ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮತ್ತೊಂದು ಪೊಲೀಸ್ ಠಾಣೆಯ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ 12 ಪೊಲೀಸರು ಸಾವನ್ನಪ್ಪಿ, 40 ಕ್ಕೂ ಹೆಚ್ಚು ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ವರ್ಷದ ಎರಡನೇ ದಾಳಿ ಇದಾಗಿದೆ. ಜನವರಿಯಲ್ಲಿ ನಡೆದ ದಾಳಿಯಲ್ಲಿ 80 ಪೊಲೀಸರು ಅಸುನೀಗಿದ್ದರು ಎಂಬುದು ಆತಂಕದ ಸಂಗತಿಯಾಗಿದೆ.
ಅಫ್ಘಾನಿಸ್ತಾನದ ಹೊಂದಿಕೊಂಡಿರುವ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಸ್ವಾತ್ ಕಣಿವೆಯ ಕಬಲ್ ಪಟ್ಟಣದಲ್ಲಿನ ವಿಶೇಷ ಭಯೋತ್ಪಾದನಾ ನಿಗ್ರಹ ಕೇಂದ್ರದ ಮೇಲೆ ಈ ದಾಳಿ ನಡೆಸಲಾಗಿದೆ. ಬಾಂಬ್ ದಾಳಿಯಿಂದಾಗಿ ಇಡೀ ಕಟ್ಟಡ ನೆಲಸಮವಾಗಿದೆ. ಇದೊಂದು ಉಗ್ರ ದಾಳಿಯಾಗಿದ್ದು, ತಾಲಿಬಾನಿಗರ ಕೃತ್ಯ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಆದರೆ, ಪೊಲೀಸ್ ಅಧಿಕಾರಿಗಳು ಗ್ರೆನೇಡ್ ಮತ್ತು ಇತರ ಸ್ಫೋಟಕಗಳನ್ನು ಸಂಗ್ರಹಿಸುವ ನೆಲಮಾಳಿಗೆಯಲ್ಲಿ ಉಂಟಾದ ಎಡವಟ್ಟಿನಿಂದಾಗಿ ಈ ಘಟನೆ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ.
ಇದು ಉಗ್ರ ದಾಳಿ ಎಂಬುದು ಸಾಬೀತಾಗಿಲ್ಲ. ಆತ್ಮಹತ್ಯಾ ಬಾಂಬರ್ ಕೃತ್ಯವಾಗಿರುವ ಸಾಧ್ಯತೆ ಕಡಿಮೆ ಇದೆ ಎಂದು ಪೊಲೀಸ್ ಅಧಿಕಾರಿ ಶಾಫಿ ಉಲ್ಲಾ ತಿಳಿಸಿದ್ದಾರೆ. ಭಯೋತ್ಪಾದನಾ ನಿಗ್ರಹ ವಿಭಾಗದ ಹಿರಿಯ ಅಧಿಕಾರಿ ಖಾಲಿದ್ ಸೊಹೈಲ್ ಪ್ರಕಾರ, ಬಾಂಬ್ ದಾಳಿ ನಡೆದ ಕಾರಣ ಕಟ್ಟಡ ಸಂಪೂರ್ಣ ಕುಸಿತ ಕಂಡಿತು ಎಂದು ಹೇಳಿಕೆ ನೀಡಿದ್ದಾರೆ.
ಮೂರು ಬಾಂಬ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ 12 ಪೊಲೀಸರು ಸಾವನ್ನಪ್ಪಿದ್ದಾರೆ. 40 ಕ್ಕೂ ಅಧಿಕ ಸಿಬ್ಬಂದಿ ತೀವ್ರ ಗಾಯಗೊಂಡಿದ್ದಾರೆ. ರಾತ್ರಿ ವೇಳೆ ನಡೆದ ದಾಳಿಯಿಂದಾಗಿ ಬೆಂಕಿಯ ಜ್ವಾಲೆ ದಗದಗಿಸಿತು. ಈ ವರ್ಷದ ಆರಂಭದಿಂದ ನಡೆದ 2ನೇ ದಾಳಿ ಇದಾಗಿದೆ. ಭಯೋತ್ಪಾದನೆ ನಿಗ್ರಹ ಪೊಲೀಸ್ ಠಾಣೆಗಳ ಮೇಲೆ ಭಯೋತ್ಪಾದನೆ ಸಂಘಟನೆಯಾದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಎಂದು ಕರೆಯಲ್ಪಡುವ ಪಾಕಿಸ್ತಾನಿ ತಾಲಿಬಾನ್‌ನಿಂದ ಈ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ.
ಪ್ರಧಾನಿ ಷರೀಫ್ ಆತಂಕ: ಪೊಲೀಸ್ ಠಾಣೆ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಪ್ರಧಾನಿ ಶೆಹಬಾಜ್ ಷರೀಫ್ ಅವರು ಇದನ್ನು "ಆತ್ಮಹತ್ಯಾ ದಾಳಿ" ಎಂದು ಹೇಳಿದ್ದಾರೆ. ದೇಶದಲ್ಲಿನ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಮೊದಲ ಸಾಲಿನಲ್ಲಿ ಪೊಲೀಸರು ಇದ್ದಾರೆ. ಅವರನ್ನು ಎಂದಿಗೂ ತಡೆಯಲಾಗದು. ದಾಳಿಯನ್ನು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.
ಪೊಲೀಸ್ ಠಾಣೆಯ ಮಸೀದಿಯಲ್ಲಿ ದಾಳಿ: ಇದಕ್ಕೂ ಮೊದಲು ಅಂದರೆ ಜನವರಿಯಲ್ಲಿ, ಪೇಶಾವರದ ಪೊಲೀಸ್ ಕಾಂಪೌಂಡ್‌ನೊಳಗಿನ ಮಸೀದಿಯಲ್ಲಿ ಆತ್ಮಹತ್ಯಾ ಬಾಂಬರ್ ದಾಳಿ ನಡೆದಿತ್ತು. ಇದರಿಂದ ಇಡೀ ಕಟ್ಟಡ ಕುಸಿದು ಬಿದ್ದಿತ್ತು. ಪ್ರಾರ್ಥನೆಗೆ ಬಂದಿದ್ದ ಭಕ್ತರು, ಮೌಲ್ವಿಗಳು, ರಕ್ಷಣೆ ನೀಡಿದ್ದ ಪೊಲೀಸರು ಸೇರಿದಂತೆ 80 ಮಂದಿ ದಾರುಣವಾಗಿ ಮೃತಪಟ್ಟಿದ್ದರು. ಬಿಗಿ ಪೊಲೀಸ್ ಭದ್ರತೆಯ ಮಧ್ಯೆಯೂ ಮಸೀದಿ ಪ್ರವೇಶಿಸಿದ್ದ ಆತ್ಮಹತ್ಯಾ ಬಾಂಬರ್ ಒಳಗಡೆ ಹೋದ ಬಳಿಕ ಬಾಂಬ್ ಸ್ಫೋಟಿಸಿಕೊಂಡಿತ್ತು. ಇದು ಭೀಕರ ದುರಂತ ಸೃಷ್ಟಿಸಿತ್ತು.
ಇದಾದ ತಿಂಗಳ ಬಳಿಕ ದಕ್ಷಿಣ ಬಂದರು ನಗರವಾದ ಕರಾಚಿಯಲ್ಲಿ ಭಯೋತ್ಪಾದನಾ ಸಂಘಟನೆ ಟಿಟಿಪಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಐವರು ಉಗ್ರರು ಹತರಾಗಿದ್ದರು. ಹಲವು ಗಂಟೆಗಳ ಕಾಲ ಶೂಟೌಟ್ ನಡೆದಿತ್ತು. ಉಗ್ರ ಸಂಘಟನೆ ಪೊಲೀಸ್ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು ನಿರಂತರ ದಾಳಿ ನಡೆಸುತ್ತಿದೆ. ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಬೂಲ್ನಲ್ಲಿ ತಾಲಿಬಾನಿಗಳ ನಿಯಂತ್ರಣದ ಬಳಿಕ ಇಂತಹ ದಾಳಿಗಳು ಹೆಚ್ಚಾಗಿವೆ. ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ತಾಲಿಬಾನಿ ದಾಳಿಗಳು ನಡೆಯುತ್ತಲೇ ಇವೆ.
ಓದಿ: ಮಾರ್ಗದರ್ಶಿ ಚಿಟ್ ಫಂಡ್ : ಆಂಧ್ರಪ್ರದೇಶ ಸರ್ಕಾರದ ಕ್ರಮಕ್ಕೆ ತೆಲಂಗಾಣ ಹೈಕೋರ್ಟ್ ತಡೆ