ಓಕ್ಸಾಕಾ( ಮೆಕ್ಸಿಕೋ): ಮೆಕ್ಸಿಕನ್ ರಾಜ್ಯದ ಓಕ್ಸಾಕಾದಲ್ಲಿ ಶುಕ್ರವಾರ ಬಸ್ ಅಪಘಾತ ಸಂಭವಿಸಿದ್ದು, 18 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ, ಈ ಭೀಕರ ಅಪಘಾತದಲ್ಲಿ ಮೃತಪಟ್ಟ ಬಹುತೇಕ ಪ್ರಯಾಣಿಕರು ವಲಸಿಗರು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಬಲಿಯಾದವರಲ್ಲಿ ಮೂವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ. ಇವರೆಲ್ಲರೂ ವೆನೆಜುವೆಲಾ ಮತ್ತು ಹೈಟಿಯಿಂದ ಬಂದವರು ಎಂದು ಓಕ್ಸಾಕಾ ರಾಜ್ಯದ ಅಟಾರ್ನಿ ಜನರಲ್ ಮಾಹಿತಿ ನೀಡಿದ್ದಾರೆ. ಕನಿಷ್ಠ 27 ಜನರು ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.
ಫೇಸ್‌ಬುಕ್‌ನಲ್ಲಿ ಅಧಿಕಾರಿಗಳು ಪೋಸ್ಟ್ ಮಾಡಿದ ಚಿತ್ರಗಳು ಭೀಕರತೆಯನ್ನು ತೋರಿಸುತ್ತಿವೆ. ಪರ್ವತ ಪ್ರದೇಶದಲ್ಲಿರುವ ಓಕ್ಸಾಕಾ - ಕ್ವಾಕ್ನೋಪಾಲನ್ ಹೆದ್ದಾರಿಯ ತಿರುವಿನಲ್ಲಿ ದೊಡ್ಡ ಬಸ್ ಪಲ್ಟಿಯಾಗಿದೆ ಮತ್ತು ಹೆಚ್ಚು ಹಾನಿಯಾಗಿದೆ. ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತ ಸ್ಥಳೀಯ ಕಾಲಮಾನ ಮುಂಜಾನೆ 5 ಗಂಟೆಗೆ ಸುಮಾರಿಗೆ ನಡೆದಿದೆ ಎಂದು ವರದಿಯಾಗಿದೆ.
ಸ್ಥಳೀಯ ಅಧಿಕಾರಿಗಳು ಹೇಳುವ ಪ್ರಕಾರ, ದಕ್ಷಿಣ ಮೆಕ್ಸಿಕೋದಲ್ಲಿ ವಲಸಿಗರು ಪ್ರಯಾಣಿಸುತ್ತಿದ್ದ ಟ್ರಕ್ ಪಲ್ಟಿಯಾಗಿದ್ದರಿಂದ ಮಗು ಸೇರಿದಂತೆ ಕನಿಷ್ಠ ಹತ್ತು ಕ್ಯೂಬನ್ ವಲಸಿಗರು ಸಾವನ್ನಪ್ಪಿದ್ದರು. ಅಂತಾರಾಷ್ಟ್ರೀಯ ಮಾಧ್ಯಮವೊಂದರ ಪ್ರಕಾರ, ವೆನೆಜುವೆಲಾ ಮತ್ತು ಹೈಟಿ ಹೆಚ್ಚಿನ ಸಂಖ್ಯೆಯ ವಲಸಿಗರು, ಮೆಕ್ಸಿಕೋದ ಉತ್ತರದ ಕಡೆಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅಭದ್ರತೆ ಮತ್ತು ಆರ್ಥಿಕ ಬಿಕ್ಕಟ್ಟಿನಿಂದಾಗಿ ಇವರು ಹೊಟ್ಟೆ ಪಾಡು ಮತ್ತು ಹೊಸ ಜೀವನಕ್ಕಾಗಿ ಪಲಾಯನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಅಪಘಾತ ಹಾಗೂ ಹೆಚ್ಚುತ್ತಿರುವ ವಲಸಿಗರ ಕಾಟದ ಬಗ್ಗೆ ಪ್ರತಿಕ್ರಿಯಿಸಲು ಅಮೆರಿಕ ಹಾಗೂ ಮೆಕ್ಸಿಕನ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಮೆಕ್ಸಿಕೋ ಗಡಿ ಮೂಲಕ ಬಹುತೇಕ ವಲಸಿಗರು ಅಮೆರಿಕ ಪ್ರವೇಶಿಸಲು ಪ್ರಯತ್ನ ಮಾಡುತ್ತಾರೆ. ಅಕ್ರಮ ಗಡಿ ದಾಟುವುದನ್ನು ತಡೆಯಲು ಅಮೆರಿಕ ಹರಸಾಹಸ ಪಡುತ್ತಿದೆ. ಆಹಾರದ ಕೊರತೆ ಮತ್ತು ಆರೋಗ್ಯ ರಕ್ಷಣೆಗಾಗಿ ವೆನೆಜುವೆಲಾದಿಂದ 7.7 ಮಿಲಿಯನ್‌ಗಿಂತಲೂ ಹೆಚ್ಚು ಜನರು ವಲಸೆ ಹೋಗುತ್ತಿದ್ದಾರೆ. (ಎಎನ್ಐ)
ಇದನ್ನು ಓದಿ:ಭೀಕರ ಬಸ್ ಅಪಘಾತ: 21 ಮಂದಿ ಸಾವು
ಮಂಗಳವಾರವಷ್ಟೇ ಇಟಲಿಯಲ್ಲಿ ಭಾರಿ ಅಪಘಾತವೊಂದು ವರದಿಯಾಗಿತ್ತು. ವೆನಿಸ್ ನಗರದ ಬಳಿ ವಿದೇಶಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು 15 ಮೀಟರ್ (50 ಅಡಿ) ಎತ್ತರದ ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ 21 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಘಟನೆಯಲ್ಲಿ 15 ಮಂದಿ ಬದುಕುಳಿದಿದ್ದರು.