ಲಂಡನ್ (ಯು.ಕೆ): ಆಂಗ್ಲರ ನಾಡಿನ ಮೂವರು ಸಹೋದರಿಯರು ಹುಟ್ಟುತ್ತಲೇ 2 ಗಿನ್ನೆಸ್ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಕಾರಣ ಕುತೂಹಲಕಾರಿಯಾಗಿದೆ. ಇವರು ಸದ್ಯ ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ಅವಧಿಗೆ ಹುಟ್ಟಿದ ಮತ್ತು ಅಷ್ಟೇ ಕಡಿಮೆ ತೂಕದ ಮಕ್ಕಳು. ರುಬಿ-ರೋಸ್, ಪೇ-ಟನ್ ಜೇನ್ ಮತ್ತು ಪೋರ್ಶಾ-ಮೇ ಹಾಪ್ಕಿನ್ಸ್ ಎಂಬುದು ಇವರ ಹೆಸರು. ಈ ಮೂವರು ಮಕ್ಕಳು ಜನಿಸಿದಾಗ ಇದ್ದದ್ದು ಕೇವಲ 1.28 ಕೆ.ಜಿ ತೂಕವಷ್ಟೇ. 2021 ರ ಫೆಬ್ರವರಿ 14 ರಂದು ಮಕ್ಕಳು ಜನಿಸಿದ್ದು, ಈಗ ಕಂದಮ್ಮಗಳು ಆರೋಗ್ಯವಾಗಿ ಖುಷಿಯಾಗಿದ್ದಾರೆ.
ಬ್ರಿಸ್ಟಲ್‌ನ ಸೌತ್‌ಮೆಡ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ತ್ರಿವಳಿಗಳು 216 ದಿನ ಕಳೆದಿದ್ದಾರೆ. ಈ ವಿಚಾರವನ್ನು ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಟಣೆ ತಿಳಿಸಿದೆ. ಇವರ ಪೈಕಿ ರುಬಿ-ರೋಸ್ ಎಂಬ ಮಗು ವಿಭಿನ್ನ ಆನುವಂಶಿಕ ದೇಹ ರಚನೆ ಹೊಂದಿದ್ದಾಳೆ. ಇನ್ನಿಬ್ಬರಾದ ಪೇಟನ್-ಜೇನ್ ಮತ್ತು ಪೋರ್ಶಾ-ಮೇ ಅವಳಿಗಳಾಗಿದ್ದಾರೆ.
"ಇವರು ತ್ರಿವಳಿಗಳೆಂದು ಪತ್ತೆ ಹಚ್ಚುವ ನಮ್ಮ ಪಯಣ, ಮತ್ತು ಈಗಿನ ವಾಸ್ತವ ನೋಡಿದ್ರೆ ಇದು ಜಗತ್ತಿನಲ್ಲೇ ಅತ್ಯಂತ ಕ್ಷಿಪ್ರಗತಿಯ ಬಾಣಂತನವಾಗಿದೆ" ಎಂದು ಮಕ್ಕಳ ತಂದೆ ಜೇಸನ್ ಹಾಪ್ಕಿನ್ಸ್ ಹೇಳುತ್ತಾರೆ. ಆದರೆ ತಾಯಿ ಮೈಕೇಲಾ ಮೂರು ಮಕ್ಕಳಿಗೆ ಜನ್ಮ ನೀಡುವ ಸಂದರ್ಭದಲ್ಲಿ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಇದನ್ನು ಅವರೇ ಹೇಳಿದ್ದಾರೆ.
"ರೂಬಿ ಬೆಳಗ್ಗೆ ಸುಮಾರು 10.33ಕ್ಕೆ ಜನಿಸಿದ್ದು ಆಕೆಯ ತೂಕ 467 ಗ್ರಾಂ ಇತ್ತು. ಆಕೆಯನ್ನು ವೈದ್ಯರು ವಿಶೇಷ ಕಾಳಜಿವಹಿಸಿ ಸಂರಕ್ಷಣೆ ಮಾಡಿದರು. ಇದಾದ ನಂತರ ನನ್ನನ್ನು ಸಿ ಸೆಕ್ಷನ್ ನಡೆಸುವ ತುರ್ತು ನಿಗಾ ಘಟಕಕ್ಕೆ ರವಾನಿಸಲಾಯಿತು. ಈ ಸಂದರ್ಭದಲ್ಲಿ ಪೇಟನ್-ಜೇನ್ ಮತ್ತು ಪೋರ್ಶಾ-ಮೇ ಎಂಬಿಬ್ಬರು ಮಕ್ಕಳಿಗೆ ರಾತ್ರಿ 12.01 ಮತ್ತು 12.02 ಕ್ಕೆ ಜನ್ಮ ನೀಡಿದೆ. ಈ ಮಕ್ಕಳು ಕ್ರಮವಾಗಿ 402 ಗ್ರಾಂ ಮತ್ತು 415 ಗ್ರಾಂ ತೂಕ ಹೊಂದಿದ್ದರು." ಎಂದು ಹೇಳಿದರು.
ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಪ್ರಕಟಣೆ ನೀಡಿರುವ ಮಾಹಿತಿಯಂತೆ, ತ್ರಿವಳಿಗಳ ಜನನದ ನಂತರ ಅವರನ್ನು ಪ್ರತ್ಯೇಕ ಇನ್‌ಕ್ಯುಬೇಟರ್‌ನಲ್ಲಿ ಇರಿಸಲಾಗಿತ್ತು. ವೈದ್ಯಕೀಯ ಸಿಬ್ಬಂದಿ ಮಧ್ಯಪ್ರವೇಶಿಸಿ ತಪಾಸಣೆ ಮಾಡುವುದಕ್ಕೂ ಮುನ್ನ ಮಕ್ಕಳು ಕನಿಷ್ಠ 10 ಸೆಕೆಂಡುಗಳ ಕಾಲ ಸ್ವತಂತ್ರವಾಗಿ ಉಸಿರಾಟ ನಡೆಸಬೇಕಿತ್ತು. ಇದರ ನಂತರವೇ ಶುಶ್ರೂಕರು ಮಕ್ಕಳಿಗೆ ಆಮ್ಲಜನಕ ನೀಡಲು ಸಾಧ್ಯವಾಗಿತ್ತು. ಈ 10 ಸೆಕೆಂಡುಗಳ ಮಹತ್ವದ ಕಾಲವಧಿಯಲ್ಲಿ ಮಕ್ಕಳು ಬದುಕುಳಿದಿದ್ದು ಮುಂದಿನ 72 ಗಂಟೆಗಳೂ ಕೂಡಾ ನಿರ್ಣಾಯಕವಾಗಿತ್ತು. ಈ ಸಂದರ್ಭದಲ್ಲಿ ವೈದ್ಯರಿಗೂ ಕೂಡಾ ಮಕ್ಕಳು ಬದುಕುಳಿಯುವ ಭರವಸೆ ಇರಲಿಲ್ಲವಂತೆ.!
ಇದನ್ನೂ ಓದಿ: ಮಧ್ಯಾಹ್ನದ ಬಿಸಿಯೂಟ ಸೇವಿಸಿ 36 ಶಾಲಾ ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು