ಬೀಜಿಂಗ್ (ಚೀನಾ) : ಚೀನಾ ಮತ್ತು ತೈವಾನ್ ಮಧ್ಯೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಈ ಅಂತಾರಾಷ್ಟ್ರೀಯ ಸಮುದಾಯದ ಆತಂಕದ ಮಧ್ಯೆ ಈಗ ಬೀಜಿಂಗ್ ತೈವಾನ್ ವಿರುದ್ಧ ತನ್ನ ಸಂಭಾವ್ಯ ದಾಳಿಯ ಬಗ್ಗೆ ಮತ್ತೆ ಮಾತನಾಡಿದೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಝು ಮೆಂಗ್ (Zhu Meng) ಅಥವಾ ಚೇಸಿಂಗ್ ಡ್ರೀಮ್ಸ್ ಎಂಬ ಶೀರ್ಷಿಕೆಯ ಎಂಟು ಕಂತುಗಳ ಸಾಕ್ಷ್ಯಚಿತ್ರ ಸರಣಿಯ ಮೂಲಕ ತೈವಾನ್ ಮೇಲೆ ದಾಳಿ ಮಾಡುವ ತನ್ನ ದೃಢನಿಶ್ಚಯವನ್ನು ಪ್ರದರ್ಶಿಸಿದೆ.
ಪಿಎಲ್ಎಯ 96 ನೇ ವಾರ್ಷಿಕೋತ್ಸವದ ಅಂಗವಾಗಿ ಸರ್ಕಾರಿ ಅಧೀನದ ಟಿವಿ ಸಿಸಿಟಿವಿಯಲ್ಲಿ ಪ್ರಸಾರವಾದ ಈ ಸರಣಿಯು ಮಿಲಿಟರಿ ಸಿಬ್ಬಂದಿಯ ಅಚಲ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (ಎಸ್ಸಿಎಂಪಿ) ವರದಿ ಮಾಡಿದೆ. ಸಾಕ್ಷ್ಯಚಿತ್ರವು ವಿವಿಧ ಸೇವೆಗಳು ಮತ್ತು ಸ್ಥಳಗಳಲ್ಲಿ ನಿಯೋಜಿತರಾಗಿರುವ ಹಲವಾರು ಪಿಎಲ್ಎ ಸೈನಿಕರ ವೈಯಕ್ತಿಕ ಅಭಿಪ್ರಾಯಗಳನ್ನು ತೋರಿಸುತ್ತದೆ. ಅಲ್ಲದೆ ಇದು ಮಿಲಿಟರಿ ಶಸ್ತ್ರಾಭ್ಯಾಸಗಳ ದೃಶ್ಯಾವಳಿಗಳನ್ನು ಒಳಗೊಂಡಿದೆ. ವಿಶೇಷವಾಗಿ ತೈವಾನ್ ಸುತ್ತಲೂ ನಡೆಸಲಾದ ಮಿಲಿಟರಿ ಅಭ್ಯಾಸಗಳ ದೃಶ್ಯ ಇದರಲ್ಲಿವೆ. ಇದು ಪಿಎಲ್ಎ ತನ್ನ ಶತಮಾನೋತ್ಸವದ ಗುರಿಯನ್ನು ಸಾಧಿಸುವ ಸಂಕಲ್ಪವನ್ನು ತೋರಿಸಿದೆ.
ಪಿಎಲ್ಎ ಈಸ್ಟರ್ನ್ ಥಿಯೇಟರ್ ಕಮಾಂಡ್ನ ವಾಂಗ್ ಹೈ ಸ್ಕ್ವಾಡ್ರನ್ (PLA Eastern Theatre Command's Wang Hai Squadron) ಪೈಲಟ್ ಒಬ್ಬರ ಮಾತುಗಳನ್ನು ವೀಡಿಯೊ ಸರಣಿಯಲ್ಲಿ ತೋರಿಸಲಾಗಿದೆ. ವಾಂಗ್ ಹೈ ಸ್ಕ್ವಾಡ್ರನ್ ಇದು ತೈವಾನ್ನಿಂದ ಚೀನಾದ ಮುಖ್ಯ ಭೂಭಾಗವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿದೆ.
ನುರಿತ ಜೆ -20 ಸ್ಟೆಲ್ತ್ ಫೈಟರ್ ಜೆಟ್ ಆಪರೇಟರ್ ಆಗಿರುವ ಲಿ ಪೆಂಗ್ ಹೆಸರಿನ ಯೋಧನೊಬ್ಬ ಮಾತನಾಡಿ, ಪರಿಸ್ಥಿತಿ ಬಂದರೆ ತಾನು ತೈವಾನ್ ವಿರುದ್ಧ ಆತ್ಮಾಹುತಿ ದಾಳಿ ನಡೆಸಲು ಸಿದ್ಧವಿರುವುದಾಗಿ ಹೇಳುತ್ತಾರೆ. ನಿಜವಾಗಿಯೂ ಯುದ್ಧ ಮಾಡುವಾಗ ತನ್ನಲ್ಲಿನ ಎಲ್ಲ ಮದ್ದುಗುಂಡುಗಳು ಖಾಲಿಯಾದರೆ ತನ್ನ ಫೈಟರ್ ಜೆಟ್ ಅನ್ನೇ ತನ್ನ ಅಂತಿಮ ಆಯುಧವಾಗಿ ಶತ್ರುಗಳ ಕಡೆಗೆ ನುಗ್ಗಿಸುತ್ತೇನೆ ಎಂದು ಆ ಯೋಧ ಪ್ರತಿಜ್ಞೆ ಮಾಡಿರುವುದು ವೀಡಿಯೊದಲ್ಲಿ ಕಾಣಿಸುತ್ತದೆ.
ತೈವಾನ್ ತನ್ನದೇ ರಾಷ್ಟ್ರದ ಭಾಗವೆಂದು ಬೀಜಿಂಗ್ ಬಲವಾಗಿ ಪ್ರತಿಪಾದಿಸುತ್ತದೆ ಹಾಗೂ ಬಲಪ್ರಯೋಗದ ಮೂಲಕ ತೈವಾನ್ ಅನ್ನು ತನ್ನ ಸ್ವಾಧೀನಕ್ಕೆ ಪಡೆಯಲು ಚೀನಾ ಸತತವಾಗಿ ಪ್ರಯತ್ನಿಸುತ್ತಿದೆ. ಈಗಿರುವಂತೆ ಅಮೆರಿಕ ಸೇರಿದಂತೆ ಬಹುತೇಕ ರಾಷ್ಟ್ರಗಳು ತೈವಾನ್ಗೆ ಈವರೆಗೂ ಸ್ವತಂತ್ರ ರಾಷ್ಟ್ರದ ಸ್ಥಾನಮಾನ ನೀಡಿಲ್ಲ.
ಯುಎಸ್ ಇಂಡೋ-ಪೆಸಿಫಿಕ್ ಕಮಾಂಡ್ ನ ಮಾಜಿ ಮುಖ್ಯಸ್ಥ ಫಿಲಿಪ್ ಡೇವಿಡ್ಸನ್ ಅವರಂತಹ ಕೆಲವು ವಿಶ್ಲೇಷಕರು ಹೇಳುವ ಪ್ರಕಾರ, ಪಿಎಲ್ಎ 2027ರ ಹೊತ್ತಿಗೆ ತಾನು ವಿಶ್ವ ದರ್ಜೆಯ ಮಿಲಿಟರಿಯಾಗುವ ಗುರಿಯನ್ನು ಹೊಂದಿದೆ ಮತ್ತು ಅದೇ ವರ್ಷ ತೈವಾನ್ ಮೇಲೆ ದಾಳಿ ಮಾಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : 2011ರ ನಂತರ ಜಾಗತಿಕವಾಗಿ ಅತ್ಯಧಿಕ ಮಟ್ಟಕ್ಕೇರಿದ ಅಕ್ಕಿ ಬೆಲೆ