ವಾಷಿಂಗ್ಟನ್(ಅಮೆರಿಕ): ಪಶ್ಚಿಮ ಅಮೆರಿಕದ ವಾಯುಪ್ರದೇಶದಲ್ಲಿ ಕೆಲವು ದಿನಗಳಿಂದ ಚೀನಾದ ಶಂಕಿತ ಪತ್ತೆದಾರಿ ಬಲೂನ್ ಕಾಣಿಸಿಕೊಂಡಿದೆ. ಇದನ್ನು ಹೊಡೆದಲ್ಲಿ ಜನರಿಗೆ ಹಾನಿಯಾಗಬಹುದೆಂಬ ಭಯದಿಂದ ಅಮೆರಿಕಾ ರಕ್ಷಣಾ ಇಲಾಖೆ ಪೆಂಟಗನ್ ಹಾಗೆಯೇ ಬಿಡಲು ನಿರ್ಧರಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
"ಇದು ಚೀನಾದ ಅತಿ ಎತ್ತರದ ಬಲೂನ್ ಆಗಿದೆ ಎಂದು ಹೇಳಲಾಗುತ್ತಿದ್ದು, ಅತಿ ಸೂಕ್ಷ್ಮ ಮಾಹಿತಿ ಸಂಗ್ರಹಿಸಲು ಇದು ಆಯಾಕಟ್ಟಿನ ಜಾಗಗಳ ಮೇಲೆ ಹಾರಾಟ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಇಲ್ಲಿನ ಮೊಂಟಾನಾ ಪ್ರದೇಶದಲ್ಲಿ ಈ ಬಲೂನ್ ಪತ್ತೆಯಾಗಿದೆ. ಈ ಜಾಗವು ಮಾಲ್ಮಸ್ಟ್ರೋಮ್ ಏರ್ ಫೋರ್ಸ್ ಬೇಸ್ನಲ್ಲಿದ್ದು, ರಾಷ್ಟ್ರದ ಪರಮಾಣು ಕ್ಷಿಪಣಿ ಹೊಂದಿರುವ ಅತಿ ಮುಖ್ಯವಾದ ಸ್ಥಳಗಳಲ್ಲಿ ಒಂದಾಗಿದೆ.
ಈ ಬಲೂನ್ ಟ್ರ್ಯಾಕ್ ಮಾಡಲು ಅಮೆರಿಕ ಮುಂದಾಗಿದೆ. ಅಲ್ಲದೇ ಈ ಬಲೂನ್ ವಾಯು ಸಂಚಾರಕ್ಕಿಂತ ಎತ್ತರದಲ್ಲಿ ಪ್ರಯಾಣಿಸುತ್ತಿದೆ. ಇಲ್ಲಿಯವರೆಗೆ ಇದರಿಂದಾಗಿ ಜನರಿಗೆ ಯಾವುದೇ ತೊಂದರೆಯಾಗಿಲ್ಲ" ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಕೆಲವು ದಿನಗಳಲ್ಲಿ ರಾಷ್ಟ್ರದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಚೀನಾಕ್ಕೆ ಪ್ರಯಾಣಿಸುವ ನಿರೀಕ್ಷೆಯಿದೆ. ಇದು ಅವರ ಪ್ರಯಾಣದ ಮೇಲೆ ಪರಿಣಾಮ ಬೀರಲಿದೆಯೇ? ಎಂಬುದು ಸ್ಪಷ್ಟವಾಗಿಲ್ಲ ಮತ್ತು ಈ ಬಗ್ಗೆ ವಿದೇಶಾಂಗ ಇಲಾಖೆ ಅಧಿಕೃತವಾಗಿ ಘೋಷಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.
ಅಮೆರಿಕದ ಮಾಧ್ಯಮಗಳು ವರದಿ ಮಾಡಿರುವಂತೆ, ಈ ಬಗ್ಗೆ ಚೀನಾದೊಂದಿಗೆ ಸಂಪರ್ಕ ಸಾಧಿಸಿ ಮಾಹಿತಿ ಪಡೆಯಲು ಅಮೆರಿಕ ರಕ್ಷಣಾ ಇಲಾಖೆ ನಿರಂತರ ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ. ಶ್ವೇತಭವನವು ಆದೇಶಿಸಿದರೆ ಬಲೂನ್ ಹೊಡೆದುರುಳಿಸಲು ಯುಎಸ್ ಎಫ್ -22 ಸೇರಿದಂತೆ ಇತರ ಯುದ್ಧ ವಿಮಾನಗಳನ್ನು ಸನ್ನದ್ಧವಾಗಿಡಲಾಗಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ.
“ಈ ಬಲೂನ್ ಮೊಂಟಾನಾ ವಾಯುಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂಬ ಅಂಶವು ಮಾಲ್ಮ್‌ಸ್ಟ್ರಾಮ್ ಏರ್ ಫೋರ್ಸ್ ಬೇಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಖಂಡಾಂತರ ಕ್ಷಿಪಣಿ ಕ್ಷೇತ್ರಗಳ ಬಗ್ಗೆ ಗಮನಾರ್ಹ ಕಳವಳನ್ನುಂಟು ಮಾಡುವ ಅಂಶವಾಗಿದೆ. ಈ ಗುಪ್ತಚರ ಸಂಗ್ರಹ ಕಾರ್ಯಾಚರಣೆಯ ಭಾಗವಾಗಿದೆ. ಈ ಬಲೂನ್‌ನ ಹಾರಾಟದ ಮಾರ್ಗದ ಮೇಲೆ ನಿಗಾ ಇಡುವುದು ತುರ್ತು ಅಗತ್ಯವಾಗಿದೆ‘‘ ಎಂದು ಸ್ಟೀವ್ ಡೈನ್ಸ್, ಆರ್-ಮಾಂಟ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರಿಗೆ ಗುರುವಾರ ಕಳುಹಿಸಿದ ಪತ್ರದಲ್ಲಿ ಈ ಮೇಲಿನಂತೆ ಹೇಳಿದ್ದಾರೆ.
ಕೆಲಕಾಲ ವಿಮಾನ ಸಂಚಾರ ಬಂದ್: ಈ ಬಗ್ಗೆ ಅಮೆರಿಕದ ರಕ್ಷಣಾ ಅಧಿಕಾರಿಗಳು ಬಲೂನಿನ ಗಾತ್ರ ಇಷ್ಟೇ ಇದೆ ಎಂದು ಹೇಳದಿದ್ದರೂ ಅದು ಸಾಕಷ್ಟು ದೊಡ್ಡದಾಗಿದೆ ಎಂದು ಹೇಳಿದ್ದಾರೆ. ಅದರ ಎತ್ತರದ ಹೊರತಾಗಿಯೂ, ವಾಣಿಜ್ಯ ಪೈಲಟ್‌ಗಳು ಅದನ್ನು ನೋಡಬಹುದು ಎಂದು ಹೇಳಿದ್ದಾರೆ. ಮೊಂಟಾನಾದ ಬಿಲ್ಲಿಂಗ್ಸ್ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 1:30 ರಿಂದ ಎಲ್ಲಾ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಈ ಪ್ರದೇಶದ ಮೇಲೆ ದೊಡ್ಡದಾದ ಬಿಳಿ ಬಲೂನಿನ ಛಾಯಾಚಿತ್ರವನ್ನು ದಿ ಬಿಲ್ಲಿಂಗ್ಸ್ ಗೆಜೆಟ್ ಸೆರೆಹಿಡಿದಿದೆ. ಆದರೆ, ಅದು ಕಣ್ಗಾವಲು ಬಲೂನ್ ಎಂದು ಪೆಂಟಗನ್ ದೃಢೀಕರಿಸಿಲ್ಲ. ಬಲೂನ್ ಮೋಡಗಳ ಒಳಗೆ ಮತ್ತು ಹೊರಗೆ ತೇಲುತ್ತಿರುವುದನ್ನು ಕಾಣಬಹುದು ಮತ್ತು ಕೆಳಗಿನಿಂದ ನೇತಾಡುವ ಸೌರ ರಚನೆಯನ್ನು ಹೊಂದಿದೆ ಎಂದು ಗೆಜೆಟ್ ಛಾಯಾಗ್ರಾಹಕ ಲ್ಯಾರಿ ಮೇಯರ್ ಹೇಳಿದ್ದಾರೆ.
ಇದನ್ನೂ ಓದಿ: ವಾಲ್ಸ್ಟ್ರೀಟ್ನಲ್ಲಿ ಮುಂದುವರಿದ ಏರಿಳಿತ.. ಟೆಕ್ ಷೇರುಗಳ ಅಬ್ಬರ..ನಾಸ್ಡಾಕ್ನಲ್ಲಿ ಉತ್ಸಾಹ