ಸಿಂಗಾಪುರ: ಸಿಂಗಾಪುರದಲ್ಲಿ ಹೊಸ ಕೋವಿಡ್ -19 ಸೋಂಕಿನ ಅಲೆ ಕಂಡು ಬಂದಿರುವುದು ಆತಂಕ ಮೂಡಿಸಿದೆ. ಮೂರು ವಾರಗಳ ಹಿಂದೆ ಸುಮಾರು 1,000 ಇದ್ದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ಕಳೆದ ಎರಡು ವಾರಗಳಲ್ಲಿ 2,000 ಕ್ಕೆ ಏರಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಪ್ರಕರಣಗಳ ಸಂಖ್ಯೆಯಲ್ಲಿ ಹೊಸ ಏರಿಕೆಗೆ ಇಜಿ.5 ಮತ್ತು ಅದರ ಉಪ-ವಂಶಾವಳಿ ಎಚ್ಕೆ.3 ರೂಪಾಂತರಗಳು ಕಾರಣವಾಗಿವೆ. ಇವು ಎಕ್ಸ್ ಬಿಬಿ ಒಮಿಕ್ರಾನ್ ರೂಪಾಂತರದ ಮೂಲದಿಂದ ಬಂದಿವೆ. ಒಟ್ಟಾರೆಯಾಗಿ ಈಗ ಶೇಕಡಾ 75 ಕ್ಕಿಂತ ಹೆಚ್ಚು ಪ್ರಕರಣಗಳು ಈ ಹೊಸ ತಳಿಯ ಪ್ರಕರಣಗಳೇ ಆಗಿವೆ.
"ಇದು ಈ ವರ್ಷ ನಾವು ಎದುರಿಸಿದ ಎರಡನೇ ಕೋವಿಡ್ -19 ಸೋಂಕಿನ ಅಲೆಯಾಗಿದೆ. ಈ ಮುನ್ನ ಮಾರ್ಚ್ನಿಂದ ಏಪ್ರಿಲ್ವರೆಗೆ ಕೋವಿಡ್ ಅಲೆ ಕಾಣಿಸಿಕೊಂಡಿತ್ತು. ಆಗ ಯಾವುದೇ ಸಾಮಾಜಿಕ ನಿಬಂಧನೆಗಳನ್ನು ವಿಧಿಸಿರಲಿಲ್ಲ. ಈ ಬಾರಿಯೂ ಯಾವುದೇ ನಿರ್ಬಂಧ ವಿಧಿಸುವ ಪ್ರಸ್ತಾವನೆ ಇಲ್ಲ" ಎಂದು ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಹೇಳಿದ್ದಾರೆ.
"ನಾವು ಇದನ್ನು ಈಗ ಸ್ಥಳೀಯ ರೋಗವೆಂದು ಪರಿಗಣಿಸುತ್ತೇವೆ ಮತ್ತು ಅದರೊಂದಿಗೆ ಬದುಕುತ್ತೇವೆ. ಹಿಂದಿನ ರೂಪಾಂತರಗಳಿಗೆ ಹೋಲಿಸಿದರೆ ಹೊಸ ರೂಪಾಂತರಗಳು ಮಾರಣಾಂತಿಕವಾಗಿರುತ್ತವೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ. ಈ ಹೊಸ ರೂಪಾಂತರಗಳಿಂದ ಸೋಂಕಿಗೆ ಒಳಗಾದರೂ ಸಹ ನಾವು ಪಡೆದ ಲಸಿಕೆಗಳು ನಮ್ಮನ್ನು ಪರಿಣಾಮಕಾರಿಯಾಗಿ ರಕ್ಷಿಸುತ್ತಿವೆ" ಎಂದು ಅವರು ಹೇಳಿದರು.
ಲಸಿಕೆಗಳು ಸೋಂಕಿನಿಂದ ಗರಿಷ್ಠ ರಕ್ಷಣೆಯನ್ನು ನೀಡಬಹುದಾದರೂ, ಲಸಿಕೆ ಪಡೆದು 12 ತಿಂಗಳ ನಂತರ ಆ ರಕ್ಷಣೆ ಕ್ಷೀಣಿಸಬಹುದು ಎಂದು ಸಚಿವರು ಹೇಳಿದರು. "ಹೆಚ್ಚು ಜನರಿಗೆ ಸೋಂಕು ತಗುಲಬಹುದು ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಬಹುದು ಎಂಬುದು ನಮ್ಮ ನಿರೀಕ್ಷೆಯಾಗಿದೆ. 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯರು ಅಥವಾ ವೈದ್ಯಕೀಯವಾಗಿ ದುರ್ಬಲರಾಗಿರುವವರು ಮತ್ತೊಮ್ಮೆ ಲಸಿಕೆ ಪಡೆದುಕೊಳ್ಳಲಿ" ಎಂದು ಸಚಿವರು ಸಲಹೆ ನೀಡಿದರು.
ಏತನ್ಮಧ್ಯೆ, ಕೋವಿಡ್ -19 ಚಿಕಿತ್ಸೆಗಾಗಿ ಬಾಯಿಯ ಮೂಲಕ ನೀಡಬಹುದಾದ ಆಂಟಿವೈರಲ್ ಔಷಧಿ ಪ್ಯಾಕ್ಸ್ಲೋವಿಡ್ ಅನ್ನು ಅಕ್ಟೋಬರ್ನಿಂದ ಸಿಂಗಾಪುರದಲ್ಲಿ ಬಳಸಲು ಆರೋಗ್ಯ ವಿಜ್ಞಾನ ಪ್ರಾಧಿಕಾರ ಸಂಪೂರ್ಣ ಅನುಮೋದನೆ ನೀಡಿದೆ ಎಂದು ವರದಿ ತಿಳಿಸಿದೆ. ಈ ಮಾತ್ರೆಯು ವಯಸ್ಕ ರೋಗಿಗಳು ಸೌಮ್ಯ ಮತ್ತು ಮಧ್ಯಮ ಕೋವಿಡ್ -19 ನಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯನ್ನು ಮತ್ತು ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ : ಅಫ್ಘಾನ್ ನಿರಾಶ್ರಿತರಿಗೆ ದೇಶ ತೊರೆಯುವಂತೆ ಸೂಚಿಸಿದ ಪಾಕಿಸ್ತಾನ; ನ.1ರ ನಂತರ ಗಡಿಪಾರು