ತೈಪೆ(ತೈವಾನ್): ಸಾಂಕ್ರಾಮಿಕ ರೋಗ ಕೋವಿಡ್-19 ಹುಟ್ಟಿಕೊಂಡು 3 ವರ್ಷಗಳು ಗತಿಸಿದರೂ ಸೋಂಕಿನ ಮೂಲ ಇನ್ನೂ ನಿಗೂಢ. ಆರಂಭದಲ್ಲಿ ಕೊರೊನಾ ವೈರಸ್ ಬಾವಲಿಗಳಿಂದ ತಗುಲಿದೆ, ಬಳಿಕ ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎಂದು ಜಾಗತಿಕವಾಗಿ ಚರ್ಚೆಯಾಗಿತ್ತು. ಬಳಿಕ ಮಾರಣಾಂತಿಕ ಸೋಂಕು ಚೀನಾದ ವುಹಾನ್ ಪ್ರಾಂತದ ಸಮುದ್ರ ಖಾದ್ಯ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟವಾಗುವ ಸೋಂಕಿತ ರಕೂನ್ ತಳಿಯ ನಾಯಿಗಳಿಂದ ಕೋವಿಡ್ ಸೋಂಕು ಹರಡಿರುವ ಸಾಧ್ಯತೆಯಿದೆ ಎಂದು ಅಂತಾರಾಷ್ಟ್ರೀಯ ವೈರಸ್ ತಜ್ಞರ ತಂಡ ವರದಿ ಮಾಡಿತ್ತು. ಆದರೆ ಈಗ ಕೋವಿಡ್-19 ವೈರಸ್ ಮನುಷ್ಯರಿಂದ ಹುಟ್ಟಿಕೊಂಡಿರಬಹುದು ಎಂದು ಚೀನಾದ ವಿಜ್ಞಾನಿಯೊಬ್ಬರು ಹೇಳಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಬೀಜಿಂಗ್ ಯೂನಿವರ್ಸಿಟಿ ಆಫ್ ಕೆಮಿಕಲ್ ಟೆಕ್ನಾಲಜಿಯ ವಿಜ್ಞಾನಿ ಟಾಂಗ್ ಯಿಗಾಂಗ್ ಅವರು "ವುಹಾನ್‌ನ ಸೀಫುಡ್ ಮಾರ್ಕೆಟ್‌ನಿಂದ ತೆಗೆದ ಮಾದರಿಗಳ ಅನುವಂಶಿಕ ಅನುಕ್ರಮಗಳು ಕೊರೊನಾ ವೈರಸ್ ಸೋಂಕಿತ ರೋಗಿಗಳಿಗೆ ಬಹುತೇಕ ಹೋಲಿಕೆಯಾಗುತ್ತಿವೆ ಎಂದು ವಿವರಿಸಿದರು. ಹಾಗಾಗಿ ಕೋವಿಡ್ -19 ಮನುಷ್ಯರಿಂದ ಹುಟ್ಟಿಕೊಂಡಿರಬಹುದು" ಎಂದು ಇದು ಸೂಚಿಸುತ್ತದೆ ಎಂದಿದ್ದಾರೆ.
ವೈರಸ್ ಮೂಲದ ಸಂಶೋಧನೆಗೆ ಸಂಬಂಧಿಸಿದಂತೆ ಚೀನಾದ ಸ್ಟೇಟ್ ಕೌನ್ಸಿಲ್ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಟಾಂಗ್, ಜನವರಿ 2020ರಿಂದ ಮಾರ್ಚ್ 2020ರ ನಡುವೆ ಮಾರುಕಟ್ಟೆಯಲ್ಲಿ 1,300 ಕ್ಕೂ ಹೆಚ್ಚು ಪರಿಸರ ಮತ್ತು ಹೆಪ್ಪುಗಟ್ಟಿದ ಪ್ರಾಣಿಗಳ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಸಂಶೋಧಕರು ಪರಿಸರ ಮಾದರಿಗಳಿಂದ ವೈರಸ್‌ನ ಮೂರು ತಳಿಗಳನ್ನು ಪ್ರತ್ಯೇಕಿಸಿದ್ದಾರೆ. ರಕೂನ್ ನಾಯಿಗಳು ಕೋವಿಡ್ ವೈರಸ್‌ನ ಮೂಲವೆಂದು ಸೂಚಿಸಿದ ಇತ್ತೀಚಿನ ಅಧ್ಯಯನಗಳನ್ನು ಸಾಬೀತುಪಡಿಸಲು ಇನ್ನೂ ಸಾಕಷ್ಟು ಪುರಾವೆಗಳಿಲ್ಲ ಎಂದು ಅವರು ಹೇಳಿದರು.
ಲ್ಯಾಬ್ ಸೋರಿಕೆ ಅಸಂಭವ: ಅದೇ ಸಮಾರಂಭದಲ್ಲಿ ಮಾತನಾಡಿದ ಚೀನಿ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ಸಂಶೋಧಕ, ಝೌ ಲೀ "ಕೋವಿಡ್ ಮೊದಲು ಪತ್ತೆಯಾದ ಸ್ಥಳವು ವೈರಸ್ ಹುಟ್ಟಿದ ಮೂಲ ಸ್ಥಳವಾಗಿರಬೇಕಾಗಿಲ್ಲ" ಎಂದು ವಾದಿಸಿದ್ದಾರೆ. ಅಲ್ಲದೇ ವೈರಸ್‌ನ ಮೂಲವನ್ನು ಪತ್ತೆ ಹಚ್ಚಲು ಜಾಗತಿಕ ವೈಜ್ಞಾನಿಕ ಸಹಯೋಗಕ್ಕೆ ಅವರು ಕರೆ ನೀಡಿದರು. ಜತೆಗೆ ಲ್ಯಾಬ್ ಸೋರಿಕೆ ಸಿದ್ಧಾಂತವನ್ನು ನಿರಾಕರಿಸಿದ ಅವರು ಇದು ಅತ್ಯಂತ ಅಸಂಭವವಾಗಿದೆ ಎಂದು ಹೇಳಿದರು.
ಡೇಟಾಕ್ಕಾಗಿ ಬೇಡಿಕೆ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‌ಒ) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಇತ್ತೀಚೆಗೆ ಸಾಂಕ್ರಾಮಿಕ ರೋಗವು ಹೇಗೆ ಪ್ರಾರಂಭವಾಯಿತು ಎಂಬುದಕ್ಕೆ ಉತ್ತರವನ್ನು ಕಂಡುಕೊಳ್ಳುವವರೆಗೆ ಸಂಸ್ಥೆಯು ಪ್ರಯತ್ನವನ್ನು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ. ಪ್ರಪಂಚದಾದ್ಯಂತದ ವಿಜ್ಞಾನಿಗಳು ಮತ್ತು ಸರ್ಕಾರಗಳು ಕೋವಿಡ್ -19ಗೆ ಕಾರಣವೇನು ಎಂಬುದನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ಡೇಟಾಕ್ಕಾಗಿ ದೀರ್ಘಕಾಲದಿಂದ ಚೀನಾಕ್ಕೆ ಬೇಡಿಕೆಯಿಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ವಿಶ್ವ ಆರೋಗ್ಯ ಸಂಸ್ಥೆ (WHO) ಈ ವಿಷಯದ ಬಗ್ಗೆ ಸಾಕಷ್ಟು ಡೇಟಾವನ್ನು ಹಂಚಿಕೊಳ್ಳದ ಚೀನಾವನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿತ್ತು.
WHO ಅಧ್ಯಕ್ಷ ಘೆಬ್ರೆಯೆಸಸ್ ಜನವರಿಯಲ್ಲಿ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ನಿರ್ದೇಶಕ ಸಚಿವ ಮಾ ಕ್ಸಿಯಾವೊಯ್ ಅವರೊಂದಿಗೆ ದೇಶದಲ್ಲಿನ ಕೋವಿಡ್ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದರು ಮತ್ತು ಸಾಂಕ್ರಾಮಿಕದ ಮೂಲದ ಬಗ್ಗೆ ಆಳವಾದ ಅಧ್ಯಯನಕ್ಕೆ ಸಹಕಾರ ಕೋರಿದ್ದರು. ಅಂತಾರಾಷ್ಟ್ರೀಯ ಮಾಧ್ಯಮಗಳ ಪ್ರಕಾರ ವೈರಸ್‌ನ ಮೂಲದ ಬಗ್ಗೆ ಅಂತರರಾಷ್ಟ್ರೀಯ ತನಿಖೆಗಳನ್ನು ನಿರ್ಬಂಧಿಸಿದ್ದಕ್ಕಾಗಿ ಚೀನಾ ಈ ಹಿಂದೆ ಹೆಚ್ಚು ಟೀಕೆಗೊಳಗಾಗಿದೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ವುಹಾನ್ ಲ್ಯಾಬ್‌ಗಳ ಉಸ್ತುವಾರಿ ವಹಿಸಲು ಸೇನಾ ಜನರಲ್ ಅನ್ನು ನಿಯೋಜಿಸಿದ್ದರು. ಆದರೆ ವೈರಸ್‌ನ ಮೂಲದ ಬಗ್ಗೆ ಕ್ಸಿ ಎಂದಿಗೂ ಪಾರದರ್ಶಕವಾಗಿಲ್ಲ ಎಂದು ಪ್ರಾವಿಡೆನ್ಸ್ ಇತ್ತೀಚೆಗೆ ವರದಿ ಮಾಡಿತ್ತು. ಆದಾಗ್ಯೂ, ಸರ್ಕಾರ ಡಬ್ಲ್ಯೂಹೆಚ್‌ಒನೊಂದಿಗೆ ಪಾರದರ್ಶಕ ಮತ್ತು ಸಹಕಾರಿಯಾಗಿದೆ ಎಂದು ಚೀನಾ ನಿರಂತರವಾಗಿ ಹೇಳುತ್ತಿದೆ.
ಕೋವಿಡ್ -19ನ ಮೂಲವು ವಿವಾದಾತ್ಮಕ ವಿಷಯವಾಗಿದೆ. ವೈಜ್ಞಾನಿಕ ಸಮುದಾಯ ಮತ್ತು ವಿವಿಧ ಯುಎಸ್ ಸರ್ಕಾರಿ ಏಜೆನ್ಸಿಗಳು ವೈರಸ್ ನೈಸರ್ಗಿಕವಾಗಿ ಪ್ರಾಣಿಗಳಿಂದ ಮನುಷ್ಯರಿಗೆ ತಗುಲಿದೆ ಎಂದು ಅಭಿಪ್ರಾಯಪಟ್ಟಿವೆ. ಆದರೆ ವುಹಾನ್ ಪ್ರಯೋಗಾಲಯದಿಂದ ವೈರಸ್ ಸೋರಿಕೆಯಾಗಿದೆ ಎಂಬುದು ಇನ್ನೊಂದು ವಾದ.
ಇದನ್ನೂ ಓದಿ: ರಕೂನ್ ತಳಿಯ ನಾಯಿಗಳಿಂದ ಕೋವಿಡ್ ಸೋಂಕು ಹರಡಿರುವ ಸಾಧ್ಯತೆ!: ಅಧ್ಯಯನ