ಲಂಡನ್: ವಾಹನದ ಇಂಧನ ಹಾಗೂ ಆಹಾರಗಳ ಬೆಲೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಬ್ರಿಟನ್ನ ಗ್ರಾಹಕ ಬೆಲೆ ಸೂಚ್ಯಂಕ (Consumer Prices Index -CPI)ವು ಜೂನ್ವರೆಗಿನ ಹಿಂದಿನ 12 ತಿಂಗಳ ಅವಧಿಯಲ್ಲಿ ಶೇ 9.4 ಕ್ಕೆ ಏರಿಕೆಯಾಗಿದೆ. ಇದು ಬ್ರಿಟನ್ನ ಕಳೆದ 40 ವರ್ಷಗಳ ಅತಿ ಹೆಚ್ಚಿನ ಹಣದುಬ್ಬರವಾಗಿದೆ.
ತಿಂಗಳ ಆಧಾರದಲ್ಲಿ ನೋಡಿದರೆ, ಜೂನ್ 2022 ರಲ್ಲಿ ದೇಶದ CPI 2021ರ ಜೂನ್ನಲ್ಲಿದ್ದ ಶೇ 0.5ಗೆ ಹೋಲಿಸಿದರೆ 2022ರ ಜೂನ್ನಲ್ಲಿ ಶೇ 0.8 ಗೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಅಂಕಿ-ಸಂಖ್ಯೆಗಳ ಸಚಿವಾಲಯ ತಿಳಿಸಿದೆ. ಇಂಧನ ಹಾಗೂ ಆಹಾರ ಬೆಲೆಗಳ ಹೆಚ್ಚಳದಿಂದ ವಾರ್ಷಿಕ ಹಣದುಬ್ಬರ ಹೆಚ್ಚಾಗಿದ್ದು, ಸೆಕೆಂಡ್ ಹ್ಯಾಂಡ್ ಕಾರುಗಳ ಬೆಲೆಗಳು ಮಾತ್ರ ಕೊಂಚ ಇಳಿಕೆಯಾಗಿವೆ ಎಂದು ಓಎನ್ಎಸ್ ಮುಖ್ಯ ಅರ್ಥಶಾಸ್ತ್ರಜ್ಞ ಗ್ರ್ಯಾಂಟ್ ಫಿಜ್ನರ್ ಹೇಳಿದ್ದಾರೆ.
ಸಾರಿಗೆ ಕ್ಷೇತ್ರದಲ್ಲಿ ವಾರ್ಷಿಕ ಹಣದುಬ್ಬರವು ಜೂನ್ 2022ರಲ್ಲಿ ಶೇ 15.2ರಷ್ಟಾಗಿದೆ. ಇದು ಜೂನ್ 2020ರ ಕೋವಿಡ್ ಲಾಕ್ಡೌನ್ ಸಮಯದಲ್ಲಿ ಮೈನಸ್ ಶೇ 1.5 ರಷ್ಟಿತ್ತು. ಸಾರಿಗೆ ಕ್ಷೇತ್ರದ ವಾಹನ ಇಂಧನಗಳ ಬೆಲೆಗಳು ವರ್ಷದಲ್ಲಿ ಶೇ 42.3 ರಷ್ಟು ಏರಿಕೆ ಕಂಡಿವೆ ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಜೂನ್ 2022ಕ್ಕೆ ಕೊನೆಗೊಂಡ ವರ್ಷದಲ್ಲಿ ಆಹಾರ ಮತ್ತು ಅಲ್ಕೊಹಾಲ್ ರಹಿತ ಪಾನೀಯಗಳ ಬೆಲೆಗಳು ಶೇ 9.8ರಷ್ಟು ಹೆಚ್ಚಾಗಿವೆ. ಇದು ಮಾರ್ಚ್ 2009ರ ನಂತರದ ಅತ್ಯಧಿಕವಾಗಿದೆ.
ಇಂಧನ ಬೆಲೆಯ ಮಿತಿಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಬಹುದಾದ ನಿರೀಕ್ಷೆಯ ಹಿನ್ನೆಲೆಯಲ್ಲಿ ಅಕ್ಟೋಬರ್ ವೇಳೆಗೆ ಹಣದುಬ್ಬರ ದರ ಶೇ 11ಕ್ಕೆ ತಲುಪಬಹುದು ಎಂದು ದೇಶದ ಕೇಂದ್ರ ಬ್ಯಾಂಕ್ ಆಗಿರುವ ದಿ ಬ್ಯಾಂಕ್ ಆಫ್ ಇಂಗ್ಲೆಂಡ್ ಹೇಳಿದೆ. ಹಣದುಬ್ಬರವನ್ನು ನಿಭಾಯಿಸಲು, ಬ್ಯಾಂಕ್ ಆಫ್ ಇಂಗ್ಲೆಂಡ್ ತನ್ನ ಮೂಲ ಬಡ್ಡಿ ದರವನ್ನು ಶೇ 1.25 ಕ್ಕೆ ಏರಿಸಿದೆ. ಇದು 2009 ರಿಂದ ಅತ್ಯಧಿಕ ಮಟ್ಟವಾಗಿದೆ.