ಕ್ಯಾನಬೆರಾ: ಯುರೋಪಿಯನ್ ಯೂನಿಯನ್ (ಇಯು) ಮತ್ತು ಆಸ್ಟ್ರೇಲಿಯಾ ಸರ್ಕಾರದ ಮಧ್ಯೆ ನಡೆಯಬೇಕಿದ್ದ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) ಮಾತುಕತೆಯಲ್ಲಿ ಪ್ರಗತಿ ಸಾಧಿಸಲು ವಿಫಲವಾದ ನಂತರ ಮುರಿದುಬಿದ್ದಿದೆ. ಜಪಾನ್ನ ಒಸಾಕಾದಲ್ಲಿ ನಡೆದ ಗ್ರೂಪ್ ಆಫ್ ಸೆವೆನ್ (ಜಿ 7) ವ್ಯಾಪಾರ ಸಚಿವರ ಸಭೆಯ ಹೊರಗೆ ನಡೆದ ಮಾತುಕತೆಯ ನಂತರ ಎಫ್ಟಿಎ ಬಗ್ಗೆ ಯಾವುದೇ ಒಪ್ಪಂದಕ್ಕೆ ಬರಲಾಗಲಿಲ್ಲ ಎಂದು ಆಸ್ಟ್ರೇಲಿಯಾದ ವ್ಯಾಪಾರ ಮತ್ತು ಪ್ರವಾಸೋದ್ಯಮ ಸಚಿವ ಡಾನ್ ಫಾರೆಲ್ ಭಾನುವಾರ ಹೇಳಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆಸ್ಟ್ರೇಲಿಯಾದ ಉದ್ಯಮಗಳು, ಉತ್ಪಾದಕರು, ಕಾರ್ಮಿಕರು ಮತ್ತು ಗ್ರಾಹಕರಿಗೆ ಪ್ರಯೋಜನವಾಗುವ ಇಯು ಜೊತೆಗಿನ ಒಪ್ಪಂದವನ್ನು ಅಂತಿಮಗೊಳಿಸುವ ಉದ್ದೇಶದಿಂದ ಒಸಾಕಾಗೆ ಪ್ರಯಾಣಿಸಿದ್ದೇನೆ ಎಂದು ಫಾರೆಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ದುರದೃಷ್ಟವಶಾತ್ ನಾವು ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಮಾತುಕತೆಗಳು ಮುಂದುವರಿಯಲಿದ್ದು, ಮುಂದೊಂದು ದಿನ ನಮ್ಮ ಯುರೋಪಿಯನ್ ಸ್ನೇಹಿತರಿಗೆ ಪ್ರಯೋಜನವಾಗುವ ರೀತಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕುತ್ತೇವೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದ್ಧಾರೆ.
ಜಪಾನ್ಗೆ ತೆರಳುವ ಮೊದಲು ಮಾತನಾಡಿದ್ದ ಫಾರೆಲ್, ಈ ಮಾತುಕತೆಗಳು 2024 ರ ಇಯು ಚುನಾವಣೆಗೆ ಮುಂಚಿತವಾಗಿ ಎಫ್ಟಿಎನ ಅಂತಿಮ ಆಟ ಎಂದು ಬಣ್ಣಿಸಿದ್ದರು. ಅಲ್ಲದೇ ನಂತರ ಹಲವಾರು ವರ್ಷಗಳವರೆಗೆ ಮಾತುಕತೆಗಳು ನಡೆಯದಿರಬಹುದು ಎಂದು ಅವರು ಹೇಳಿದ್ದರು. ಕೃಷಿ ಉದ್ಯಮದ ಉದಾರೀಕರಣ ಮತ್ತು ಆಸ್ಟ್ರೇಲಿಯಾದ ಗೋಮಾಂಸ, ಕುರಿ ಮಾಂಸ, ಡೈರಿ ಉತ್ಪನ್ನಗಳು ಮತ್ತು ಸಕ್ಕರೆಗೆ ಇಯು ಆಮದು ಕೋಟಾಗಳ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದೇ ಕಾರಣಕ್ಕೆ 2018 ರಲ್ಲಿ ಪ್ರಾರಂಭವಾದ ಮಾತುಕತೆಗಳಿಂದ ದೂರ ಸರಿಯುವ ನಿರ್ಧಾರಕ್ಕೆ ಆಸ್ಟ್ರೇಲಿಯಾ ಬಂದಿತ್ತು.
ಇದಕ್ಕೂ ಮುನ್ನ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದ ಕೃಷಿ ಉದ್ಯಮವನ್ನು ಪ್ರತಿನಿಧಿಸುವ ಅತ್ಯುನ್ನತ ಸಂಸ್ಥೆಯಾದ ನ್ಯಾಷನಲ್ ಫಾರ್ಮರ್ಸ್ ಫೆಡರೇಶನ್, ರೈತರಿಗೆ ಪ್ರಮುಖ ಸುಧಾರಣೆಗಳ ಬಗ್ಗೆ ಮಾತುಕತೆ ನಡೆಸದ ಹೊರತು ಇಯುನೊಂದಿಗೆ ಒಪ್ಪಂದಕ್ಕೆ ಸಹಿ ಹಾಕದಂತೆ ಸರ್ಕಾರವನ್ನು ಒತ್ತಾಯಿಸಿತ್ತು. ಇಯು ಪ್ರಸ್ತಾಪವು ಮುಂದಿನ ಅರ್ಧ ಶತಮಾನಕ್ಕೆ ಅನಾನುಕೂಲತೆಯನ್ನುಂಟು ಮಾಡುತ್ತದೆ ಎಂದು ಫಾರ್ಮರ್ಸ್ ಫೆಡರೇಶನ್ ಹೇಳಿತ್ತು. ವಿದೇಶಾಂಗ ವ್ಯವಹಾರಗಳು ಮತ್ತು ವ್ಯಾಪಾರ ಇಲಾಖೆಯ ಪ್ರಕಾರ, ಇಯು ಆಸ್ಟ್ರೇಲಿಯಾದ ಮೂರನೇ ಅತಿದೊಡ್ಡ ದ್ವಿಮುಖ ವ್ಯಾಪಾರ ಪಾಲುದಾರ ಮತ್ತು ವಿದೇಶಿ ಹೂಡಿಕೆಯ ಎರಡನೇ ಅತಿದೊಡ್ಡ ಮೂಲವಾಗಿದೆ.
ಇದನ್ನೂ ಓದಿ : 2024ರಲ್ಲಿ ನಿಧಾನವಾಗಲಿದೆ ಜಾಗತಿಕ ಆರ್ಥಿಕ ಬೆಳವಣಿಗೆ ದರ: ಐಎಂಎಫ್ ಮುನ್ಸೂಚನೆ