ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಎಕ್ಸ್ಚೇಂಜ್ ಆಗಿರುವ ಬಿನಾನ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ನ ಸಿಇಒ ಹುದ್ದೆಯಿಂದ ಕೆಳಗಿಳಿಯುವುದಾಗಿ ಅದರ ಸಂಸ್ಥಾಪಕ ಚಾಂಗ್ ಪೆಂಗ್ ಝಾವೋ ಬುಧವಾರ ಘೋಷಿಸಿದ್ದಾರೆ. ಕಂಪನಿ ವಿರುದ್ಧ ಫೆಡರಲ್ ಸರ್ಕಾರದ ಆರೋಪಗಳನ್ನು ಒಪ್ಪಿಕೊಂಡ ಝಾವೋ, $ 4.3 ಬಿಲಿಯನ್ ದಂಡ ಪಾವತಿಸುವುದಾಗಿ ಮತ್ತು ಹುದ್ದೆ ತೊರೆಯುವುದಾಗಿ ಹೇಳಿದ್ದಾರೆ.
"ಕೆನಡಾ ಪ್ರಜೆಯಾಗಿರುವ ಝಾವೋ, ಬ್ಯಾಂಕ್ ಗೌಪ್ಯತಾ ಕಾಯ್ದೆ (ಬಿಎಸ್ಎ) ಉಲ್ಲಂಘಿಸಿದ್ದು, ಅಕ್ರಮ ಹಣ ವರ್ಗಾವಣೆ ವಿರೋಧಿ (ಎಎಂಎಲ್) ಕಾನೂನನ್ನು ಪಾಲಿಸಲು ವಿಫಲವಾಗಿರುವ ಬಗ್ಗೆ ತಮ್ಮ ತಪ್ಪು ತಪ್ಪೊಪ್ಪಿಕೊಂಡಿದ್ದಾರೆ ಮತ್ತು ಬಿನಾನ್ಸ್ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ" ಎಂದು ನ್ಯಾಯಾಂಗ ಇಲಾಖೆ ಮಂಗಳವಾರ ತಡರಾತ್ರಿ ಹೇಳಿಕೆಯಲ್ಲಿ ತಿಳಿಸಿದೆ.
ಬಿನಾನ್ಸ್‌ನ ಪ್ರಾದೇಶಿಕ ಮಾರುಕಟ್ಟೆಗಳ ಮಾಜಿ ಜಾಗತಿಕ ಮುಖ್ಯಸ್ಥ ರಿಚರ್ಡ್ ಟೆಂಗ್ ಅವರು ಬಿನಾನ್ಸ್‌ನ ಹೊಸ ಸಿಇಒ ಆಗಲಿದ್ದಾರೆ ಎಂದು ಝಾವೋ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. "ಬಿನಾನ್ಸ್ ಈಗ ಚಿಕ್ಕ ಮಗುವಲ್ಲ. ಅದು ತನ್ನ ಪಾಡಿಗೆ ತಾನು ನಡೆಯಲು ಮತ್ತು ಓಡಲು ಬಿಡುವ ಸಮಯ ಇದು. ಬಿನಾನ್ಸ್ ತನ್ನ ಅನುಭವದೊಂದಿಗೆ ಬೆಳೆಯುವುದನ್ನು ಮುಂದುವರಿಸಲಿದೆ ಎಂಬುದು ನನಗೆ ತಿಳಿದಿದೆ" ಎಂದು ಝಾವೋ ಬರೆದಿದ್ದಾರೆ.
"ನಮ್ಮ ಕಂಪನಿಯ ಐತಿಹಾಸಿಕ ಜ್ಞಾನ ಹೊಂದಿರುವ ಷೇರುದಾರ ಮತ್ತು ಮಾಜಿ ಸಿಇಒ ಆಗಿ ಅಮೆರಿಕದ ಕಾನೂನು ಸಂಸ್ಥೆಗಳು ನಿಗದಿಪಡಿಸಿದ ಚೌಕಟ್ಟಿಗೆ ಅನುಗುಣವಾಗಿ ಸಮಾಲೋಚಿಸಲು ನಾನು ತಂಡಕ್ಕೆ ಯಾವಾಗಲೂ ಲಭ್ಯವಿದ್ದೇನೆ" ಎಂದು ಅವರು ಹೇಳಿದರು. ನ್ಯಾಯಾಲಯದ ದಾಖಲೆಗಳ ಪ್ರಕಾರ, ಯುಎಸ್ ಕಾನೂನುಗಳ ಪಾಲನೆಗಿಂತ ಕಂಪನಿಯ ಬೆಳವಣಿಗೆ ಮತ್ತು ಲಾಭಗಳಿಗೆ ಆದ್ಯತೆ ನೀಡಲಾಗಿರುವುದನ್ನು ಬಿನಾನ್ಸ್ ಒಪ್ಪಿಕೊಂಡಿದೆ.
ಬಿನಾನ್ಸ್ 2017ರಲ್ಲಿ ಆರಂಭವಾಗಿತ್ತು. ಮನಿ ಲಾಂಡರಿಂಗ್ ತಡೆಗಟ್ಟುವ ನಿಯಂತ್ರಣಾ ಕ್ರಮಗಳು ಮತ್ತು ಕಾರ್ಯವಿಧಾನಗಳನ್ನು ಜಾರಿಗೆ ತರಲು ಬಿನಾನ್ಸ್ ವಿಫಲವಾಗಿದೆ. ಅಲ್ಲದೆ ನಿಷೇಧಿತ ನ್ಯಾಯವ್ಯಾಪ್ತಿಯಲ್ಲಿ ಯುಎಸ್ ಗ್ರಾಹಕರು ವಹಿವಾಟು ನಡೆಸುವುದನ್ನು ತಡೆಯುವ ಕಾನೂನುಗಳನ್ನು ಕಂಪನಿ ಜಾರಿಗೆ ತರಲಿಲ್ಲ.
"ಬಿನಾನ್ಸ್ ತನ್ನ ಅಪರಾಧಿಕ ವಹಿವಾಟುಗಳಿಂದಲೇ ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ವಿನಿಮಯವಾಯಿತು. ಆದರೆ ಈಗ ಅದು ಯುಎಸ್ ಇತಿಹಾಸದಲ್ಲಿಯೇ ಅತಿದೊಡ್ಡ ಮೊತ್ತದ ಕಾರ್ಪೊರೇಟ್ ದಂಡ ಪಾವತಿಸುತ್ತಿದೆ. ಹೊಸ ತಂತ್ರಜ್ಞಾನ ಬಳಸಿ ಕಾನೂನು ಉಲ್ಲಂಘಿಸುವುದು ನಿಮ್ಮನ್ನು ದೊಡ್ಡವರನ್ನಾಗಿ ಮಾಡಲ್ಲ, ಬದಲಿಗೆ ಅದು ನಿಮ್ಮನ್ನು ಅಪರಾಧಿಯನ್ನಾಗಿ ಮಾಡುತ್ತದೆ" ಎಂದು ಅಟಾರ್ನಿ ಜನರಲ್ ಮೆರಿಕ್ ಬಿ ಗಾರ್ಲ್ಯಾಂಡ್ ಹೇಳಿದರು.
ಇದನ್ನೂ ಓದಿ: ಹಳೆ ತಲೆಮಾರಿಗಿಂತ ನವಪೀಳಿಗೆಯ ವೃತ್ತಿಪರರಿಗೆ ಎಐ ಕಲಿಕೆಯತ್ತ ಹೆಚ್ಚು ಆಸಕ್ತಿ; ಲಿಂಕ್ಡ್ಇನ್ ವರದಿ