ಬೀಜಿಂಗ್(ಚೀನಾ): ಮಂದಗತಿಯ ಆರ್ಥಿಕತೆಯನ್ನು ಮುಚ್ಚಿಡಲು ಚೀನಾ ಯತ್ನಿಸುತ್ತಿದೆಯೇ? ಉದ್ಯಮಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಕಾನೂನುಗಳನ್ನು ಜಾರಿಗೊಳಿಸಲು ಆ ದೇಶ ಮುಂದಾಗಿದೆಯೇ?. ಚೀನಾ ಪ್ರಮುಖ ಮಾರುಕಟ್ಟೆ ವಿಶ್ಲೇಷಕರೊಬ್ಬರ ಸಾಮಾಜಿಕ ಜಾಲತಾಣದ ಖಾತೆಗಳನ್ನು ಚೀನಾ ಸರ್ಕಾರ ಬಂದ್ ಮಾಡಿದ್ದು, ಈ ರೀತಿಯ ಅನುಮಾನಗಳನ್ನು ಹುಟ್ಟು ಹಾಕಿದೆ.
ಚೀನಾದ ಆರ್ಥಿಕತೆಯಲ್ಲಿ ಮಂದಗತಿಯ ಬೆಳವಣಿಗೆ, ಟೆಕ್ ಉದ್ಯಮದ ಮೇಲೆ ಸರ್ಕಾರದ ಕಟು ನೀತಿಗಳ ಪರಿಣಾಮಗಳ ಬಗ್ಗೆ ಇತ್ತೀಚೆಗೆ ಗಮನ ಸೆಳೆದಿದ್ದದವರ ಸಾಮಾಜಿಕ ಜಾಲತಾಣದ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವೀಚಾಟ್ ಸಾಮಾಜಿಕ ಜಾಲತಾಣವು ಹಾಂಗ್ ಹಾವೊ ಎಂಬುವವರ ಖಾತೆಯನ್ನು ಸ್ಥಗಿತಗೊಳಿಸಿದೆ. ಹಾಂಗ್ ಹಾವೋ ಅವರು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಕಮ್ಯುನಿಕೇಷನ್ಸ್ ಅಂಗಸಂಸ್ಥೆ ಹಾಗು ಹೂಡಿಕೆ ಬ್ಯಾಂಕ್ ಆಗಿರುವ ಬೊಕಾಮ್ ಇಂಟರ್ನ್ಯಾಷನಲ್ ಸಂಸ್ಥೆಯಲ್ಲಿ ಸಂಶೋಧನಾ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಗಿದ್ದಾರೆ.
ಹಾಂಗ್ ಹೋ ಅವರು ಚೀನಾದಿಂದ ದೊಡ್ಡ ಪ್ರಮಾಣದ ಬಂಡವಾಳ ಹೊರಗೆ ಹೋಗುತ್ತಿರುವ ಬಗ್ಗೆ ಹಾಗೂ ಚೀನಾದ ಷೇರುಮಾರುಕಟ್ಟೆಯ ಮುನ್ಸೂಚನೆಗಳ ಬಗ್ಗೆ ಪೋಸ್ಟ್ ಮಾಡಿದ ನಂತರ ಅವರ ವೀಚಾಟ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಸರ್ಕಾರದ ಇಂಟರ್ನೆಟ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ವೀಚಾಟ್ ನೋಟಿಸ್ ತಿಳಿಸಿದೆ.
ವೈಬೋ ಜಾಲತಾಣದಲ್ಲಿಯೂ ಹಾಂಗ್ ಹೋ ಅವರ ಖಾತೆಯನ್ನು ಹೊಂದಿದ್ದು, 3 ಮಿಲಿಯನ್‌ಗಿಂತಲೂ ಹೆಚ್ಚು ಹಿಂಬಾಲಕರಿದ್ದರು. ಆ ಖಾತೆಯನ್ನೂ ಕೂಡಾ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಹಲವರ ಮೇಲೆ ಇದೇ ರೀತಿಯ ಕ್ರಮವನ್ನು ಚೀನಾ ಸರ್ಕಾರ ತೆಗೆದುಕೊಂಡಿತ್ತು. ಹಾಂಗ್ ಕಾಂಗ್ ಮೂಲದ ಖಾಸಗಿ ಇಕ್ವಿಟಿ ಸಂಸ್ಥೆಯೊಂದರ ಸ್ಥಾಪಕ ಮತ್ತು ಅಧ್ಯಕ್ಷ ಶಾನ್ ವೈಜಿಯಾನ್ ಅವರು ಚೀನಾ ಸರ್ಕಾರವನ್ನು ಈ ಹಿಂದೆ ಟೀಕಿಸಿದ್ದು ಇಲ್ಲಿ ಗಮನಾರ್ಹ.
ಇದನ್ನೂ ಓದಿ: ಪುಟಿನ್ಗೆ ಕ್ಯಾನ್ಸರ್ ಚಿಕಿತ್ಸೆ; ಕೆಲದಿನಗಳ ಮಟ್ಟಿಗೆ ಆಪ್ತನಿಗೆ ಅಧಿಕಾರ ಹಸ್ತಾಂತರ ಸಾಧ್ಯತೆ