿರುಗಟ್ಟಿ ಸಾಯುತ್ತಾನೆ.
ಮಾರಣಾಂತಿಕ ಚುಚ್ಚುಮದ್ದು ನೀಡುವುದಕ್ಕೆ ಪರ್ಯಾಯ ವಿಧಾನವನ್ನು ರಾಜ್ಯ ಶಾಸಕಾಂಗವು ಅನುಮೋದಿಸಿದ ನಂತರ ಅಲಬಾಮಾ ಆಡಳಿತವು ಆಗಸ್ಟ್ನಲ್ಲಿ ನೈಟ್ರೋಜನ್ ಹೈಪೋಕ್ಸಿಯಾ ವಿಧಾನಕ್ಕಾಗಿ ಮೊದಲ ಬಾರಿಗೆ ಮರಣದಂಡನೆ ಪ್ರೋಟೋಕಾಲ್ಗಳನ್ನು ಅಂತಿಮಗೊಳಿಸಿದೆ.
ಮರಣದಂಡನೆಯ ವಾರಂಟ್ ಅವಧಿ ಮುಗಿಯುವ ಮೊದಲು ಶಿಕ್ಷೆಯನ್ನು ಜಾರಿಗೊಳಿಸಲು ಸಾಧ್ಯವಾಗದ ಕಾರಣದಿಂದ, ಮಾರಣಾಂತಿಕ ಚುಚ್ಚುಮದ್ದಿನ ಮೂಲಕ ಸ್ಮಿತ್ ಅವರಿಗೆ ಮರಣದಂಡನೆ ನೀಡುವುದನ್ನು ನವೆಂಬರ್ 2022 ರಲ್ಲಿ ಹಠಾತ್ತನೆ ರದ್ದುಗೊಳಿಸಲಾಗಿತ್ತು. ಮಾರಣಾಂತಿಕ ಚುಚ್ಚುಮದ್ದಿನ ಬದಲು ತನ್ನನ್ನು ನೈಟ್ರೋಜನ್ ಹೈಪೋಕ್ಸಿಯಾ ಮೂಲಕ ಸಾಯಿಸಬೇಕೆಂದು ಈ ಸಂದರ್ಭದಲ್ಲಿ ಸ್ಮಿತ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಈ ವರ್ಷದ ಮೇ ತಿಂಗಳಲ್ಲಿ ಯುಎಸ್ ಸುಪ್ರೀಂ ಕೋರ್ಟ್ ಅಂತಿಮವಾಗಿ ನೈಟ್ರೋಜನ್ ಹೈಪೋಕ್ಸಿಯಾ ಮೂಲಕ ಮರಣ ಪಡೆಯಬೇಕೆಂಬ ಸ್ಮಿತ್ ಅವರ ಮನವಿಯನ್ನು ಮಾನ್ಯ ಮಾಡಿತ್ತು.
1988ರಲ್ಲಿ ಎಲಿಜಬೆತ್ ಡೊರ್ಲೀನ್ ಸೆನೆಟ್ ಎಂಬ ಮಹಿಳೆಯನ್ನು ಕೊಲೆ ಮಾಡಿದ್ದಕ್ಕಾಗಿ ಸ್ಮಿತ್ ಹಾಗೂ ಇನ್ನೊಬ್ಬ ಸಹಚರನಿಗೆ ಮರಣ ದಂಡನೆ ವಿಧಿಸಲಾಗಿದೆ. ಎಲಿಜಬೆತ್ ಸೆನೆಟ್ ಎಂಬ ಮಹಿಳೆಯನ್ನು ಕೊಲ್ಲಲು ಆಕೆಯ ಪತಿ ಇಬ್ಬರೂ ಅಪರಾಧಿಗಳಿಗೆ ಸುಪಾರಿ ನೀಡಿದ್ದರು. ಮಹಿಳೆಯ ಹೆಸರಿನಲ್ಲಿದ್ದ ದೊಡ್ಡ ಮೊತ್ತದ ವಿಮಾ ಪಾಲಿಸಿಯ ಹಣ ಪಡೆಯಲು ಈ ಕೊಲೆ ಮಾಡಿಸಲಾಗಿತ್ತು.
ಸ್ಮಿತ್ ಅವರ ಪ್ರಕರಣದ ಬಗ್ಗೆ ಕಳೆದ ನವೆಂಬರ್ನಲ್ಲಿ ತೀರ್ಪುಗಾರರ ತಂಡ ವಿಚಾರಣೆ ನಡೆಸಿತ್ತು. ಸ್ಮಿತ್ ಅವರಿಗೆ ಜೀವಾವಧಿ ಶಿಕ್ಷೆ ನೀಡಬೇಕೆಂಬ ಪರವಾಗಿ 11-1 ಮತಗಳಿಂದ ತೀರ್ಪು ಬಂದಿತ್ತು. ಆದಾಗ್ಯೂ, ನ್ಯಾಯಾಧೀಶರು ಈ ತೀರ್ಪನ್ನು ರದ್ದುಗೊಳಿಸಿ ಆತನಿಗೆ ಮರಣದಂಡನೆ ಶಿಕ್ಷೆಯನ್ನೇ ಕಾಯಂ ಮಾಡಿದ್ದರು. ಅಲಬಾಮಾದಲ್ಲಿ ಪ್ರಸ್ತುತ ಮರಣದಂಡನೆಗೆ ಗುರಿಯಾದ 165 ಕೈದಿಗಳು ಇದ್ದಾರೆ ಎಂದು ರಾಜ್ಯದ ಜೈಲು ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಗಾಜಾ ಮರುವಶ ಬೇಡ: ಇಸ್ರೇಲ್ಗೆ ಅಮೆರಿಕ ಎಚ್ಚರಿಕೆ