ವಾರ್ಸಾ(ಪೊಲೆಂಡ್): ರಷ್ಯಾದಲ್ಲಿ ಆಡಳಿತ ವ್ಯವಸ್ಥೆಯ ಬದಲಾವಣೆಗೆ ಇದೇ ಮೊದಲ ಬಾರಿಗೆ ಅಮೆರಿಕ ಆಗ್ರಹಿಸಿದೆ. ಇದೇ ವೇಳೆ, ಇನ್ನು ಮುಂದೆ ದೇವರಾಣೆಗೂ ವ್ಲಾಡಿಮಿರ್ ಪುಟಿನ್ ಅಧಿಕಾರದಲ್ಲಿರಲು ಸಾಧ್ಯವೇ ಇಲ್ಲ ಎಂದು ಜೋ ಬೈಡನ್ ಹೇಳಿದ್ದಾರೆ. ಅಷ್ಟು ಮಾತ್ರವಲ್ಲ, ನ್ಯಾಟೋ ಸರಹದ್ದಿನಿಂದ ದೂರವಿರುವಂತೆಯೂ ರಷ್ಯಾಗೆ ಕಠಿಣ ಪದಗಳಲ್ಲಿ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಬೆಳವಣಿಗೆ ಉಕ್ರೇನ್-ರಷ್ಯಾ ನಡುವಿನ ಭೀಕರ ಯುದ್ಧದಲ್ಲಿ ಅಮೆರಿಕದ ನೇರ ಪ್ರವೇಶವನ್ನು ಪರೋಕ್ಷವಾಗಿ ಸೂಚಿಸುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುವತ್ತ ಸಾಗಿದೆ. ಉಕ್ರೇನ್ ವಿರುದ್ಧ ರಷ್ಯಾ ಘೋಷಿಸಿರುವ ಯುದ್ಧ ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಈ ಸಂದರ್ಭದಲ್ಲೇ ರಷ್ಯಾ ಜೊತೆಗಿನ ಸುದೀರ್ಘ ಹೋರಾಟಕ್ಕೆ ಸಿದ್ಧರಾಗಿ ಎಂದು ಬೈಡನ್ ಯೂರೋಪ್‌ಗೆ ಕರೆ ಕೊಟ್ಟಿದ್ದು, ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿರುವುದು ಇಲ್ಲಿ ಸ್ಪಷ್ಟ.
ಕಳೆದ ಫೆಬ್ರವರಿ 24 ರಂದು ಉಕ್ರೇನ್ ಮೇಲೆ ಸಮರ ಸಾರಿದ ರಷ್ಯಾ ಆಕ್ರಮಣಶೀಲತೆ ನ್ಯಾಟೋ ಮತ್ತು ಪಾಶ್ಚಿಮಾತ್ಯ ದೇಶಗಳ ಒಗ್ಗಟ್ಟಿಗೆ ಕಠಿಣ ಪರೀಕ್ಷೆಯೊಡ್ಡಿದೆ. ಉಕ್ರೇನ್ ನೆರೆ ದೇಶ ಹಾಗು ನ್ಯಾಟೋ ಸದಸ್ಯತ್ವ ಪಡೆದಿರುವ ಪೊಲೆಂಡ್ ಮೇಲೆ ರಷ್ಯಾ ಆಕ್ರಮಣದ ಕಾರ್ಮೋಡ ಕವಿದಿದೆ. ಈ ಹಿನ್ನೆಲೆಯಲ್ಲಿ ಪೊಲೆಂಡ್‌ಗೆ ಸಕಲ ರೀತಿಯಲ್ಲೂ ನೆರವು ನೀಡುವ ಬಗ್ಗೆ ಅಮೆರಿಕ ಭರವಸೆ ಕೊಟ್ಟಿದೆ.
ಇದನ್ನೂ ಓದಿ: ಹಸಿವಿನಿಂದ ಬಳಲುತ್ತಿರುವ ಅನಾಥ ಮಕ್ಕಳು: 16 ಸಾವಿರ ರಷ್ಯಾ ಸೈನಿಕರ ಕೊಂದಿದ್ದೇವೆ ಎಂದ ಉಕ್ರೇನ್