ವಾಷಿಂಗ್ಟನ್: ಕುಸ್ತಿ ತರಬೇತುದಾರರ ಕಠಿಣ ವರ್ತನೆಗೆ 20 ವರ್ಷದ ಯುವಕ ಬಲಿಯಾಗಿದ್ದಾನೆ. ನಿರ್ಲಕ್ಷ್ಯದ ಹೊಣೆ ಹೊತ್ತು ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಆತ ವ್ಯಾಸಂಗ ಮಾಡುತ್ತಿರುವ ವಿಶ್ವವಿದ್ಯಾನಿಲಯ $14 ಮಿಲಿಯನ್ ಡಾಲರ್ (ಭಾರತೀಯ ಕರೆನ್ಸಿ ಲೆಕ್ಕಾಚಾರದಲ್ಲಿ 110 ಕೋಟಿ ರೂ) ಪರಿಹಾರ ನೀಡಲು ಒಪ್ಪಿಕೊಂಡಿದೆ.
ಹೀಟ್ ಸ್ಟ್ರೋಕ್‌ನಿಂದ ಗ್ರ್ಯಾಂಟ್ ಬ್ರೇಸ್ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ತಮ್ಮ ಮಗನ ಸಾವಿಗೆ ಅಮೆರಿಕದ ವಿಶ್ವವಿದ್ಯಾಲಯವೇ ಕಾರಣ ಎಂದು ಕುಟುಂಬಸ್ಥರು ದೂಷಿಸಿದ್ದರು. 2020ರಲ್ಲಿ ಕೆಂಟಕಿ ವಿಶ್ವವಿದ್ಯಾಲಯದಲ್ಲಿ ಕುಸ್ತಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬ್ರೇಸ್ ಎಂಬ 20 ವರ್ಷದ ಯುವಕ ಇದರಲ್ಲಿ ಭಾಗವಹಿಸಿದ್ದ. ತರಬೇತಿಯಲ್ಲಿ ದಣಿದ ಬ್ರೇಸ್ ನೀರಿಗಾಗಿ ಬೇಡಿಕೊಂಡಿದ್ದಾನೆ. ಆದರೆ ಅಲ್ಲಿದ್ದ ಕೋಚ್‌ಗಳು ನೀರು ನೀಡಲು ನಿರಾಕರಿಸಿದ್ದರು. ತರಬೇತಿಯ ಭಾಗವೆಂದು ಹೇಳಿ ಬೇರೆಯವರಿಗೂ ನೀರು ಕೊಡದಂತೆ ತಡೆದಿದ್ದಾರೆ. ಈ ಕಾರಣದಿಂದಾಗಿ ಬ್ರೇಸ್ ನಿರ್ಜಲೀಕರಣದಿಂದ ವಿಪರೀತ ಬಳಲಿದ್ದಾನೆ. ಇದಾಗಿ ಸ್ವಲ್ಪ ಸಮಯದ ನಂತರ ಸಾವಿಗೀಡಾಗಿದ್ದನು.
ತಮ್ಮ ಮಗನ ಸಾವಿಗೆ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯೇ ನೇರ ಕಾರಣ ಎಂದು ಬ್ರೇಸ್ ಅವರ ಕುಟುಂಬ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತ್ತು. ಇದೇ ವೇಳೆ ತರಬೇತುದಾರರ ಕಠಿಣ ವರ್ತನೆಯಿಂದ ಆತ ಸಾವನ್ನಪ್ಪಿದ್ದಾನೆ ಎಂದು ತನಿಖಾ ವರದಿಯೂ ಹೇಳಿತ್ತು. ಇದರ ಪರಿಣಾಮವಾಗಿ ವಿಶ್ವವಿದ್ಯಾನಿಲಯ ಸಂತ್ರಸ್ತ ಕುಟುಂಬಕ್ಕೆ 14 ಮಿಲಿಯನ್ ಡಾಲರ್ ಪಾವತಿಸಲು ಮುಂದಾಗಿದೆ.
"ಬ್ರೇಸ್ ಅವರ ಅಕಾಲಿಕ ಮರಣಕ್ಕಾಗಿ ನಾವು ವಿಷಾದಿಸುತ್ತೇವೆ. ಅವರ ಕುಟುಂಬಕ್ಕೆ ಪರಿಹಾರ ನೀಡಲು ನಿರ್ಧರಿಸಿದ್ದೇವೆ. ಪರಿಹಾರದೊಂದಿಗೆ ಪ್ರಕರಣವನ್ನು ಇತ್ಯರ್ಥಪಡಿಸುವ ನಿರ್ಧಾರ ಮಾಡಿದ್ದೇವೆ" ಎಂದು ವಿಶ್ವವಿದ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.
"ವಿಶ್ವವಿದ್ಯಾನಿಲಯವು ಬ್ರೇಸ್ ಕುಟುಂಬದ ಅಪಾರ ನಷ್ಟವನ್ನು ಗೌರವಿಸುತ್ತದೆ. ಕಾನೂನು ಪ್ರಕ್ರಿಯೆಯ ಆರಂಭದಲ್ಲಿ ಈ ವಿಷಯವನ್ನು ಪರಿಹರಿಸುವುದು ಸೂಕ್ತ. ಬ್ರೇಸ್ ಕುಟುಂಬಕ್ಕೆ ನಾವು ಪ್ರಾಮಾಣಿಕವಾಗಿ ಸೂಕ್ತ ಪರಿಹಾರ ನೀಡುತ್ತೇವೆ" ಎಂದು ಕುಲಪತಿ ಜೆರ್ರಿ ಜಾಕ್ಸನ್ ಹೇಳಿದರು. ಅಂದು ತರಬೇತಿಯಲ್ಲಿ ಭಾಗವಹಿಸಿದ್ದ ಇಬ್ಬರು ತರಬೇತುದಾರರು ರಾಜೀನಾಮೆ ನೀಡಿದ್ದಾರೆ ಎಂದು ಇದೇ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ: ನ್ಯಾಶ್‌ವಿಲ್ಲೆ ಶಾಲೆಯಲ್ಲಿ ಗುಂಡಿನ ದಾಳಿ: ಮಕ್ಕಳು ಸೇರಿ 6 ಮಂದಿಯನ್ನು ಗುಂಡಿಕ್ಕಿ ಕೊಂದ ಯುವತಿ