ವಾಷಿಂಗ್ಟನ್ (ಅಮೆರಿಕ): ಭಾರತ, ಚೀನಾ, ಮೆಕ್ಸಿಕೊ ಮತ್ತು ಫಿಲಿಪ್ಪೀನ್ಸ್ ದೇಶಗಳ ನಾಗರಿಕರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಲ್ಲಿ(ಯುಎಸ್‌ಎ) ಶಾಶ್ವತ ನಿವಾಸಕ್ಕಾಗಿ ನೀಡಲಾಗುವ ಗ್ರೀನ್ ಕಾರ್ಡ್ ಪಡೆಯಲು ವರ್ಷಗಳ ಕಾಲ ಕಾಯಬೇಕಾಗಿದೆ. ದೇಶ ಆಧಾರಿತ ಕೋಟಾದಿಂದಾಗಿ ಗ್ರೀನ್ ಕಾರ್ಡ್‌ಗಳ ಹಂಚಿಕೆ ವಿಳಂಬವಾಗಿದೆ ಎಂದು ಅಮೆರಿಕದ ಅಧಿಕಾರಿ ತಿಳಿಸಿದ್ದಾರೆ.
ಉದ್ಯೋಗಕ್ಕಾಗಿ ಸೂಪರ್ ಪವರ್ ದೇಶಕ್ಕೆ ಹೋಗಿ ಅಲ್ಲಿ ಶಾಶ್ವತವಾಗಿ ನೆಲೆಸಲು ಬಯಸುವ ವಲಸಿಗರಿಗೆ ಯುನೈಟೆಡ್ ಸ್ಟೇಟ್ಸ್ ಶಾಶ್ವತ ನಿವಾಸ ಕಾರ್ಡ್‌ಗಳನ್ನು (ಗ್ರೀನ್ ಕಾರ್ಡ್‌ಗಳು) ನೀಡುತ್ತದೆ. ಆದ್ರೆ ಅವುಗಳನ್ನು ಪ್ರತಿ ದೇಶಕ್ಕೆ ನಿಗದಿತ ಸಂಖ್ಯೆಯಲ್ಲಿ (ಕೋಟಾ) ಮಾತ್ರ ನೀಡಲಾಗುತ್ತದೆ. ಪ್ರಸ್ತುತ ನೀತಿಯು ಪ್ರತಿ ದೇಶಕ್ಕೆ ಒಟ್ಟು ಅರ್ಜಿಗಳಲ್ಲಿ ಶೇ 7 ರಷ್ಟು ಮಾತ್ರ ಹಂಚಿಕೆಯಾಗಿದೆ. ಪೌರತ್ವ ಮತ್ತು ವಲಸೆ ಸೇವೆಗಳ (ಯುಎಸ್ಸಿಐಎಸ್) ನಿರ್ದೇಶಕರ ಹಿರಿಯ ಸಲಹೆಗಾರ ಡಗ್ಲಾಸ್ ರಾಂಡ್ ಇತ್ತೀಚೆಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವಲಸೆ ಕಾನೂನುಗಳ ಪ್ರಕಾರ, ಅಮೆರಿಕ ವಾರ್ಷಿಕವಾಗಿ 2,26,000 ಕುಟುಂಬ ಆದ್ಯತೆ ಮತ್ತು 1,40,000 ಗಳನ್ನು ನೀಡಬಹುದು. ಇದರಲ್ಲಿ ಶೇಕಡಾ 7ರಷ್ಟು ಅಂದರೆ ಪ್ರತಿ ದೇಶಕ್ಕೆ 25,620 ಗ್ರೀನ್ ಕಾರ್ಡ್‌ಗಳನ್ನು ಮಾತ್ರ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸಣ್ಣ ದೇಶಗಳಿಗೆ ಈ ಕೋಟಾ (ದೇಶ ಆಧಾರಿತ ಕೋಟಾ) ಸಾಕು. ಆದರೆ ಭಾರತ, ಚೀನಾ, ಮೆಕ್ಸಿಕೋ ಮತ್ತು ಫಿಲಿಪ್ಪೀನ್ಸ್‌ನಂತಹ ದೇಶಗಳಿಂದ ಈ ಕಾರ್ಡ್‌ಗಳಿಗೆ ಭಾರಿ ಸ್ಪರ್ಧೆ ಇದೆ. ಪ್ರತಿ ವರ್ಷ ಲಕ್ಷಾಂತರ ಜನರು ಇವುಗಳಿಗೆ ಅರ್ಜಿ ಸಲ್ಲಿಸುತ್ತಾರೆ. ದೇಶವಾರು ಕೋಟಾದ ಕಾರಣ ಅವರು ಶಾಶ್ವತ ನಿವಾಸ ದಾಖಲೆಗಳಿಗಾಗಿ ವರ್ಷಗಳ ಕಾಲ ಕಾಯಬೇಕಾಗುತ್ತದೆ ಎಂದು ರಾಂಡ್ ಮಾಹಿತಿ ನೀಡಿದರು.
ಈ ನಿಯಮವನ್ನು ಯುಎಸ್ ಕಾಂಗ್ರೆಸ್ ಮಾತ್ರ ಬದಲಾಯಿಸಲು ಸಾಧ್ಯ. ಕಾರ್ಡ್‌ಗಳ ವಿತರಣೆಯಲ್ಲಿ ಕೋಟಾ ನಿಗದಿಪಡಿಸಲಾಗಿದೆ. ಆದರೆ ಪ್ರತಿ ವರ್ಷ ಬೇಡಿಕೆ ಹೆಚ್ಚುತ್ತಿದೆ. ಹೀಗಾದರೆ, ನಿರ್ಬಂಧಗಳಿಗೆ ಒಳಪಟ್ಟು ಬೇಡಿಕೆಗೆ ಅನುಗುಣವಾಗಿ ಗ್ರೀನ್ ಕಾರ್ಡ್ ವಿತರಣೆ ಹೆಚ್ಚಿಸುವ ಬಗ್ಗೆ ಕಾಂಗ್ರೆಸ್ ಮರುಪರಿಶೀಲಿಸಬೇಕು ಅನ್ನೋದು ರಾಂಡ್ ಸಲಹೆ.
ಭಾರತದಿಂದ ಮಾತ್ರವಲ್ಲ, ಪ್ರಪಂಚಾದ್ಯಂತ ಗ್ರೀನ್ ಕಾರ್ಡ್‌ಗಳ ಬೇಡಿಕೆ ಹೆಚ್ಚುತ್ತಲೇ ಇದೆ. ನಿರ್ದಿಷ್ಟ ಗ್ರೀನ್ ಕಾರ್ಡ್ ವರ್ಗಕ್ಕೆ/ ಒಂದು ವರ್ಗದೊಳಗಿನ ದೇಶಕ್ಕೆ ಬೇಡಿಕೆಯು ಲಭ್ಯವಿರುವ ಸಂಖ್ಯೆಗಳ ಪೂರೈಕೆಯನ್ನು ಮೀರಿದಾಗ ಆ ವರ್ಗ ಮತ್ತು ದೇಶವನ್ನು ಓವರ್‌ಸಬ್‌ಸ್ಕ್ರೈಬ್ ಎಂದು ಪರಿಗಣಿಸಲಾಗುತ್ತದೆ.
ಗ್ರೀನ್ ಕಾರ್ಡ್‌ಗಳ ವಿತರಣೆಯನ್ನು ವೇಗಗೊಳಿಸಲು ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷವು ಇತ್ತೀಚೆಗೆ ಯುಎಸ್ ಕಾಂಗ್ರೆಸ್‌ನಲ್ಲಿ 2023 ರ ಪೌರತ್ವ ಮಸೂದೆ ಪರಿಚಯಿಸಿದೆ. ಗ್ರೀನ್ ಕಾರ್ಡ್‌ಗಳನ್ನು ವಿತರಿಸಲು ದೇಶ-ನಿರ್ದಿಷ್ಟ ಕೋಟಾಗಳನ್ನು ತೆಗೆದುಹಾಕಲು ಮತ್ತು H1B ವೀಸಾಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲು ಈ ಮಸೂದೆ ಪ್ರಸ್ತಾಪಿಸುತ್ತದೆ. ದೇಶ-ನಿರ್ದಿಷ್ಟ ಕೋಟಾಗಳ ಕಾರಣದಿಂದಾಗಿ ಹಿಂದಿನ ವರ್ಷಗಳಲ್ಲಿ ಹಂಚಿಕೆಯಾಗದೆ ಉಳಿದಿರುವ ವಲಸೆಗಾರರ ಮಕ್ಕಳು, ಸಂಗಾತಿಗಳು ಅಥವಾ ಪತಿಗಳಿಗೆ ಹಸಿರು ಕಾರ್ಡ್‌ಗಳನ್ನು ನೀಡುವ ಮೂಲಕ ಕುಟುಂಬಗಳನ್ನು ಪುನರ್ ಒಗ್ಗೂಡಿಸಲು ಇದು ಶಿಫಾರಸು ಮಾಡಿದೆ. ಕುಟುಂಬ ವಲಸೆಗಾಗಿ ದೇಶವಾರು ಕೋಟಾಗಳನ್ನು ಹೆಚ್ಚಿಸಲು ಪ್ರಸ್ತಾಪಿಸಿದೆ. ಈ ಮಸೂದೆ ಅಂಗೀಕರಿಸಿದರೆ ಲಕ್ಷಾಂತರ ಭಾರತೀಯರು, ಮೆಕ್ಸಿಕನ್ ಮತ್ತು ಚೀನಾದ ಪ್ರಜೆಗಳಿಗೆ ಉಪಯೋಗವಾಗಲಿದೆ.
ಇದನ್ನೂ ಓದಿ: ಅಮೆರಿಕದ ವಲಸೆ ನೀತಿ ಎಫೆಕ್ಟ್: ಕೆನಡಾದತ್ತ ಮುಖ ಮಾಡಿದ ಭಾರತೀಯರು!