ಹೈದರಾಬಾದ್: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಇದೀಗ ಮತ್ತೆ ಪ್ರಚಲಿತದಲ್ಲಿದ್ದಾನೆ. ತಮ್ಮದೇ ಆದ ಕೈಲಾಸ ದೇಶದಲ್ಲಿ ನೆಲೆಸಿರುವ ನಿತ್ಯಾನಂದ ಕಳೆದ ಮೂರು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲನಾಗಿದ್ದಾರೆ. ಕಳೆದೆರಡು ದಿನಗಳ ಹಿಂದೆ ತಮ್ಮ ಕೈಲಾಸ ದೇಶದ ಪ್ರತಿನಿಧಿ ಮಾ ವಿಜಯಪ್ರಿಯ ನಿತ್ಯಾನಂದ ಜಿನಿವಾದಲ್ಲಿ ನಡೆದ ವಿಶ್ವ ಸಂಸ್ಥೆಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಡಿಯೋ ಹಂಚಿಕೊಂಡಿದ್ದರು. ಇದೀಗ ಈ ಕೈಲಾಸ ದೇಶಕ್ಕೆ ಹೋಗುವವರಿಗೆ ಇ- ಪೌರತ್ವ ನೀಡಲು ಮುಂದಾಗಿರುವುದಾಗಿ ನಿತ್ಯಾನಂದ ಘೋಷಣೆ ಹೊರಡಿಸಿದ್ದಾರೆ.
ಕ್ಯೂ ಆರ್ ಕೋಡ್ ಮೂಲಕ ಪಡೆಯಬಹುದು ಪೌರತ್ವ: ಈ ಹಿಂದೆಯೇ ತಮ್ಮ ಕೈಲಾಸ ದೇಶಕ್ಕೆ ಬರುವ ಕುರಿತು ಮುಕ್ತ ಆಹ್ವಾನ ನೀಡಿದ್ದ ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಪತಿಯಂತೆ ಬಿಂಬಿಸಿಕೊಂಡಿರುವ ನಿತ್ಯಾನಂದ ಇದೀಗ ಮತ್ತೆ ತಮ್ಮ ದೇಶಕ್ಕೆ ಜನರಿಗೆ ಆಹ್ವಾನ ನೀಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಸಂಬಂಧ ಪೋಸ್ಟ್ ಮಾಡಿರುವ ನಿತ್ಯಾನಂತ ಯುನೈಟೆಡ್ ಸ್ಟೇಟ್ ಆಫ್ ಕೈಲಾಸಕ್ಕೆ ಉಚಿತ ಪೌರತ್ವಕ್ಕೆ ಅರ್ಜಿ ಆಹ್ವಾನಿಸಿದ್ದಾರೆ. ಯುನೈಟೆಡ್ ಸ್ಟೇಟ್ ಆಫ್ ಕೈಲಾಸದ ಉಚಿತ ಪೌರತ್ವಕ್ಕೆ ಅರ್ಜಿ ಸಲ್ಲಿಸಿ ಎಂಬ ಟ್ಯಾಗ್ ಲೈನ್ ಅಡಿ ಟ್ವೀಟ್ ಮಾಡಿದ್ದು, ಇದಕ್ಕೆ ಕ್ಯೂಆರ್ ಕೋಡ್ ಅನ್ನು ನೀಡಿದ್ದು, ಇದನ್ನು ಸ್ಕಾನ್ ಮಾಡಿ ಅರ್ಜಿ ಸಲ್ಲಿಸುವಂತೆ ಮಾಹಿತಿ ನೀಡಿದ್ದಾನೆ. ಇಂಗ್ಲಿಷ್ ಮತ್ತು ತಮಿಳು ಭಾಷೆಯಲ್ಲಿ ಈ ಟ್ವೀಟ್ ಅನ್ನು ಪ್ರಟಿಸಿದ್ದು, ಎರಡರಲ್ಲೂ ಕ್ಯೂ ಆರ್ ಕೋಡ್ ಅನ್ನು ನೀಡಲಾಗಿದೆ.
ಈ ಕ್ಯೂ ಆರ್ ಕೋಡ್ ಅನ್ನು ಒಮ್ಮೆ ಸ್ಕಾನ್ ಮಾಡಿದರೆ, ಅದು ನೇರವಾಗಿ ನಿತ್ಯಾನಂದನ Kailaasa.org ಜಾಲತಾಣದ ಪೌರತ್ವ ವಿಭಾಗದ ದಾಖಲಾತಿಗೆ ಕರೆದೊಯ್ಯಲಿದೆ. ಇದರಲ್ಲಿ ನೀವು ನಿಮ್ಮ ಹೆಸರು, ಇಮೇಲ್ ವಿಳಾಸ ಸೇರಿದಂತೆ ಇನ್ನಿತರ ಮಾಹಿತಿಯನ್ನು ಭರ್ತಿ ಮಾಡಬೇಕಿದೆ.
ಶುಕ್ರವಾರ ರಾತ್ರಿ ಹಂಚಿಕೊಂಡಿದ್ದ ಟ್ವೀಟ್ನಲ್ಲಿ ನಿತ್ಯಾನಂದ, ವಿಶ್ವಸಂಸ್ಥೆಯು ನಿತ್ಯಾನಂದನ ಪ್ರಯತ್ನಗಳು ಮತ್ತು ಕಿರುಕುಳವನ್ನು ಗುರುತಿಸಿದೆ ಎಂದು ತಮ್ಮ ವಿಶ್ವಸಂಸ್ಥೆ ದಾಖಲೆಯನ್ನು ಹಂಚಿಕೊಂಡಿದ್ದಾರೆ. ವಿಶ್ವಸಂಸ್ಥೆಯು ಶೋಷಣೆಯನ್ನು ಅಂಗೀಕರಿಸುವ, ಗುರುತಿಸುವ ಮತ್ತು ಹೊರತರುವ ವರದಿಗಳ ಸರಣಿಯಲ್ಲಿ ಹತ್ತನೇ ವರದಿಯನ್ನು ಪ್ರಕಟಿಸಲಾಗಿದೆ. ಜೊತೆಗೆ ಎಸ್ಪಿಎಚ್ ಶ್ರೀ ನಿತ್ಯಾನಂದ ಪರಮಶಿವಂ ಮತ್ತು ಕೈಲಾಸ ಕೊಡುಗೆಗಳನ್ನು ಪ್ರಕಟಿಸಲಾಗಿದೆ.
ವಿಶ್ವ ಸಂಸ್ಥೆ ಹೇಳಿದ್ದೇನು?: ವಿಶ್ವಸಂಸ್ಥೆಯಲ್ಲಿ ಮಾತನಾಡಿರುವ ನಿತ್ಯಾನಂದನ ಶಿಷ್ಯೆ ಎನ್ನಲಾಗಿರುವ ಮಾ ವಿಜಯಪ್ರಿಯ ನಿತ್ಯಾನಂದ, ಹಿಂದೂ ವಿರೋಧಿ ಗುಂಪುಗಳು ನಿತ್ಯಾನಂದನಿಗೆ ಕಿರುಕುಳ ನೀಡುತ್ತಿವೆ. ಈ ಸಂಬಂದ ಭಾರತ ಸರ್ಕಾರ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಮಾತನಾಡಿದ್ದರು. ಈ ವಿಡಿಯೋ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ವಿಶ್ವಸಂಸ್ಥೆ, ಕಾಲ್ಪನಿಕ ದೇಶ ಹೇಳಿಕೆಗಳನ್ನು ನಾವು ಪರಿಗಣಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ನಿತ್ಯನಾಂದನ ಈ ಕೈಲಾಸ ದ್ವೀಪವನ್ನು ವಿಶ್ವಸಂಸ್ಥೆ ಮಾನ್ಯತೆ ಮಾಡುವುದಿಲ್ಲ ಎಂದು ಕೂಡ ತಿಳಿಸಿದೆ. ಅತ್ಯಾಚಾರ ಆರೋಪ ಹೊಂದಿರುವ ನಿತ್ಯಾನಂದ 2019ರಲ್ಲಿ ಭಾರತ ತೊರೆದು ಪಲಾಯನ ಮಾಡಿದ್ದ. 2020ರಲ್ಲಿ ದಿಢೀರ್ ಎಂದು ಬಂದ ನಿತ್ಯಾನಂದ ತಾವು ಯುನೈಟೆಡ್ ಸ್ಟೇಟ್ ಆಫ್ ಕೈಲಾಸ ಅಥವಾ ಯುಎಸ್ಕೆ ದೇಶವನ್ನು ಸ್ಥಾಪಿಸಿರುವುದಾಗಿ ತಿಳಿಸಿದ್ದರು.
ಇದನ್ನೂ ಓದಿ: 'ಕಾಲ್ಪನಿಕ ದೇಶ'ದ ಮಾತುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ: ನಿತ್ಯಾನಂದನ ಪ್ರತಿನಿಧಿ ಹೇಳಿಕೆಗೆ ವಿಶ್ವಸಂಸ್ಥೆ ಸ್ಪಷ್ಟನೆ