ಮಾಂಟ್ರಿಯಲ್ (ಕೆನಡಾ): ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಕುರಿತಂತೆ ಎದುರಾಗಿರುವ ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆಯೂ ಕೆನಡಾವು ಇನ್ನೂ ಭಾರತದೊಂದಿಗೆ ನಿಕಟ ಸಂಬಂಧವನ್ನು ಹೊಂದಲು ಬದ್ಧವಾಗಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ ಎಂದು ಕೆನಡಾ ಮೂಲದ ಮಾಧ್ಯಮವೊಂದು ವರದಿ ಮಾಡಿದೆ.
ವಿಶ್ವಾದಾದ್ಯಂತ ಭಾರತದ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆ, ಕೆನಡಾ ಮತ್ತು ಅದರ ಮಿತ್ರರಾಷ್ಟ್ರಗಳು ಭಾರತದೊಂದಿಗೆ ಬಾಂಧವ್ಯ ಮುಂದುವರಿಸುವುದು ಅತ್ಯಂತ ಮುಖ್ಯ ಎಂದು ಟ್ರೂಡೊ ಹೇಳಿದರು. ಗುರುವಾರ ಮಾಂಟ್ರಿಯಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರೂಡೊ, ''ಕೆನಡಾ ಮತ್ತು ಅದರ ಮಿತ್ರರಾಷ್ಟ್ರಗಳು ವಿಶ್ವ ವೇದಿಕೆಯಲ್ಲಿ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಹೊಂದಿರುವ ಭಾರತದೊಂದಿಗೆ ರಚನಾತ್ಮಕ ಸಂಬಂಧವನ್ನು ಮುಂದುವರಿಸುವುದು ಅತ್ಯಂತ ಮುಖ್ಯವಾಗಿ ಭಾವಿಸುತ್ತೇನೆ ಎಂದರು.
“ಭಾರತವು ಬೆಳೆಯುತ್ತಿರುವ ಆರ್ಥಿಕ ಶಕ್ತಿ ಮತ್ತು ಪ್ರಮುಖ ಭೌಗೋಳಿಕ ರಾಜಕೀಯ ಬಲವನ್ನು ಹೊಂದಿದೆ. ನಾವು ನಮ್ಮ ಇಂಡೋ-ಪೆಸಿಫಿಕ್ ಕಾರ್ಯತಂತ್ರವನ್ನು ಪ್ರಸ್ತುತಪಡಿಸಿದಂತೆ, ಕಳೆದ ವರ್ಷವಷ್ಟೇ ನಾವು ಭಾರತದೊಂದಿಗೆ ನಿಕಟ ಸಂಬಂಧವನ್ನು ಬೆಳೆಸುವ ಬಗ್ಗೆ ತುಂಬಾ ಗಂಭೀರವಾಗಿ ಚಿಂತಿಸಿದ್ದೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
"ಅದೇ ಸಮಯದಲ್ಲಿ ನಿಸ್ಸಂಶಯವಾಗಿ, ಈ ವಿಷಯದ ಸಂಪೂರ್ಣ ಸತ್ಯವನ್ನು ನಾವು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಭಾರತವು ಕೆನಡಾದೊಂದಿಗೆ ಕೆಲಸ ಮಾಡುವ ಅಗತ್ಯವಿದೆ ಎಂದು ನಾವು ಒತ್ತಿಹೇಳಬೇಕಾಗಿದೆ" ಎಂದು ಟ್ರೂಡೊ ಉಲ್ಲೇಖಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಗುರುವಾರ ವಾಷಿಂಗ್ಟನ್ ಡಿಸಿಯಲ್ಲಿ ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ, ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರದ ಬಗ್ಗೆ ಸಾರ್ವಜನಿಕವಾಗಿ ಮಾಡಿದ ಆರೋಪಗಳನ್ನು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಪ್ರಸ್ತಾಪಿಸಿದ್ದಾರೆ ಎಂದು ಟ್ರೂಡೊ ಹೇಳಿದರು."ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು, ಕಾನೂನಿನ ನಿಯಮವನ್ನು ಗೌರವಿಸುವ ಎಲ್ಲಾ ದೇಶಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ನಾವು ಭಾರತ ಸೇರಿ ನಮ್ಮ ಎಲ್ಲಾ ಪಾಲುದಾರರೊಂದಿಗೆ ಜವಾಬ್ದಾರಿಯುತ ರೀತಿಯಲ್ಲಿ ಮುನ್ನಡೆಯುತ್ತಿದ್ದೇವೆ'' ಎಂದು ಟ್ರೂಡೊ ತಿಳಿಸಿದರು.
ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿಕೆ: ''ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಮತ್ತು ನಡೆಯುತ್ತಿರುವ ತನಿಖೆಗಳಿಗೆ ಸಂಬಂಧಿಸಿದ ಕೆನಡಾದ ಆರೋಪಗಳ ಬಗ್ಗೆ ಭಾರತ ಸ್ವತಃ ಮಾತನಾಡಬಹುದು. ಕೆನಡಾದ ತನಿಖೆಯೊಂದಿಗೆ ಸಹಕರಿಸುವಂತೆ ಯುಎಸ್ ಭಾರತಕ್ಕೆ ಒತ್ತಾಯಿಸಿದೆ ಎಂದು ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ.
“ನಾವು ಭಾರತ ಸರ್ಕಾರದೊಂದಿಗೆ ಸತತವಾಗಿ ತೊಡಗಿಸಿಕೊಂಡಿದ್ದೇವೆ. ತನಿಖೆಗೆ ಸಹಕರಿಸಲು ಅವರನ್ನು ಒತ್ತಾಯಿಸಿದ್ದೇವೆ. ಖಾಸಗಿ ರಾಜತಾಂತ್ರಿಕ ಮಾತುಕತೆಗಳಲ್ಲಿ ಅವರು ಏನು ಹೇಳುತ್ತಾರೆಂದು ನಾನು ಮಾತನಾಡುವುದಿಲ್ಲ. ನಾನು ಏನು ಹೇಳುತ್ತೇನೆ ಎಂಬುದರ ಕುರಿತು ಮಾತನಾಡುತ್ತೇನೆ. ಜೊತೆಗೆ ಕೆನಡಾದ ತನಿಖೆಯೊಂದಿಗೆ ಸಹಕರಿಸಲು ನಾವು ಅವರನ್ನು ಒತ್ತಾಯಿಸುತ್ತೇವೆ'' ಎಂದು ಅವರು ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ ವಾರದ ಆರಂಭದಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿ ಸ್ಫೋಟಕ ಹೇಳಿಕೆಯನ್ನು ನೀಡಿದ್ದರು. ಆದಾಗ್ಯೂ, ಭಾರತವು ಈ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಇದನ್ನು 'ಅಸಂಬದ್ಧ' ಮತ್ತು 'ಪ್ರಚೋದಿತ' ಎಂದು ಭಾರತ ಕರೆದಿತ್ತು.
ಇದನ್ನೂ ಓದಿ: ವಾಷಿಂಗ್ಟನ್ ಡಿಸಿಯಲ್ಲಿ ಸಚಿವ ಜೈಶಂಕರ್... ಅಮೆರಿಕಾ ವಿದೇಶಾಂಗ ಸಚಿವರ ಜೊತೆ ಇಂದು ಚರ್ಚೆ