ಬೀಜಿಂಗ್: ಚೀನಾದಲ್ಲಿ ಮತ್ತೆ ಮಹಾಮಾರಿ ಕೋವಿಡ್ 19 ಆರ್ಭಟ ಶುರುವಾಗಿದೆ. ದಿನೇ ದಿನೇ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬರುತ್ತಿದ್ದು, ನಿನ್ನೆ 39,791 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 3,709 ಮಂದಿಗೆ ರೋಗಲಕ್ಷಣಗಳು ಕಂಡುಬಂದಿದ್ದು, 36,082 ಜನರಿಗೆ ರೋಗಲಕ್ಷಣಗಳಿಲ್ಲ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ತಿಳಿಸಿದೆ. ಒಂದು ದಿನದ ಹಿಂದೆ ಅಂದ್ರೆ ನ. 25 ರಂದು 35,183 ಹೊಸ ಕೊರೊನಾ ಪ್ರಕರಣಗಳು ಕಂಡುಬಂದಿದ್ದವು. ಕಳೆದ 24 ಗಂಟೆಯಲ್ಲಿ ಓರ್ವ ಸೋಂಕಿತ ಸಾವನ್ನಪ್ಪಿದ್ದಾನೆ.
ಈ ಅವಧಿಯಲ್ಲಿ ಹೊರಗಿನಿಂದ ಬಂದ ಸೋಂಕಿತರನ್ನು ಹೊರತುಪಡಿಸಿ, ಚೀನಾ 39,506 ಹೊಸ ಸ್ಥಳೀಯ ಪ್ರಕರಣಗಳನ್ನು ವರದಿ ಮಾಡಿದೆ. ಇದರಲ್ಲಿ 3,648 ಮಂದಿಗೆ ರೋಗದ ಲಕ್ಷಣಗಳಿದ್ದು, 35,858 ಮಂದಿ ಲಕ್ಷಣರಹಿತರಾಗಿದ್ದಾರೆ.
ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಹೆಚ್ಚಾದ ಕೋವಿಡ್; ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆ
ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾದಲ್ಲಿ ಮತ್ತೆ ಲಾಕ್ಡೌನ್ ಹೇರುವುದು, ಸಾಮೂಹಿಕ ಕೋವಿಡ್ 19 ಪರೀಕ್ಷೆ, ಪ್ರಯಾಣ ನಿರ್ಬಂಧಗಳು ಸೇರಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಅಲ್ಲಿನ ಸರ್ಕಾರ ಪ್ರಯತ್ನಿಸುತ್ತಿದೆ.
ಭಾರತದ ಕೋವಿಡ್ ವರದಿ: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 343 ಹೊಸ ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಕೇಸ್ಗಳ ಸಂಖ್ಯೆ 4,46,71,562 ಕ್ಕೆ ಏರಿಕೆಯಾಗಿದೆ. ಸದ್ಯಕ್ಕೆ ದೇಶದಲ್ಲಿ 5,263 ಸಕ್ರಿಯ ಸೋಂಕು ಪ್ರಕರಣಗಳಿವೆ. ನಿನ್ನೆ ಮಹಾಮಾರಿಗೆ ಕೇರಳದಲ್ಲಿ ಮೂವರು ಮತ್ತು ಮಹಾರಾಷ್ಟ್ರದಲ್ಲಿ ಒಬ್ಬರು ಬಲಿಯಾಗಿದ್ದಾರೆ.
ಸೋಂಕು ಹರಡುವಿಕೆ ಪ್ರಮಾಣ ಶೇ 0.01 ರಷ್ಟಿದ್ದು, ಚೇತರಿಕೆ ದರ ಶೇ 98.80 ರಷ್ಟಿದೆ. ಸಾವಿನ ಪ್ರಮಾಣವು ಶೇ 1.19 ಇದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 4,41,35,687 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಕೋವಿಡ್ ಸತ್ಯಾಂಶ ನಿರಾಕರಿಸುವ ಪಿತೂರಿ ಸಿದ್ಧಾಂತಗಳನ್ನು ಯುವಕರು ನಂಬುವುದು ಹೆಚ್ಚು : ಅಧ್ಯಯನ