ರೋಮ್ (ಇಟಲಿ) : ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನ ನಂತರ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕತೆಗಳಲ್ಲಿ ಚೀನಾದ ಹಸ್ತಕ್ಷೇಪ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಚೀನಾದ ಈ ಆರ್ಥಿಕ ಹಸ್ತಕ್ಷೇಪದಿಂದ ಹಲವಾರು ರಾಷ್ಟ್ರಗಳು ಪಡೆದ ಸಾಲ ಮರುಪಾವತಿಸಲಾಗದೆ ಗಂಭೀರ ಸಮಸ್ಯೆಗೆ ಸಿಲುಕಿವೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಾಲ ನೀಡುವಲ್ಲಿ ಚೀನಾ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳನ್ನೂ ಮೀರಿಸಿದೆ. ಆದರೆ ಕೋವಿಡ್ ನಂತರ ಇಂಥ ಸಾಲ ಮರುಪಾವತಿಸಲು ಆರ್ಥಿಕವಾಗಿ ದುರ್ಬಲವಾಗಿರುವ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಾಧ್ಯವಾಗುತ್ತಿಲ್ಲ. ಇಂಥ ಬಿಕ್ಕಟ್ಟಿನ ಸಮಯದಲ್ಲಿ ಸಾಲ ಮನ್ನಾ ಮಾಡುವ ಬದಲು ಸಾಲಗಳನ್ನು ಬಲವಂತವಾಗಿ ವಸೂಲಿ ಮಾಡಲು ಚೀನಾ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಆಫ್ರಿಕಾದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಆಫ್ರಿಕಾ ಖಂಡಕ್ಕೆ ಚೀನಾ ಹೆಚ್ಚಿನ ಸಾಲ ನೀಡಿದೆ. ಚೀನಾ ಇತ್ತೀಚಿನ ವರ್ಷಗಳಲ್ಲಿ ಆಫ್ರಿಕನ್ ದೇಶಗಳಿಗೆ ಅತಿದೊಡ್ಡ ದ್ವಿಪಕ್ಷೀಯ ಸಾಲ ನೀಡಿದ ರಾಷ್ಟ್ರವಾಗಿದೆ. ಬೀಜಿಂಗ್ ಇತ್ತೀಚಿನ ವರ್ಷಗಳಲ್ಲಿ ಅಂಗೋಲಾ, ಇಥಿಯೋಪಿಯಾ, ಕೀನ್ಯಾ, ರಿಪಬ್ಲಿಕ್ ಆಫ್ ಕಾಂಗೋ, ಜಿಬೌಟಿ, ಕ್ಯಾಮರೂನ್ ಮತ್ತು ಜಾಂಬಿಯಾ ಸೇರಿದಂತೆ 32 ಕ್ಕೂ ಹೆಚ್ಚು ಆಫ್ರಿಕನ್ ರಾಷ್ಟ್ರಗಳಿಗೆ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸಿನ ಸಾಲಗಳನ್ನು ಒದಗಿಸಿದೆ. ಒಟ್ಟಾಗಿ ಆಫ್ರಿಕಾ ಖಂಡವು ಚೀನಾಕ್ಕೆ $93 ಶತಕೋಟಿ ಡಾಲರ್ ಸಾಲ ಮರುಪಾವತಿ ಮಾಡಬೇಕಿದೆ. ಇದು ಮುಂಬರುವ ವರ್ಷಗಳಲ್ಲಿ $153 ಶತಕೋಟಿಯನ್ನು ತಲುಪುವ ನಿರೀಕ್ಷೆಯಿದೆ.
ಜಾಂಬಿಯಾ ದೇಶವು ಚೀನಾದ ಆರ್ಥಿಕ ದಬ್ಬಾಳಿಕೆಗೆ ಅತಿ ಹೆಚ್ಚು ಗುರಿಯಾದ ರಾಷ್ಟ್ರವಾಗಿದೆ. ಚೀನಾಗೆ 17 ಶತಕೋಟಿ ಡಾಲರ್ ಸಾಲ ಮರುಪಾವತಿಸಬೇಕಾಗಿರುವ ಜಾಂಬಿಯಾ, ಅದನ್ನು ಪಾವತಿಸಲಾಗದೆ 2020ರಲ್ಲಿ ಚೀನಾ ಸಾಲಕ್ಕೆ ಸುಸ್ತಿದಾರ ರಾಷ್ಟ್ರವಾಗಿದೆ. ಈ ಸಾಲ ಮರುಪಾವತಿಗೆ ಸಹಾಯ ಕೋರಿ ಜಾಂಬಿಯಾ ಜಿ20 ಗುಂಪಿನ ಮೊರೆ ಹೋಗಿತ್ತು. ಆದರೆ ಚೀನಾದ ಇದಕ್ಕೂ ಅಡ್ಡಗಾಲು ಹಾಕಿದೆ.
ಮತ್ತೊಂದು ಆಫ್ರಿಕನ್ ರಾಷ್ಟ್ರವಾದ ಕೀನ್ಯಾ, ಚೀನಾದ ಅಧಿಕ ಸಾಲದ ಕಾರಣದಿಂದಾಗಿ ಗಮನಾರ್ಹ ಆಂತರಿಕ ಅಸ್ಥಿರತೆಯನ್ನು ಎದುರಿಸುತ್ತಿದೆ. ಕೀನ್ಯಾದ ಹೆಚ್ಚುತ್ತಿರುವ ಚೀನೀ ಸಾಲಗಳು ಆಫ್ರಿಕನ್ ರಾಷ್ಟ್ರದಲ್ಲಿ ಕೆಲವು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತಿವೆ. ಕೀನ್ಯಾದ ಸುಮಾರು ಮೂರನೇ ಒಂದು ಭಾಗದಷ್ಟು ಸಾಲವನ್ನು ಬೀಜಿಂಗ್ ನೀಡಿದೆ. ಕೀನ್ಯಾದ ಸರ್ಕಾರಗಳು ವಾಸ್ತವಕ್ಕಿಂತಲೂ ಹೆಚ್ಚಿಗೆ ಮೌಲ್ಯೀಕರಿಸಲಾದ ಯೋಜನೆಗಳಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಸಾಲಗಳನ್ನು ಚೀನಾದಿಂದ ಪಡೆದುಕೊಂಡಿವೆ.
ಶ್ರೀಲಂಕಾ ಮತ್ತು ಪಾಕಿಸ್ತಾನದಂತಹ ದಕ್ಷಿಣ ಏಷ್ಯಾದ ದೇಶಗಳು ಸಹ ಚೀನಾದ ಹಣಕಾಸು ನೆರವಿನ ಕಾರಣದಿಂದ ಆರ್ಥಿಕ ಅಸ್ಥಿರತೆ ಎದುರಿಸುತ್ತಿವೆ. ಚೀನಾ ಸಾಲದ ಕಾರಣದಿಂದ ಶ್ರೀಲಂಕಾದಲ್ಲಿ ಕಳೆದ ವರ್ಷ ಒಂದು ತಿಂಗಳ ಕಾಲ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಗಿತ್ತು. ಆಗ ಶ್ರೀಲಂಕಾದ ಜನತೆ ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಬೀಜಿಂಗ್ ಒಂದು ವರ್ಷದ ಹಿಂದೆ ಒಪ್ಪಿಕೊಂಡಿದ್ದ 1.5 ಬಿಲಿಯನ್ ಡಾಲರ್ ಕ್ರೆಡಿಟ್ ಲೈನ್ ವಿಸ್ತರಿಸಲು ನಿರಾಕರಿಸಿತ್ತು. ದೇಶಕ್ಕೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು $ 1 ಬಿಲಿಯನ್ ಡಾಲರ್ ಸಾಲ ನೀಡುವ ಒಪ್ಪಂದವನ್ನು ಸಹ ಚೀನಾ ಕಡೆಗಣಿಸಿತು ಎಂದು ಸ್ವತಃ ಶ್ರೀಲಂಕಾ ಅಧ್ಯಕ್ಷರೇ ಹೇಳಿದ್ದರು.
ಚೀನಾ ಪಾಕಿಸ್ತಾನದ ಪರಮ ಮಿತ್ರನಾಗಿದೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಸೇರಿದಂತೆ ಇನ್ನೂ ಹಲವಾರು ಪಾಕಿಸ್ತಾನದ ಯೋಜನೆಗಳಲ್ಲಿ ಚೀನಾ ಬೃಹತ್ ಹೂಡಿಕೆ ಮಾಡಿದೆ. ಆದರೆ ಚೀನಾದೊಂದಿಗಿನ ಸೌಹಾರ್ದಯುತ ದ್ವಿಪಕ್ಷೀಯ ಸಂಬಂಧ ಕಾರಣದಿಂದ ಪಾಕಿಸ್ತಾನ ತನ್ನ ಆರ್ಥಿಕ ಸ್ವಾತಂತ್ರ್ಯವನ್ನೇ ಕಳೆದುಕೊಂಡಿದೆ. ಸದ್ಯ ಪಾಕಿಸ್ತಾನ ಆರ್ಥಿಕತೆಯು ಚೀನಾದ ನಿರ್ದೇಶನದಂತೆ ಸಾಗುತ್ತಿರುವಂತೆ ಕಾಣಿಸುತ್ತಿದೆ. ಇಷ್ಟಾದರೂ ವಿದ್ಯುತ್ ಖರೀದಿಯ ಒಪ್ಪಂದಗಳನ್ನು ಮರುಸಂಧಾನ ಮಾಡುವಂತೆ ಕೇಳಿದ ಇಸ್ಲಾಮಾಬಾದ್ ಮನವಿಗಳನ್ನು ಚೀನಾ ಗಣನೆಗೇ ತೆಗೆದುಕೊಂಡಿಲ್ಲ. ಇದು ಈಗಾಗಲೇ ಹೆಣಗಾಡುತ್ತಿರುವ ಪಾಕಿಸ್ತಾನದ ಆರ್ಥಿಕತೆಯನ್ನು ಇನ್ನಷ್ಟು ಹದಗೆಡಿಸಿದೆ.
ಇಂತಹ ದಬ್ಬಾಳಿಕೆಯ ವಿಧಾನಗಳ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಚೀನಾದ ಹೆಚ್ಚುತ್ತಿರುವ ಪ್ರಭಾವವು ಜಾಗತಿಕ ಆರ್ಥಿಕತೆಗೆ ಹಾನಿಕಾರಕವಾಗಿದೆ. ವಿಶ್ವದ ಎಲ್ಲ ಸಮಾನ ಮನಸ್ಕ ಪ್ರಜಾಪ್ರಭುತ್ವ ರಾಷ್ಟ್ರಗಳು ಸಾಮೂಹಿಕ ಪ್ರಯತ್ನದ ಮೂಲಕ ಚೀನಾದ ದಬ್ಬಾಳಿಕೆಯನ್ನು ಮೆಟ್ಟಿ ನಿಲ್ಲಬೇಕಿದೆ.
ಇದನ್ನೂ ಓದಿ : LACಗೆ ಸೇನೆ ಕಳುಹಿಸಿದ್ದು ರಾಹುಲ್ ಗಾಂಧಿ ಅಲ್ಲ, ಮೋದಿ: ಸಚಿವ ಎಸ್.ಜೈಶಂಕರ್