ನವದೆಹಲಿ: ಅನೇಕ ಕಾರಣಗಳಿಂದಾಗಿ ಜಗತ್ತಿನಾದ್ಯಂತ ನೀರಿನ ಅಭಾವದ ಆತಂಕ ಇದೆ. ಹೀಗಾಗಿಯೇ ಜೀವಜಲ ಸಂರಕ್ಷಣೆಗೆ ಬಗ್ಗೆ ಜನಜಾಗೃತಿ ಹೆಚ್ಚಲಾಗುತ್ತಿದೆ. ಇದರ ಭಾಗವಾಗಿಯೇ ನೀರಿನ ಮರು ಬಳಕೆಯ ಪ್ರಯತ್ನಗಳು ಸಹ ನಡೆಯುತ್ತಿವೆ. ಶುದ್ಧೀಕರಿಸಿ ನೀರು ಉಪಯೋಗಿಸುವ ಕಾರ್ಯಗಳು ಈಗಾಗಲೇ ಆರಂಭವಾಗಿವೆ. ಈ ನಡುವೆ ಸಿಂಗಾಪುರದಲ್ಲಿ ಶುದ್ಧೀಕರಿಸಿದ ಕೊಳಚೆ ನೀರು ಮತ್ತು ಮೂತ್ರ ಮಿಶ್ರಿತ ನೀರಿನಿಂದಲೇ ಬಿಯರ್ ಉತ್ಪಾದಿಸಲಾಗುತ್ತಿದೆ.
![ಸಿಂಗಾಪುರದ ನ್ಯೂಬ್ರೂ ಬಿಯರ್](https://etvbharatimages.akamaized.net/etvbharat/prod-images/15400715_thumb455555.jpg)
ಇದು ನಂಬಲು ಅಸಾಧ್ಯವಾದರೂ ಸತ್ಯ. 'ನ್ಯೂಬ್ರೂ' ಎಂಬ ಬಿಯರ್ನ್ನು ಕೊಳಚೆ ನೀರು ಮತ್ತು ಮೂತ್ರ ಮಿಶ್ರಿತ ನೀರಿನಿಂದಲೇ ತಯಾರಿಸಲಾಗುತ್ತಿದೆ. ಇದು ಸಾಮಾನ್ಯ ಬಿಯರ್‌ನಂತೆಯೇ ಕಾಣಿಸುತ್ತದೆ ಮತ್ತು ಅಷ್ಟೇ ರುಚಿಯಾಗಿಯೂ ಇದೆಯಂತೆ. ಜರ್ಮನ್ ಬಾರ್ಲಿ ಮಾಲ್ಟ್‌ಗಳಂತಹ ಅತ್ಯುತ್ತಮ ಪದಾರ್ಥಗಳು, ಆರೊಮ್ಯಾಟಿಕ್ ಸಿಟ್ರಾ, ಕ್ಯಾಲಿಪ್ಸೊ ಹಾಪ್ಸ್, ನಾರ್ವೆಯ ಬೇಡಿಕೆಯ ಯೀಸ್ಟ್ ಬಳಸಿ ಕೊಳಚೆ ನೀರು ಮತ್ತು ಮೂತ್ರ ಮಿಶ್ರಿತ ನೀರಿನ ಬಿಯರ್ ತಯಾರಿಸಲಾಗುತ್ತದೆ.
ಮಾನದಂಡಗಳ ಪಾಲನೆ: ಸುಮಾರು 95 ಪ್ರತಿಶತದಷ್ಟು ಇಂತಹ ನೀರಿನಿಂದಲೇ 'ನ್ಯೂಬ್ರೂ' ಬಿಯರ್ ಮಾಡಲ್ಪಟ್ಟಿದೆ. ಶುದ್ಧ ಕುಡಿಯುವ ನೀರಿನ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಈ ಬಿಯರ್ ತಯಾರಿಕೆ ಬದ್ಧವಾಗಿದೆ. ಮಾತ್ರವಲ್ಲದೇ ಬಿಯರ್ ತಯಾರಿಸಲು ಬಳಸುವಷ್ಟು ಸ್ವಚ್ಛವಾಗಿದೆ ಎಂದು ಪರೀಕ್ಷೆ ಮಾಡಿಯೇ ಉತ್ಪಾದಿಸಲಾಗುತ್ತಿದೆ.
ಸಿಂಗಾಪುರ್ ಇಂಟರ್ನ್ಯಾಷನಲ್ ವಾಟರ್ ವೀಕ್ (ಎಸ್ಐಡಬ್ಲ್ಯೂಡಬ್ಲ್ಯೂ) ಸಮ್ಮೇಳನದಲ್ಲಿ ಏಪ್ರಿಲ್ 8ರಂದು ಈ ಬಿಯರ್ ಬಿಡುಗಡೆ ಮಾಡಲಾಗಿದೆ. ವಿಶೇಷ ಎಂದರೆ ಇದನ್ನು ರಾಷ್ಟ್ರೀಯ ಜಲ ಸಂಸ್ಥೆ ಪಬ್ (PUB) ಮತ್ತು ಸ್ಥಳೀಯ ಕ್ರಾಫ್ಟ್ ಬಿಯರ್ ಉತ್ಪಾದಕ ಸಂಸ್ಥೆ ಬ್ರೆವೆರ್ಕ್ಜ್ ( Brewerkz) ಬಿಡುಗಡೆ ಮಾಡಿದೆ.
ನೀರಿನ ಮರುಬಳಕೆ ಜಾಗೃತಿ ಮತ್ತು ಮರುಬಳಕೆ ಉತ್ತೇಜಿಸುವ ಉದ್ದೇಶದಿಂದ 'ನ್ಯೂಬ್ರೂ' ಬಿಯರ್ ಉತ್ಪಾದಿಸಲಾಗಿದೆ. ಬಹುಶಃ ಇದು ಸಿಂಗಾಪುರದ 'ಗ್ರೀನ್ ಬಿಯರ್' ಸಹ ಆಗಬಹುದು ಎಸ್ಐಡಬ್ಲ್ಯೂಡಬ್ಲ್ಯೂ ವ್ಯವಸ್ಥಾಪಕ ನಿರ್ದೇಶಕ ರಿಯಾನ್ ಯುಯೆನ್ ಹೇಳಿದ್ದಾರೆ.
ಇದನ್ನೂ ಓದಿ: ಗ್ರೀನ್- ಬ್ಲ್ಯಾಕ್ ಟೀ: ಇವೆರಡರಲ್ಲಿ ಯಾವುದು ನಮ್ಮ ದೇಹಕ್ಕೆ ಉತ್ತಮ ?