ಕರಾಚಿ (ಪಾಕಿಸ್ತಾನ): ನಗದು ಕೊರತೆಯಿಂದ ಕಂಗಾಲಾಗಿರುವ ಪಾಕಿಸ್ತಾನವು ಹಣಕಾಸು ನೆರವಿಗಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿವೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನ ಮತ್ತು ಐಎಂಎಫ್ ಮಧ್ಯೆ ನಡೆಯುತ್ತಿದ್ದ ಮಾತುಕತೆಗಳ ಕೊನೆಯ ದಿನವಾದ ಗುರುವಾರ ನಿರ್ಣಾಯಕ ಬೇಲ್ ಔಟ್ ನಿಧಿಗಳನ್ನು ಬಿಡುಗಡೆ ಮಾಡಲು ಸ್ಪಷ್ಟವಾದ ಒಪ್ಪಂದವನ್ನು ತಲುಪಲು ಸಾಧ್ಯವಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಆದಾಗ್ಯೂ ಏರುತ್ತಿರುವ ಹಣದುಬ್ಬರ ಮತ್ತು ಕಚ್ಚಾ ಉದ್ಯಮ ಸಾಮಗ್ರಿಗಳ ಕೊರತೆಯ ಮಧ್ಯೆ ದಿವಾಳಿತನ ತಡೆಯಲು ಶೀಘ್ರದಲ್ಲೇ ಒಪ್ಪಂದವೊಂದಕ್ಕೆ ತಲುಪಲಾಗುವುದು ಎಂದು ಪಾಕಿಸ್ತಾನದ ಹಣಕಾಸು ಕಾರ್ಯದರ್ಶಿ ಭರವಸೆ ವ್ಯಕ್ತಪಡಿಸಿದ್ದಾರೆ. ಪೂರ್ವಾಪೇಕ್ಷಿತ ಕ್ರಮಗಳ ಕುರಿತು ಈಗಾಗಲೇ ಐಎಂಎಫ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಹಣಕಾಸು ಕಾರ್ಯದರ್ಶಿ ಹಮದ್ ಶೇಖ್ ಹೇಳಿದ್ದಾರೆ. ಕೆಲವು ಅಂಶಗಳನ್ನು ಇನ್ನೂ ತಿಳಿಸಬೇಕಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳನ್ನು ಉಲ್ಲೇಖಿಸಿ ದೇಶದ ಸರ್ಕಾರಿ ಚಾನಲ್ ವರದಿ ಮಾಡಿದೆ. ಹತ್ತು ದಿನಗಳ ಮಾತುಕತೆಯ ನಂತರ ಐಎಂಎಫ್ ನಿಯೋಗವು ಶುಕ್ರವಾರ ದೇಶದಿಂದ ತೆರಳಲಿದೆ ಎಂದು ಅದು ಹೇಳಿದೆ.
ಪಾಕಿಸ್ತಾನದ ಆರ್ಥಿಕತೆಯು ತೀವ್ರ ಸಂಕಷ್ಟದಲ್ಲಿದ್ದು, ರಾಜಕೀಯ ಅವ್ಯವಸ್ಥೆ ಮತ್ತು ಹದಗೆಡುತ್ತಿರುವ ಭದ್ರತೆಯ ನಡುವೆ ಹೆಚ್ಚಿನ ಮಟ್ಟದ ಬಾಹ್ಯ ಸಾಲವನ್ನು ತೀರಿಸಲು ಪ್ರಯತ್ನಿಸುತ್ತಿರುವುದರಿಂದ ಪಾವತಿಗಳ ಸಮತೋಲನ ಮಾಡಲಾಗುತ್ತಿಲ್ಲ. ಪಾಕಿಸ್ತಾನದ ಕಠಿಣ ಹಣಕಾಸು ಪರಿಸ್ಥಿತಿಗಳನ್ನು ನಿವಾರಿಸಲು ಅಂತರರಾಷ್ಟ್ರೀಯ ಹಣಕಾಸು ನಿಧಿಯ ನಿಯೋಗವು ಕಳೆದ ವಾರ ಇಸ್ಲಾಮಾಬಾದ್‌ಗೆ ಬಂದಿಳಿದಿತ್ತು. ಈಗಾಗಲೇ ಒಪ್ಪಿಕೊಂಡಿರುವ ಐಎಂಎಫ್ ಬೇಲ್‌ಔಟ್ ಒಪ್ಪಂದದ ಅಡಿಯಲ್ಲಿ ಇತ್ತೀಚಿನ ಕಂತು ಹಲವು ತಿಂಗಳುಗಳಿಂದ ಸ್ಥಗಿತಗೊಂಡಿರುವುದು ಗಮನಾರ್ಹ. ದೇಶದಲ್ಲಿ ಚುನಾವಣೆಗಳು ಸಮೀಪಿಸುತ್ತಿದ್ದು ಇಂಥ ಸಮಯದಲ್ಲಿ ಹಣಕಾಸು ಸಂಕಷ್ಟದಿಂದ ತಮ್ಮನ್ನು ಪಾರು ಮಾಡುವಂತೆ ಪಾಕ್ ಸರ್ಕಾರವು ಸ್ನೇಹಪರ ರಾಷ್ಟ್ರಗಳಿಗೆ ಮನವಿ ಮಾಡಿದೆ.
ಐಎಂಎಫ್ ಷರತ್ತುಗಳನ್ನು ತಿರಸ್ಕರಿಸುವುದು ಮತ್ತು ಪಾಕಿಸ್ತಾನವನ್ನು ಆರ್ಥಿಕ ದಿವಾಳಿಯ ಅಂಚಿಗೆ ತರುವುದು ಆಡಳಿತ ಪಕ್ಷಗಳಿಗೆ ಭವಿಷ್ಯದಲ್ಲಿ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಲಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. ಆದರೆ ಐಎಂಎಫ್ ಷರತ್ತುಗಳನ್ನು ಒಪ್ಪಿದರೆ ಪಾಕಿಸ್ತಾನದಲ್ಲಿ ಜನರ ಜೀವನ ವೆಚ್ಚಗಳು ಹೆಚ್ಚಲಿವೆ. ಗುರುವಾರ ಸೆಂಟ್ರಲ್ ಬ್ಯಾಂಕ್ ತನ್ನ ವಿದೇಶಿ ವಿನಿಮಯ ಮೀಸಲು ವಾರದಲ್ಲಿ 170 ಮಿಲಿಯನ್ ಡಾಲರ್ಗೆ ಕುಸಿದಿದೆ ಎಂದು ಎಚ್ಚರಿಸಿದೆ. ಕಳೆದ ಶುಕ್ರವಾರದ ಹೊತ್ತಿಗೆ ಕೇವಲ 2.9 ಶತಕೋಟಿ ಡಾಲರ್ ವಿದೇಶಿ ವಿನಿಮಯ ಮಾತ್ರ ಪಾಕ್ ಸರ್ಕಾರದ ಬಳಿ ಉಳಿದಿದೆ.
ಪರಮಾಣು ಸಶಸ್ತ್ರ ರಾಷ್ಟ್ರವಾಗಿರುವ ಪಾಕಿಸ್ತಾನವು ತೆರಿಗೆ ಮೂಲಗಳನ್ನು ಹೆಚ್ಚಿಸಬೇಕೆಂದು, ರಫ್ತು ವಲಯದ ತೆರಿಗೆ ವಿನಾಯಿತಿಗಳನ್ನು ಕೊನೆಗೊಳಿಸಬೇಕೆಂದು ಮತ್ತು ಬಡ ಕುಟುಂಬಗಳಿಗೆ ಕಡಿಮೆ ದರದಲ್ಲಿ ಪೂರೈಸಲಾಗುತ್ತಿರುವ ಪೆಟ್ರೋಲ್, ವಿದ್ಯುತ್ ಮತ್ತು ಅನಿಲ ಬೆಲೆಗಳನ್ನು ಹೆಚ್ಚಿಸಬೇಕೆಂದು ಐಎಂಎಫ್ ಷರತ್ತು ವಿಧಿಸಿದೆ. ಸ್ನೇಹಪರ ರಾಷ್ಟ್ರಗಳಾದ ಸೌದಿ ಅರೇಬಿಯಾ, ಚೀನಾ ಮತ್ತು ಯುಎಇ ಮತ್ತು ವಿಶ್ವಬ್ಯಾಂಕ್‌ನಿಂದ ಹೆಚ್ಚಿನ ಬೆಂಬಲದ ಖಾತರಿಗಳ ಮೂಲಕ ಬ್ಯಾಂಕಿನಲ್ಲಿ ಯುಎಸ್ ಡಾಲರ್‌ಗಳ ಸುಸ್ಥಿರ ಮೊತ್ತವನ್ನು ಇರಿಸಿಕೊಳ್ಳಲು ಐಎಂಎಫ್ ಪಾಕಿಸ್ತಾನಕ್ಕೆ ಒತ್ತಾಯಿಸುತ್ತಿದೆ.
ಇದನ್ನೂ ಒದಿ: ಸಾಲ ಮರುಸ್ಥಾಪನೆಗಾಗಿ ಪಾಕಿಸ್ತಾನಕ್ಕೆ ಐಎಂಎಫ್ ಕಠಿಣ ಷರತ್ತು