ಕೊಲಂಬಿಯಾ (ಅಮೆರಿಕ): ಮಧ್ಯ ಕೊಲಂಬಿಯಾದಲ್ಲಿ ಕಲ್ಲಿದ್ದಲು ಗಣಿಯಲ್ಲಿ ಭಯಾನಕ ಸ್ಫೋಟ ಸಂಭವಿಸಿದ್ದು, ಕನಿಷ್ಠ 11 ಕಾರ್ಮಿಕರು ಮೃತಪಟ್ಟಿದ್ದಾರೆ. ಅನೇಕರು ಗಣಿ ಮಧ್ಯದಲ್ಲಿ ಸಿಲುಕಿಕೊಂಡಿರುವುದಾಗಿ ಅಲ್ಲಿನ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಬೊಗೋಟಾದ ಉತ್ತರಕ್ಕಿರುವ ಸುಮಾರು 75 ಕಿ.ಮೀ (46 ಮೈಲು) ದೂರವಿರುವ ಸುತಟೌಸಾದ ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ಘಟನೆ ನಡೆದಿದೆ. 700 ರಿಂದ 900 ಮೀಟರ್ ಆಳದಲ್ಲಿ ಹಲವು ಸಿಬ್ಬಂದಿ ಮತ್ತು ಕಾರ್ಮಿಕರು ಸಿಲುಕಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಕುಂಡಿನಾಮಾರ್ಕಾ ಪ್ರಾಂತೀಯ ಗವರ್ನರ್ ನಿಕೋಲಾ ಗಾರ್ಸಿಯಾ ತಿಳಿಸಿದರು.
ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ರಕ್ಷಣೆಯಲ್ಲಿ ತೊಡಗಿದ್ದಾರೆ. ಗಣಿಯೊಳಗೆ ಶೋಧ ನಡೆಯುತ್ತಿದ್ದು ತುರ್ತು ಸೇವಾ ಸಿಬ್ಬಂದಿ ಗಣಿಯೊಳಗೆ ಪ್ರವೇಶಿಸಿದ್ದಾರೆ ಎಂದು ಗಾರ್ಸಿಯಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಜೈವಿಕ ಜೆಟ್ ಇಂಧನ ಆವಿಷ್ಕರಿಸಿದ ಡೆಹ್ರಾಡೂನ್ ಐಐಪಿ: ಇಂಧನ ಕೊಳ್ಳಲು 13 ದೇಶಗಳ ಆಸಕ್ತಿ
ಮೃತರ ಸಂಬಂಧಿಕರು ಮತ್ತು ಗಣಿಯೊಳಗೆ ಸಿಲುಕಿದವರ ಸಂಬಂಧಿಗಳು ತಮ್ಮವರಿಗಾಗಿ ಗಣಿ ಗೇಟ್ ಬಳಿ ಕಾಯುತ್ತಿದ್ದಾರೆ. ಸ್ಫೋಟದಿಂದಾಗಿ ಪ್ರವೇಶದ್ವಾರದಲ್ಲಿ ಹೆಚ್ಚಿನ ಪ್ರಮಾಣದ ಶಿಲಾ ಖಂಡರಾಶಿಗಳು ಬಿದ್ದಿದ್ದು, ಭೂಮಿ ಕುಸಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಭೂಕುಸಿತವಾದ ಕಾರಣ ರಕ್ಷಣಾ ಕಾರ್ಯದಲ್ಲಿ ತೊಡಗಿರುವ 100ಕ್ಕೂ ಹೆಚ್ಚು ಸಿಬ್ಬಂದಿಗೆ ಸಂತ್ರಸ್ತರನ್ನು ತಲುಪಲು ಕಷ್ಟವಾಗುತ್ತಿದೆ. ಈಗಾಗಲೇ ಇಬ್ಬರನ್ನು ರಕ್ಷಿಸಲಾಗಿದೆ. ಉಳಿದವರ ರಕ್ಷಣೆಗಾಗಿ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಗಣಿಯೊಳಗೆ ಸಿಲುಕಿದ ಕಾರ್ಮಿಕರಿಗೆ ಆಮ್ಲಜನಕದ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ತೈಲ ಮತ್ತು ಕಲ್ಲಿದ್ದಲು ಕೊಲಂಬಿಯಾದ ಪ್ರಮುಖ ರಫ್ತುಗಳಾಗಿವೆ. ಕೊಲಂಬಿಯಾದಲ್ಲಿ ಕಲ್ಲಿದ್ದಲು ಮತ್ತು ಚಿನ್ನದ ಗಣಿಗಳಲ್ಲಿ ಗಂಭೀರ ಅಪಘಾತಗಳು ಸಾಮಾನ್ಯವಾಗುತ್ತಿವೆ. ಅಕ್ರಮ ಅಥವಾ ಅನೌಪಚಾರಿಕ ಕಾರ್ಯಾಚರಣೆಗಳು ಮತ್ತು ಸೂಕ್ತ ಸುರಕ್ಷತಾ ಕ್ರಮಗಳಿಲ್ಲದೇ ಅಪಘಾತಗಳು ಸಂಭವಿಸುತ್ತಿವೆ ಎಂದು ತಿಳಿದುಬಂದಿದೆ.
ಇಂಥದ್ದೇ ಗಂಭೀರ ಸ್ವರೂಪದ ಘಟನೆಯೊಂದು 2010ರ ಜೂನ್‌ನಲ್ಲಿ ಸಂಭವಿಸಿದ್ದು, ಗಣಿ ಸ್ಫೋಟದಲ್ಲಿ 73 ಜನರು ಅಸುನೀಗಿದ್ದರು. ಕಳೆದ ಆಗಸ್ಟ್‌ನಲ್ಲಿ ಕೇಂದ್ರ ಕುಂಡಿನಾಮಾರ್ಕಾ ಇಲಾಖೆಯಲ್ಲಿ ಕುಸಿದ ಕಲ್ಲಿದ್ದಲು ಗಣಿಯಿಂದ 9 ಗಣಿಗಾರರನ್ನು ರಕ್ಷಿಸಲಾಗಿತ್ತು.
ಇದನ್ನೂ ಓದಿ: ಸ್ಪೇಸ್ ಎಕ್ಸ್ ಸ್ಟಾರ್‌ಶಿಪ್ ಕಕ್ಷೆಗೆ ತಲುಪಿಸುವ ಯತ್ನ: ಸಫಲತೆ ಸಾಧ್ಯತೆ ಶೇ 50ರಷ್ಟು ಮಾತ್ರ ಎಂದ ಮಸ್ಕ್